ಕರ್ನಾಟಕದ ಸಿಂಘಂ ಅಣ್ಣಾಮಲೈ ಐಪಿಎಸ್; ಖಾಕಿಯಿಂದ ಕೇಸರಿತನಕ

By Naveen Kodase  |  First Published Aug 26, 2020, 1:29 PM IST

ರಾಜ್ಯ ಕಂಡ ದಕ್ಷ ಐಪಿಎಸ್ ಅಧಿಕಾರಿ, ಕರ್ನಾಟಕದ ಸಿಂಘಂ ಖ್ಯಾತಿಯ ಕೆ. ಅಣ್ಣಾಮಲೈ ಖಾಕಿ ಕಳಚಿಟ್ಟು ಕೇಸರಿ ಬಾವುಟ ಹಿಡಿದಿದ್ದಾರೆ. ಅಣ್ಣಾಮಲೈ ಬಿಜೆಪಿ ಸೇರ್ಪಡೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿವೆ. ಈ ಕುರಿತಂತೆ ಒಂದು ಅನಿಸಿಕೆ ಇಲ್ಲಿದೆ ನೋಡಿ


- ನವೀನ್ ಕೊಡಸೆ

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ IPS ಅಧಿಕಾರಿ ಕೆ. ಅಣ್ಣಾಮಲೈ ಮೇ 28, 2019ರಂದು ದಿಢೀರ್ ಎನ್ನುವಂತೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಎಲ್ಲರಿಗೂ ಒಂದು ರೀತಿಯ ಅಚ್ಚರಿ ಮೂಡಿಸಿದ್ದರು.

Latest Videos

undefined

ಒಂದು ಸುದೀರ್ಘ ಪತ್ರದ ಮೂಲಕ ರಾಜೀನಾಮೆ ವಿಚಾರ ಹಂಚಿಕೊಂಡಿದ್ದ ಅಣ್ಣಾಮಲೈ ಇದು ತಕ್ಷಣ ತೆಗೆದುಕೊಂಡ ನಿರ್ಧಾರವಲ್ಲ, 6 ತಿಂಗಳ ಸುದೀರ್ಘ ಆಲೋಚನೆಯ ಬಳಿಕ ಈ ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ. 9 ವರ್ಷಗಳ ಕಾಲ ಖಾಕಿ ತತ್ವಕ್ಕೆ ಬದ್ಧವಾಗಿ ನಡೆದುಕೊಂಡಿದ್ದೇನೆ ಇನ್ನು ಮುಂದೆ ನಾನು ಕಳೆದುಕೊಂಡ ಸಣ್ಣಪುಟ್ಟ ಸಂತೋಷಗಳನ್ನು ಮತ್ತೆ ಪಡೆಯಲು ಸಮಯ ಮೀಸಲಿಡುತ್ತೇನೆ, ಕೃಷಿ ಮಾಡುತ್ತೇನೆ ಎಂದೆಲ್ಲಾ ವಿದಾಯದ ಪತ್ರ ಬರೆದಿದ್ದರು ಅಣ್ಣಾಮಲೈ.

ಈ ಪತ್ರ ಬರೆದು ಇದೀಗ ಸರಿಯಾಗಿ ಸುಮಾರು 15 ತಿಂಗಳು ಕಳೆದಿವೆ, ಈಗ ಅಣ್ಣಾಮಲೈ ಖಾಕಿ ಕಳಚಿಟ್ಟು ನವದೆಹಲಿಯಲ್ಲಿ ಬಿಜೆಪಿ ಬಾವುಟ ಹಿಡಿದಿದ್ದಾರೆ. ಇದರೊಂದಿಗೆ ಅಣ್ಣಾಮಲೈ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಐಪಿಎಸ್ ಹುದ್ದೆಗೆ ಅಣ್ಣಾಮಲೈ ರಾಜೀನಾಮೆ ನೀಡಿದಾಗ ಅವರ ಸಾಕಷ್ಟು ಅಭಿಮಾನಿಗಳು ಅವರ ತೀರ್ಮಾನವನ್ನು ಹಿಂಪಡೆಯಿರಿ ಎಂದೆಲ್ಲಾ ಆಗ್ರಹಿಸಿದ್ದರೆ, ಮತ್ತೆ ಕೆಲವರು, ಸರ್ಕಾರದಿಂದ ಐಪಿಎಸ್ ಹುದ್ದೆಗೇರುವವರೆಗೂ ಸವಲತ್ತುಗಳನ್ನು ಪಡೆದು ಅಧಿಕಾರಿಯಾಗಿ 8-9 ವರ್ಷದೊಳಗೆ ರಾಜೀನಾಮೆ ನೀಡುವುದರಿಂದ ಸರ್ಕಾರಕ್ಕೆ ಆಗುವ ನಷ್ಟವನ್ನು ತುಂಬಿಕೊಡುವವರು ಯಾರು ಎನ್ನುವ ದಾಟಿಯ ಪ್ರಶ್ನೆಯನ್ನು ಎತ್ತಿದ್ದರು.

ನನ್ನ ಮೈಂಡ್‌ ಸೆಟ್‌ಗೆ ಬೇರೆ ಪಾರ್ಟಿ ಆಗಲ್ಲ: ಸುವರ್ಣ ನ್ಯೂಸ್ ಜತೆ ಅಣ್ಣಾಮಲೈ ಖಡಕ್ ಮಾತು

ಅದೆಲ್ಲಾ ಒಂದು ಕಡೆ ಇರಲಿ, ಇದೀಗ ಕೆ. ಅಣ್ಣಾಮಲೈ ಬಿಜೆಪಿ ಬಾವುಟ ಹಿಡಿರುವುದಕ್ಕೆ ಸಾಮಾಜಿಕ ಜಾಲತಾಣಗಲ್ಲಿ ಸಾಕಷ್ಟು ಪರವಿರೋಧಗಳು ವ್ಯಕ್ತವಾಗಿವೆ. ಸಹಜವಾಗಿಯೇ ಬಿಜೆಪಿಯ ರಾಜ್ಯನಾಯಕರು ಹಾಗೂ ಕಾರ್ಯಕರ್ತರು ಅಣ್ಣಾಮಲೈ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕರ್ನಾಟಕ ಕೇಡರ್‌ನ ನಿವೃತ್ತಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ.ಅವರಿಗೆ ಹೃದಯಪೂರ್ವಕ ಸ್ವಾಗತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮೂಲಕ ಅಣ್ಣಾಮಲೈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಇನ್ನು ಗ್ಲಾಡ್‌ಸನ್ ಅಲ್ಮೇಡಿಯಾ ಎನ್ನುವವರು ಅವರು ಬಿಜೆಪಿ ವಿರೋಧಿ ಪಾಳಯ ಸೇರಿದ್ದರೆ, ಅವರು ನಮಗೆ ಇನ್ನೂ ಸಿಂಗಂ ಆಗಿರುತ್ತಿದ್ದರು. ಈವಾಗ ನಮ್ಮ ವಿರೋಧಿ ಪಾಳಯಕ್ಕೆ ಹೋದ ಕಾರಣಕ್ಕೆ ಚಿಂಗಂ ಆಗಿದ್ದಾರೆ. ಅವರನ್ನು ಸಿಂಗಂ, ಚಿಂಗಂ ಮಾಡೋದು ನಾವೇ ಹೊರತು ಅವರಲ್ಲ. ಯಾವುದೋ ವ್ಯಕ್ತಿ ಇಂಥ ಪಕ್ಷದ ಪರ ವೋಟ್ ಹಾಕಬೇಕು, ಇಂಥದ್ದೇ ಪಕ್ಷಕ್ಕೆ ಸೇರಬೇಕು ಎಂದು ತಾಕೀತು ಮಾಡಲು ನಾವ್ಯಾರು? ಅವರಿಗೆ ಬೇಕಾದೆಡೆ ಅವರು ಹೋಗಿದ್ದಾರೆ. ಹೋಗಲಿ. ನನಗೆ ಅವರ ಮೇಲೆ ಮೆಚ್ಚುಗೆ ಯಾಕೆಂದರೆ ಹುದ್ದೆಯನ್ನು ತ್ಯಜಿಸಿ, ಅಧಿಕೃತವಾಗಿ ಒಂದು ರಾಜಕೀಯ ಪಕ್ಷವನ್ನು ಸೇರಿದ್ದಾರೆ, ಅದೂ ತರುಣಾವಸ್ಥೆಯಲ್ಲಿ. ಹುದ್ದೆಯಲ್ಲಿದ್ದು ತಮ್ಮ ಸೈದ್ಧಾಂತಿಕ ಒಲವಿನ ಪ್ರಕಾರ ಈ ದೇಶದ ಕಾನೂನು, ಸಂವಿಧಾನಕ್ಕೆ ದ್ರೋಹ ಬಗೆದು ಯಾವುದೋ ಒಂದು ಪಕ್ಷದ ಪರವಾಗಿ ಕೆಲಸ ಮಾಡಿ ಅನ್ಯಾಯವೆಸಗುವ ಅದೆಷ್ಟೋ ಲಕ್ಷಾಂತರ ಅಧಿಕಾರಿ ವರ್ಗದ ನಡುವೆ, ಇವರು ತಮಗೆ ಖ್ಯಾತಿ, ಅಸ್ಮಿತೆ ಹಾಗೂ ಪಬ್ಲಿಸಿಟಿ ತಂದುಕೊಟ್ಟ ಗೌರವಾನ್ವಿತ ಹುದ್ದೆಯನ್ನು ಬಿಟ್ಟು, ನೇರವಾಗಿ ರಾಜಕೀಯಕ್ಕೆ ಧುಮುಕಿದ್ದಾರೆ. ಅದನ್ನು ಪ್ರಶಂಸಿಸೋಣ. ಸೆಂಥಿಲ್, ಕಣ್ಣನ್ ಮುಂತಾದವರು ಬಿಜೆಪಿ ವಿರೋಧಿ ಪಾಳಯವನ್ನು ಸೇರಿದಾಗ ನಾವೂ ಸಂತಸಪಟ್ಟಿಲ್ಲವೇ? ಹಾಗೆಯೇ ಇದು. ಅದಕ್ಕೆ ವಿಪರೀತವಾಗಿ ತಲೆಕೆಡಿಸಿ, ಮೀಮ್ಸ್ ಸೃಷ್ಟಿಸಿ, ಅವರನ್ನು ಆಡಿಕೊಂಡು, ಬೈದಾಡಿಕೊಂಡು ನಾವು ಸಾಧಿಸಬೇಕಾಗಿರೋದು ಏನೂ ಇಲ್ಲ. ಅದರಿಂದ ಅವರಿಗೆ ಪಬ್ಲಿಸಿಟಿ ಸಿಗುತ್ತದೆಯೇ ಹೊರತು, ನಷ್ಟವೇನೂ ಆಗುವುದಿಲ್ಲ. ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

"

ಒಂದರ್ಥದಲ್ಲಿ ಕೆ. ಅಣ್ಣಾಮಲೈ ಅವರು ಖಾಕಿ ತೊಟ್ಟಿದ್ದಾಗ ಯುವಕರು ಅವರನ್ನು ತಮ್ಮ ಆದರ್ಶವನ್ನಾಗಿ ಇಟ್ಟುಕೊಂಡಿದ್ದರು, ಆದರೆ ಇದೀಗ ಒಂದು ಪಕ್ಷಕ್ಕೆ ಸೇರಿದ ಬಳಿಕ ಅವರನ್ನು ಎಲ್ಲಾ ವರ್ಗದ ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ. ಬಿಜೆಪಿ ರಾಷ್ಟ್ರೀಯ ಪಕ್ಷ, ನಾನು ರಾಷ್ಟ್ರೀಯವಾದಿ ಎನ್ನುವ ಅಣ್ಣಾಮಲೈ ಇರುವ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಅಣ್ಣಾಮಲೈ ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.

click me!