ಪ್ರಧಾನಿ ನರೇಂದ್ರ ಮೋದಿ ಅವರು ಕನಕದಾಸ ಹಾಗೂ ವಾಲ್ಮೀಕಿ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡುವುದು, ಕೆಂಪೇಗೌಡರ ಪ್ರತಿಮೆ ಉದ್ಘಾಟಿಸುವುದು ಇವೆಲ್ಲವೂ ಕೇವಲ ರಾಜಕೀಯ ಗಿಮಿಕ್ ಅಷ್ಟೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಂಗಳೂರು (ನ.11): ಪ್ರಧಾನಿ ನರೇಂದ್ರ ಮೋದಿ ಅವರು ಕನಕದಾಸ ಹಾಗೂ ವಾಲ್ಮೀಕಿ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡುವುದು, ಕೆಂಪೇಗೌಡರ ಪ್ರತಿಮೆ ಉದ್ಘಾಟಿಸುವುದು ಇವೆಲ್ಲವೂ ಕೇವಲ ರಾಜಕೀಯ ಗಿಮಿಕ್ ಅಷ್ಟೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವಾಲ್ಮೀಕಿ, ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ, ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ಇದೆಲ್ಲವೂ ರಾಜಕೀಯ ಗಿಮಿಕ್ ಅಷ್ಟೆಎಂದರು.
ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಿದ್ದು ನಮ್ಮ ಸರ್ಕಾರ. ಕನಕದಾಸರ ಪ್ರತಿಮೆ, ಕನಕಗುರು ಪೀಠ ಮಾಡಿದವರು ಕೂಡ ನಾವು. ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮಕ್ಕೂ ಬರಲಿಲ್ಲ. ಕೆಂಪೇಗೌಡರ ಜಯಂತಿ ಮಾಡಿದವರು ಯಾರು? ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಯಾರು? ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟವರು ಯಾರು? ಇದೆಲ್ಲವನ್ನೂ ಮಾಡಿದ್ದು ನಾವು ನಮ್ಮ ಸರ್ಕಾರದಲ್ಲಿ. ಸಚಿವರಾದ ಅಶ್ವತ್ಥನಾರಾಯಣ, ಡಾ.ಕೆ. ಸುಧಾಕರ್ ಇವರಾರಯರೂ ನಮಗೆ ಹೇಳಿರಲಿಲ್ಲ. ಎಲ್ಲಾ ಮಾಡಿದ್ದು ನಾವು.
ಕ್ಷೇತ್ರ ಘೋಷಿಸದ ಸಿದ್ದು ರಾಜಕೀಯ ಅಲೆಮಾರಿ: ಸಂಸದ ಶ್ರೀನಿವಾಸ ಪ್ರಸಾದ್
ಮೋದಿ ಈಗ ಹೂವಿನ ಹಾರ ಹಾಕಲು ಬರುತ್ತಿದ್ದಾರೆ. ಹಾರ ಹಾಕಿದಾಕ್ಷಣ ಇವರು ಕನಸದಾಸರ ಪರ ಆಗ್ತಾರಾ? ಎಂದು ಪ್ರಶ್ನಿಸಿದರು. ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದ ಮೇಲೆ ಅಲ್ಲಿ ಕೆಂಪೇಗೌಡರ ಪ್ರತಿಮೆ ಮಾಡಬೇಕೆಂದು ಕೂಡ ನಮ್ಮ ಸರ್ಕಾರ ಇದ್ದಾಗಲೇ ತೀರ್ಮಾನ ಮಾಡಿದ್ದೆವು. ನಂತರ ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ನಮ್ಮ ಸರ್ಕಾರದಲ್ಲಿ ಆಗಿದ್ದ ತೀರ್ಮಾನದಂತೆ ಪ್ರತಿಮೆ ನಿರ್ಮಿಸಿದ್ದಾರೆ ಎಂದರು.
ಶೆಡ್ಯೂಲ್ 9ಗೆ ಸೇರಿಸಲಿ: ಬಿಜೆಪಿಯವರು ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಸುಗ್ರೀವಾಜ್ಞೆ ತಂದು ಕ್ರಾಂತಿಕಾರಕ ತೀರ್ಮಾನ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಕಮಿಟಿ ರಚಿಸಿದ್ದೇ ನಮ್ಮ ಸರ್ಕಾರ. ಸಮಿತಿ ವರದಿ ನೀಡಿ ಎರಡೂವರೆ ವರ್ಷ ಸುಮ್ಮನಿದ್ದು ಒತ್ತಡ ಹೆಚ್ಚಾದ ಬಳಿಕ ಸುಗ್ರೀವಾಜ್ಞೆ ತಂದರು. ಆದರೆ, ಶೆಡ್ಯೂಲ್ 9ಕ್ಕೆ ಇದನ್ನು ಏಕೆ ಸೇರಿಸಿಲ್ಲ. ಮೀಸಲಾತಿಗೆ ಕಾನೂನು ರಕ್ಷಣೆ ಬೇಕಲ್ಲಾ? ಪ್ರಧಾನಿ ಅವರೊಂದಿಗೆ ಬಿಜೆಪಿಯವರು ಚರ್ಚಿಸಿ ಶೆಡ್ಯೂಲ್ 9ಕ್ಕೆ ಸೇರಿಸಲಿ ಎಂದು ಆಗ್ರಹಿಸಿದರು.
ರಾಜ್ಯದ ಜನತೆ ಸಿದ್ದರಾಮಯ್ಯ ಜೇಬಲ್ಲಿದ್ದಾರಾ?: ಬಿಎಸ್‌ವೈ
ಮೋದಿ ಅವರು ರಾಜ್ಯ ಭೇಟಿ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಉತ್ತರ ಕೊಡಲಿ. ಈ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ನಾನು ಕೂಡ ಪತ್ರ ಬರೆದಿದ್ದೇನೆ. ಆದರೆ, ಇದುವರೆಗೆ ಉತ್ತರ ಕೊಟ್ಟಿಲ್ಲ. ಈಗಲಾದರೂ ಉತ್ತರ ಕೊಡಲಿ ಎಂದರು. ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದದ ಕುರಿತ ಪ್ರಶ್ನೆಗೆ, ಸತೀಶ್ ಈಗಾಗಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಅಶ್ಲೀಲ ಎಂಬ ಪದ ವಾಪಸ್ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಹಾಗಾಗಿ ಈ ವಿಚಾರ ಮುಕ್ತಾಯವಾಗಿದೆ ಎಂದರು.