ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳುವ ಸತ್ಯ ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ.
ಬೆಂಗಳೂರು (ಮಾ.25): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳುವ ಸತ್ಯ ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ. ಈ ಅನ್ಯಾಯದ ವಿರುದ್ಧ ನ್ಯಾಯಾಲಯ ಹಾಗೂ ಬೀದಿಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವದಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ. ಈ ಅನ್ಯಾಯದ ವಿರುದ್ಧ ಪಕ್ಷ, ಪಂಥ ಮರೆತು ಎಲ್ಲರೂ ಒಟ್ಟಾಗಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದಲ್ಲಿ ಅನಧಿಕೃತವಾಗಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ನರೇಂದ್ರಮೋದಿ, ಬಿಜೆಪಿ ಮತ್ತು ಎನ್‌ಡಿಎ ಸರ್ಕಾರದ ವಿರುದ್ದ ಮಾತನಾಡುವವರಿಗೆಲ್ಲರಿಗೂ ಎಚ್ಚರಿಕೆಯ ರೂಪದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದು ಕೇವಲ ಕಾಂಗ್ರೆಸ್ ಪಕ್ಷ ಇಲ್ಲವೇ ರಾಹುಲ್ ಗಾಂಧಿಯವರಿಗೆ ನೀಡಿರುವ ಬೆದರಿಕೆ ಅಲ್ಲ, ಅನ್ಯಾಯ-ಅಕ್ರಮದ ವಿರುದ್ದ ಧ್ವನಿ ಎತ್ತುವ ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಒಡ್ಡಿರುವ ಬೆದರಿಕೆ. ಪಕ್ಷ, ಪಂಥ ಮರೆತು ಎಲ್ಲರೂ ಒಟ್ಟಾಗಿ ಇದರ ವಿರುದ್ದ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.
ವರುಣ ಕ್ಷೇತ್ರದ ಬಗ್ಗೆ ಅಮಿತ್ ಶಾ ಜತೆ ಚರ್ಚೆ ಆಗಿದೆ: ಬಿ.ವೈ.ವಿಜಯೇಂದ್ರ
ಶಿಸ್ತು, ಸಂಯಮದಿಂದ ವರ್ತಿಸಿ: ರಾಹುಲ್ ಗಾಂಧಿಯವರ ವಿರುದ್ದ ಕೈಗೊಳ್ಳಲಾದ ಕ್ರಮದಿಂದ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗಿರುವುದು ನಿಜ. ಆದರೂ ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುವುದು ಅಗತ್ಯ. ಯಾರೂ ಕೂಡಾ ಸಿಟ್ಟು-ಆಕ್ರೋಶದ ಕೈಗೆ ಬುದ್ದಿ ಕೊಡದೆ ಶಾಂತಿಯುತ ಪ್ರತಿಭಟನೆ ನಡೆಸಬೇಕೆಂದು ಕೋರುತ್ತೇನೆ ಎಂದು ಸಲಹೆ ನೀಡಿದ್ದಾರೆ.
ಹೇಡಿತನ ಪ್ರದರ್ಶನ: ಕಾಂಗ್ರೆಸ್ ಪಕ್ಷದ ಸಂಸದರು, ವಿಪಕ್ಷ ನಾಯಕ ರಾಹುಲ್‌ಗಾಂಧಿ ಅವರ ಸತ್ಯವಾದ ಹೇಳಿಕೆಯನ್ನು ಸಹಿಸಲಾರದೆ ಕೇಂದ್ರ ಬಿಜೆಪಿ ಸರ್ಕಾರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಮೂಲಕ ತಮ್ಮ ಹೇಡಿತನವನ್ನು ಪ್ರದರ್ಶಿಸಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರಎಸ್.ರವಿಕುಮಾರ್ ಆರೋಪಿಸಿದ್ದಾರೆ. ದೀಪ ಆರುವ ಮುನ್ನ ಜೋರಾಗಿ ಉರಿಯುವ ಹಾಗೆ ಬಿಜೆಪಿ ಪಕ್ಷ ತನ್ನ ಅಂತ್ಯವನ್ನು ತಾನೇ ಸಿದ್ಧಪಡಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಇಂತಹ ಬೆದರಿಕೆಗಳಿಗೆ ಭಯಪಡುವುದಕ್ಕೆ, ಕ್ಷಮೆ ಕೇಳುವುದಕ್ಕೆ, ನಾವು ಸಾವರ್ಕರ ಅನುಯಾಯಿಗಳಲ್ಲ ಮಹಾತ್ಮಾಗಾಂಧಿ ಅವರ ಅನುಯಾಯಿಗಳು.
ನನಗೆ ಆದೇಶ ಮಾಡೋ ಅಧಿಕಾರ ಅಂಬರೀಶ್‌ಗಷ್ಟೇ: ಸಂಸದೆ ಸುಮಲತಾ
ರಾಹುಲ್ ಗಾಂಧಿ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಸಂದರ್ಭದಲ್ಲಿ ಇಂತಹ ಅನ್ಯಮಾರ್ಗಗಳ ಮೂಲಕ ಕುಗ್ಗಿಸಬೇಕು ಎಂದು ಹೊರಟಿರುವುದು ನಾಚಿಕೆಗೇಡು. ಕಾಂಗ್ರೆಸ್ ಪಕ್ಷ ಅಂದು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿತ್ತು, ಇಂದು ಸಂವಿಧಾನವನ್ನು ಉಳಿಸುವುದಕ್ಕಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡುವ ಸಂದರ್ಭ ಬಂದಿದೆ. ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ಸದಾ ಸಿದ್ಧ ಇದರ ವಿರುದ್ಧ ನಾವು ಹೋರಾಡುತ್ತೇವೆ. ಬಿಜೆಪಿ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ರಾಯಸಂದ್ರ ಎಸ್.ರವಿಕುಮಾರ್ ತಿಳಿಸಿದ್ದಾರೆ.