
ಹುಬ್ಬಳ್ಳಿ (ಫೆ.17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಒಬ್ಬ ಸಚಿವರಾಗಿ ಅಶ್ವತ್ಥ ನಾರಾಯಣ ಅವರು ಮಾತನಾಡುವ ಮಾತೆ ಇದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಚಿವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರಿ ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ. ಜೊತೆಗೆ, ಪೊಲೀಸರೇ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಈ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸಿದ್ದರಾಮಯ್ಯನನ್ನು ಮುಗಿಸಲಿ ಎಂದರೆ ಏನರ್ಥ?. ಪ್ರಜೆಗಳಿಗೆ ರಕ್ಷಣೆ ಕೊಡುವುದು ಸಚಿವರು ಹಾಗೂ ಸರ್ಕಾರದ ಜವಾಬ್ದಾರಿ. ಸರ್ಕಾರ ಜನರನ್ನು ರಕ್ಷಣೆ ಮಾಡಬೇಕು. ಆದರೆ, ಸರ್ಕಾರದ ಭಾಗವಾಗಿರುವ ಸಚಿವರೇ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅಶ್ವತ್ಥ ನಾರಾಯಣ ಒಬ್ಬ ನಾಲಾಯಕ ಮಂತ್ರಿ. ಹೊಡಿ, ಬಡಿ, ಕಡಿ ಎನ್ನುವುದೇ ಬಿಜೆಪಿಯ ಸಂಸ್ಕೃತಿ. ಆರ್‌ಎಸ್‌ಎಸ್‌ನವರು ಇಂತವರ ಬಾಯಿಂದ ಈ ರೀತಿ ಹೇಳಿಕೆ ಕೊಡಿಸಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಗೆ ಜನ ಮರುಳಾಗುವುದಿಲ್ಲ. ರಾಜ್ಯದ ಜನರ, ಮತದಾರರ ಆಶೀರ್ವಾದ ಇರುವವರೆಗೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.
ಹೊಡೆಯಲು ನೀವೇ ಕೋವಿ ಹಿಡಿದು ಬನ್ನಿ: ಅಶ್ವತ್ಥ್‌ಗೆ ಸಿದ್ದರಾಮಯ್ಯ ತಿರುಗೇಟು
ಒಬ್ಬ ಸಚಿವನಾಗಿ ಈ ರೀತಿ ಹೇಳಿಕೆ ಕೊಡೋದು ಎಷ್ಟರ ಮಟ್ಟಿಗೆ ಸರಿ. ಟಿಪ್ಪುವನ್ನು ಮುಗಿಸಿದ ಹಾಗೆ ಸಿದ್ದರಾಮಯ್ಯನನ್ನು ಮುಗಿಸಿ ಎಂದರೆ ಏನರ್ಥ?. ಎಲ್ಲರೂ ಇದನ್ನು ಖಂಡಿಸಬೇಕು. ನಾನು ದೂರು ಕೊಡಲು ಹೋಗುವುದಿಲ್ಲ. ಪೊಲೀಸರೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಅವರನ್ನು ಬಂಧಿಸಲಿ ಎಂದರು. ಚುನಾವಣೆ ವೇಳೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ಬಿಜೆಪಿಯವರು ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದಾರೆ. ಗೋಡ್ಸೆ ಮೂಲಕ ಮಹಾತ್ಮಾ ಗಾಂಧೀಜಿ ಅವರನ್ನು ಮುಗಿಸಿದ ಸಂತತಿ ಇವರದು. ಇಂತಹ ಕೋಮುವಾದಿಗಳು ಮತ್ತೆ ಅಧಿಕಾರಕ್ಕೆ ಬಂದರೆ ಸಿವಿಲ್ ವಾರ್ ಆರಂಭವಾಗುತ್ತದೆ ಎಂದರು.
ಅಶ್ವತ್ಥ್‌ರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಿ: ಬಹುತ್ವವನ್ನು ಪ್ರತಿಪಾದಿಸುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪುವನ್ನು ಹೊಡೆದು ಹಾಕಿದಂತೆ ಹೊಡೆದುಹಾಕಿ ಎಂದು ಪ್ರಚೋಧನಕಾರಿ ಭಾಷಣ ಮಾಡಿದ ಸಚಿವ ಅಶ್ವತ್ಥ ನಾರಾಯಣರನ್ನು ತಕ್ಷಣವೇ ಸಚಿವ ಸಂಪುಟದಿಂದ ಸರ್ಕಾರ ಕೈಬಿಡಿಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಶಶಿಧರ ಹೂಗಾರ ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೊಲ್ಲಿಸುವ ಬೆದರಿಕೆ ಹಾಕಿದ ಸಚಿವ ಅಶ್ವತ್ಥ ನಾರಾಯಣರನ್ನು ಸಚಿವ ಸಂಪುಟದಿಂದ ಕೈಬಿಡಲು ಆಗ್ರಹಿಸಿ ಗುರುವಾರ ಸಮೀಪದ ರಾಜೂರ ಪಿಡಿಒ ಮೂಲಕ ಸಿಎಂಗೆ ಮನವಿ ನೀಡಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡದಿದ್ದರೆ ಅವರಿಗೆ ಅನ್ನ ಜೀರ್ಣವಾಗಲ್ಲ, ಮಲಗಿದರೆ ನಿದ್ದೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಾರ್ಗಟ್ ಮಾಡಿದ್ದು ಅವರ ಬಾಷಣಗಳಿಂದ ಸ್ಪಷ್ಟವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಹಾಗೂ ಪ್ರತಿಭಟಿಸುವ ಹಕ್ಕಿದೆ.
ಕೊಟ್ಟ ಮಾತಿನಂತೆ ನಡೆಯದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ
ಆದರೆ, ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷದ ತತ್ವ- ಸಿದ್ಧಾಂತದ ಬಿನ್ನಾಭಿಪ್ರಾಯಗಳ ಮೇಲೆ ಟೀಕೆ ಮಾಡುವುದನ್ನು ಬಿಟ್ಟು ಬಿಜೆಪಿ ಸಂಸ್ಕೃತಿಯ ಪ್ರತೀಕ ಎನ್ನುವಂತೆ ಸಚಿವ ಅಶ್ವತ್ಥ ನಾರಾಯಣ ಅವರು ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಪ್ರಚೋಧನಾಕಾರಿ ಭಾಷಣ ಮಾಡಿರುವುದು ಬಿಜೆಪಿಗರ ಮನಃಸ್ಥಿತಿಗೆ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ವಿರುದ್ಧ ಪ್ರಚೋಧನಾಕಾರಿ ಭಾಷಣ ಮಾಡಿರುವ ಸಚಿವ ಅಶ್ವತ್ಥ ನಾರಾಯಣ ಅವರನ್ನು ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾಧ್ಯಂತ ಬಿಜೆಪಿ ಹಾಗೂ ಅಶ್ವತ್ಥ ನಾರಾಯಣ ವಿರುದ್ಧ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.