ವರಿಷ್ಠರಿಗೆ ಟಿಕೆಟ್‌ ಕೇಳಿದರೆ ಟಿಕೆಟ್‌ ನೀಡುತ್ತಾರೆಂಬ ಆತ್ಮವಿಶ್ವಾಸ: ಲಕ್ಷ್ಮಣ ಸವದಿ

By Kannadaprabha NewsFirst Published Mar 19, 2023, 1:42 PM IST
Highlights

ವಿವಿಧ ಸಮುದಾಯಗಳ ಮುಖಂಡರ ಅಭಿಪ್ರಾಯ ಕೇಳಿ ಟಿಕೆಟ್‌ ಕೇಳುವ ಬಗ್ಗೆ ಮಾ.27ರಂದು ನಿರ್ಧರಿಸುತ್ತೇನೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಅಥಣಿ(ಮಾ.19):  ಅಥಣಿ ಮತಕ್ಷೇತ್ರದ ಮತದಾರರನ್ನು, ವಿವಿಧ ಸಮುದಾಯಗಳ ಮುಖಂಡರನ್ನು ಕೇಳಿ ಚುನಾವಣೆಗೆ ಹೋಗುವುದು ಸೂಕ್ತ ಎಂದೆನಿಸಿದೆ. ಹೀಗಾಗಿ ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ವರಿಷ್ಠರಿಗೆ ಟಿಕೆಟ್‌ ಕೇಳುತ್ತೇನೆ. ಪಕ್ಷದ ವರಿಷ್ಠರಿಗೆ ನಾನು ಟಿಕೆಟ್‌ ಕೇಳಿದರೇ ಅವರು ನಿರಾಕರಿಸದೇ ನನಗೆ ಟಿಕೆಟ್‌ ನೀಡುತ್ತಾರೆಂಬ ಆತ್ಮ ವಿಶ್ವಾಸವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ನೂರಾನಿ ಹಾಲ್‌ನಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆ ವಿಚಾರವಾಗಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಮಾ.27 ರಂದು ಎಲ್ಲ ಸಮುದಾಯದವರ ಒಪ್ಪಿಗೆ ಪಡೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ನೀವು ಯಾವತ್ತೂ ನನ್ನ ಬೆಂಬಲವಾಗಿ ನಿಲ್ಲಬೇಕು ಎಂದು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದರು.

ರಾಹುಲ್‌ ಗಾಂಧಿಯಿಂದ ಯುವಕರಿಗೆ 2 ಘೋಷಣೆ: ಸತೀಶ ಜಾರಕಿಹೊಳಿ

ನನ್ನ ಪಾಡಿಗೆ ನಾನು ಸುಮ್ಮನಿದ್ದರೂ, ಕೆಲವರು ನನ್ನನ್ನು ಸುಮ್ಮನೆ ಬಿಡುತ್ತಿಲ್ಲ. ಹಾಗಾಗಿ ಇಂದು ನಾನು ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಅಭಿಪ್ರಾಯ ನನಗೆ ಮುಖ್ಯವಾಗಿದೆ. ನಾನು ಭಾರತೀಯ ಜನತಾ ಪಕ್ಷದಲ್ಲಿ ಕಳೆದ 20 ವರ್ಷಗಳಿಂದ ಶಾಸಕನಾಗಿ ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಜಾತಿಭೇದ ಮಾಡದೆ ಎಲ್ಲ ಸಮುದಾಯಗಳ ವಿಶ್ವಾಸ ಪಡೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಬರುವ 27 ರೊಳಗಾಗಿ ತಾಲೂಕಿನ ಎಲ್ಲ ಸಮುದಾಯದ ಮುಖಂಡರ ಸಭೆ ಕರೆಯುತ್ತೇನೆ. ಅವರು ಅಥಣಿಯಿಂದ ಚುಣಾವಣೆ ಸ್ಪರ್ಧೆ ಮಾಡು ಎಂದರೇ ನಾನು ಪಕ್ಷದಲ್ಲಿ ಟಿಕೆಟ್‌ ಕೇಳುತ್ತೇನೆ. ಟಿಕೆಟ್‌ ನೀಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧರಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಮಹೇಶ ಕುಮಠಳ್ಳಿಗೆ ಟಿಕೆಟ್‌ ನೀಡುವ ವಿಚಾರದ ಬಗ್ಗೆ ಪಕ್ಷ ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಅದನ್ನು ತೀರ್ಮಾನ ಮಾಡುವುದು ನಾನೂ ಅಲ್ಲ, ಅವರೂ ಅಲ್ಲ. ಆದರೆ, ನಾನು ವಿಧಾನ ಪರಿಷತ್‌ ಸದಸ್ಯನಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕೋ? ಮಾಡಬೇಡವೋ? ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಅವರೆಲ್ಲರ ಅಭಿಪ್ರಾಯದ ಮೇಲೆ ಟಿಕೆಟ್‌ ಕೇಳುವ ಬಗ್ಗೆ ಚಿಂತಿಸುತ್ತೇನೆ. ಇಂದು ಮುಸ್ಲಿಂ ಸಮುದಾಯದ ಅಭಿಪ್ರಾಯ ಕೇಳಿದ್ದೇನೆ, ಶೀಘ್ರದಲ್ಲಿ ತಳವಾರ, ಕೋಳಿ ಸಮಾಜ, ಹಾಲುಮತ ಕುರುಬರ ಸಮಾಜ, ಹಡಪದ ಸಮಾಜ ಸೇರಿದಂತೆ ಎಲ್ಲ ಸಮುದಾಯಗಳ ಅಭಿಪ್ರಾಯ ಸಂಗ್ರಹಿಸಿ ಮಾ.27 ರಂದು ಎಲ್ಲ ಸಮುದಾಯಗಳ ಜತೆಗೆ ಸಭೆ ಮಾಡಿ ನಿರ್ಣಯ ಮಾಡುತ್ತೇನೆ. ಇಲ್ಲಿ ನಾನು ಪಕ್ಷದ ವರಿಷ್ಠರಲ್ಲಿ ಟಿಕೆಟ್‌ ಕೇಳಬೇಕೋ, ಬೇಡವೋ ಎಂಬುವುದನ್ನು ನಿರ್ಧರಿಸುತ್ತೇನೆ. ಎಲ್ಲ ಸಮುದಾಯದವರು ಟಿಕೆಟ್‌ ಕೇಳು ಎಂದು ಅಭಿಪ್ರಾಯ ಸೂಚಿಸಿದರೇ ಕೇಳುತ್ತೇನೆ ಎಂದು ತಿಳಿಸಿದರು.

ಈ ವೇಳೆ ಮುಖಂಡರಾದ ಇನ್ನುಸ್‌ ಮುಲ್ಲಾ, ರಫೀಕ್‌ ಡಾಂಗೆ, ಸೋಹೆಲ… ಕಾಜಿ, ಮುಸ್ತಾಕ್‌ ಮುಲ್ಲಾ, ಒಲಿಖಾನ ಪಠಾಣ, ಅತೀಕ್‌ ಮೋಮಿನ್‌, ಫರೀದ್‌ ಅವಟಿ, ಚಿದಾನಂದ ಸವದಿ, ಶಿವಕುಮಾರ ಸವದಿ, ಸಂತೋಷ ಸಾವಡಕರ, ಕಲ್ಲೇಶ್‌ ಮಡ್ಡಿ, ಮುದುಕಣ್ಣ ಶೇಗುಣಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚುನಾವಣೆಗೂ ಮುನ್ನ ಬಿಜೆಪಿ, ಕಾಂಗ್ರೆಸ್‌ ಪ್ರಚಾರದ ಅಬ್ಬರ; ಮತದಾರರ ಚಿತ್ತ ಯಾರತ್ತ?

ಜನ ಕಂಡು ಭಾವುಕರಾದ ಸವದಿ

ಲಕ್ಷ್ಮಣ ಸವದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಘೋಷಣೆಗಳನ್ನು ಕೂಗುತ್ತ ಹೂಗಳನ್ನು ಎರಚುತ್ತ ಸಂಭ್ರಮದಿಂದ ಬರಮಾಡಿಕೊಂಡರು. ಮುಸ್ಲಿಂ ಸಮುದಾಯದ ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಣ ಸವದಿ ಅವರು 5 ಸಾವಿರಕ್ಕೂ ಅಧಿಕ ಜನ ಸೇರಿರುವುದನ್ನು ಕಂಡು ಲಕ್ಷ್ಮಣ ಸವದಿ ಒಂದು ಕ್ಷಣ ಭಾವುಕರಾದರು.

ನಾನು ಕಳೆದ 20 ವರ್ಷಗಳಿಂದ ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇದಲ್ಲದೇ ಭಾರತೀಯ ಜನತಾ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದೇನೆ. ವಿಧಾನ ಪರಿಷತ್‌ ಸದಸ್ಯನಾಗಿ ನನ್ನ ಪಾಡಿಗೆ ನಾನು ಜನಪರ ಕಾರ್ಯಗಳನ್ನು ಮಾಡುತ್ತ ಇದ್ದೇನೆ. ಆದರೆ, ಕ್ಷೇತ್ರದ ಮತದಾರರು ಮತ್ತು ಹಲವು ಸಮುದಾಯದ ಮುಖಂಡರು ನಾನು ಚುನಾವಣೆಗೆ ನಿಲ್ಲಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ನಾನು ಈ ಬಗ್ಗೆ ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ಪಕ್ಷದ ವರಿಷ್ಠರಿಗೆ ಟಿಕೆಟ್‌ ನೀಡುವಂತೆ ಅರ್ಜಿ ಸಲ್ಲಿಸಿಲ್ಲ ಅಂತ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. 

click me!