ನನಗೆ ಐದು ವರ್ಷಗಳ ಅವಕಾಶ ಕೊಡಿ. ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಿ, ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾನ ಮಾಡಿದರು.
ರಾಣಿಬೆನ್ನೂರ (ಫೆ.17): ನನಗೆ ಐದು ವರ್ಷಗಳ ಅವಕಾಶ ಕೊಡಿ. ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಿ, ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾನ ಮಾಡಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಂಜೆ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಪಂಚರತ್ನ ಯಾತ್ರೆ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೊಟ್ಟಮಾತಿನಂತೆ ಯುವಕರಿಗೆ ಉದ್ಯೋಗ ಮತ್ತು ವಸತಿ ರಹಿತರಿಗೆ ಮನೆ ನಿರ್ಮಾಣ ನಮ್ಮ ಪಕ್ಷದ ಗುರಿಯಾಗಿದೆ. ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಉತ್ತಮ ಶಾಲೆ ನಿರ್ಮಿಸಿ, ಉತ್ತಮ ಶಿಕ್ಷಕರನ್ನು ನೇಮಿಸಿ ಉತ್ತಮ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ರೂಪಿಸುವೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 24*7 ಕಾರ್ಯ ನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಿಸುವೆ. ರೈತ ಬಂಧುಗಳಿಗೆ ಪ್ರತಿ ಎಕರೆಗೆ 10 ಸಾವಿರದಂತೆ 10 ಎಕರೆ ವರೆಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಭರವಸೆ ನೀಡಿದರು.
undefined
ಬಿಜೆಪಿ ಗೆಲ್ಲಿಸೋ ಸುಪಾರಿ ಪಡೆದ ಸಿದ್ದರಾಮಯ್ಯ: ಎಚ್.ಡಿ.ಕುಮಾರಸ್ವಾಮಿ
ಬಿಜೆಪಿ ಟೀಕೆಯ ಧ್ವನಿ: ಕಾಂಗ್ರೆಸ್ಸಿನ ಯಾತ್ರೆ ಪ್ರಜಾಧ್ವನಿಯಲ್ಲ, ಅದು ಬಿಜೆಪಿಯ ಟೀಕೆಯ ಧ್ವನಿ. ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದು ಹೇಳುವ ಬದಲು ಕಾಂಗ್ರೆಸ್ ನಾಯಕರು ಬಿಜೆಪಿ ಟೀಕಿಸುವುದಕ್ಕೆ ಸೀಮಿತವಾಗಿದ್ದಾರೆ ಎಂದರು. ಎರಡು ಬಾರಿ ಕಲಬುರಗಿಗೆ, ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಂದು ಹೋದರು. ನಿಮ್ಮ ಕಷ್ಟಕ್ಕೆ ನಾವಿದ್ದೇವೆ ಎಂದು ರೈತರಿಗೆ ಭರವಸೆ ನೀಡಿದ್ರಾ? ಇಂಥ ಪಕ್ಷಗಳಿಗೆ ಏಕೆ ಮತ ಹಾಕಬೇಕು? ಎಂದು ಪ್ರಶ್ನಿಸಿದರು. ಹಾವೇರಿ ಜಿಲ್ಲೆಯಲ್ಲಿ ರಸ್ತೆಗಳು ಹದಗೆಟ್ಟಿವೆ. ಮನೆಗಳಿಗೆ ಸಂಪರ್ಕ ನೀಡಿರುವ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಜಲಜೀವನ ಮಿಷನ್ ಯೋಜನೆಯ ಅನುದಾನವನ್ನು ಬಿಜೆಪಿ ನಾಯಕರು ನುಂಗಿ ನೀರು ಕುಡಿಯುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ‘ಜನತಾ ಜಲಧಾರೆ’ ಕಾರ್ಯಕ್ರಮವನ್ನು ಜಾರಿಗಳಿಸಿ, ಮುಂದಿನ ಐದು ವರ್ಷಗಳಲ್ಲಿ ಹೊಲಕ್ಕೆ ನೀರು, ಕೆರೆಗಳಿಗೆ ನೀರು, ಜನರಿಗೆ ಕುಡಿಯುವ ನೀರು ಕೊಡುತ್ತೇವೆ ಎಂದರು.
ಅಮಾಯಕರ ಬಲಿ: ಇಂದು ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ನಾನು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ. ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಭಾವೈಕ್ಯ, ಸೌಹಾರ್ದ ಕಾಪಾಡಬೇಕಿದೆ. ಧರ್ಮದ ಜತೆಗೆ ಪ್ರತಿ ಕುಟುಂಬಕ್ಕೆ ಬದುಕು ಕಟ್ಟಿಕೊಡುವ ಕೆಲಸವಾಗಬೇಕಿದೆ ಎಂದರು. 5 ಸಾವಿರ ಕೊಟ್ಟು ವೋಟು ಹಾಕಿಸಿಕೊಳ್ಳುತ್ತೇನೆ ಎಂದು ರಾಣಿಬೆನ್ನೂರಿನ ಶಾಸಕ ಹೇಳುತ್ತಿದ್ದಾರೆ. ಈ ಹಣ ಎಲ್ಲಿಂದ ಬಂತು? ಎಂದು ಶಾಸಕ ಅರುಣಕುಮಾರ್ ಪೂಜಾರ ಅವರ ಹೆಸರು ಹೇಳದೆ ಜರಿದರು. ಜಾತಿಯ ವ್ಯಾಮೋಹಕ್ಕೆ ಒಳಗಾಗಬೇಡಿ. ರಾಜ್ಯದ ಖಜಾನೆ ಶ್ರೀಮಂತವಾಗಿದೆ. ಆದರೆ, ಜನರು ಬಡವರಾಗಿದ್ದಾರೆ ಎಂದು ಕುಮಾರಸ್ವಾಮಿ ವಿಷಾಧಿಸಿದರು.
ಕಾಂಗ್ರೆಸ್ಸಿನಿಂದ ದಾರಿ ತಪ್ಪಿಸುವ ಕೆಲಸ: ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಮಾತನಾಡಿ, ಕಾಂಗ್ರೆಸ್ ಪ್ರಜಾಧ್ವನಿಯಾತ್ರೆ ಮೂಲಕ ವಿವಿಧ ಯೋಜನೆ ಘೋಷಣೆ ಮಾಡಿ ಜನರ ದಾರಿ ತಪ್ಪಿಸುತ್ತಿದೆ. ಅವರು ಈ ಯಾತ್ರೆ ಮೂಲಕ ಕೊಟ್ಟಿರುವ ಭರವಸೆಗಳನ್ನು ಅವರದ್ದೇ ಸರ್ಕಾರ ಇರುವ ರಾಜಸ್ಥಾನ ಸೇರಿ ಇತರೆ ರಾಜ್ಯಗಳಲ್ಲಿ ಮೊದಲು ಜಾರಿಗೊಳಿಸಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆ ನೋಡಿ ಕಾಂಗ್ರೆಸ್, ಬಿಜೆಪಿಗೆ ನಡುಕ ಶುರುವಾಗಿದೆ. ಕಾಂಗ್ರೆಸ್ಸಿಗೆ ಐದು ವರ್ಷ ಜನರ ಧ್ವನಿ ಕೇಳಲಿಲ್ಲ. ಬಿಜೆಪಿ ಕೈಯಲ್ಲಿ ತಿಜೋರಿ ಕೀಲಿ ಇದ್ದರೂ ಏನು ಅಭಿವೃದ್ಧಿ ಮಾಡಿಲ್ಲ. ನಿಮ್ಮ ಆಟ ಇನ್ನು ಕೇವಲ 45 ದಿನಗಳು ಮಾತ್ರ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರೈತರ ಪರವಾಗಿ ದುಡಿದು ಈಗ ವೋಟು ಕೇಳಲು ಬಂದಿದ್ದಾರೆ. ಅವರಿಗೆ ಈ ಬಾರಿ ಸಂಪೂರ್ಣ ಬಹುಮತ ನೀಡಿ ರಾಜ್ಯದಲ್ಲಿ ಸ್ವಂತ ಬಲದಿಂದ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಬಿಜೆಪಿಯವರಂತೆ ಅಮಾಯಕರ ಬಲಿಕೊಟ್ಟು ರಾಜಕಾರಣ ಮಾಡಿಲ್ಲ: ಎಚ್‌ಡಿಕೆ
ಮಾಜಿ ಶಾಸಕ ಎಸ್.ಎಚ್.ಶಿವಶಂಕರ ಮಾತನಾಡಿ, ಪಂಚರತ್ನ ಯಾತ್ರೆ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಭ್ರಷ್ಟಬಿಜೆಪಿ ಕಿತ್ತೊಗೆಯಲು ಜನತೆ ಸಂಕಲ್ಪ ಮಾಡಿದ್ದಾರೆ ಎಂದರು. ರಾಣಿಬೆನ್ನೂರು ಘೋಷಿತ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣವರ ಮಾತನಾಡಿ, ತಾಲೂಕಿನಲ್ಲಿ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜೆಡಿಎಸ್‌ನ ಜನಪರ ಆಡಳಿತ ನೋಡಿ ಜನತೆ ಬೆಂಬಲಿಸುತ್ತಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ವಿವಿಧ ಪಕ್ಷದ ಮುಖಂಡರು ಜೆಡಿಎಸ್ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಎನ್. ಮಹೇಶಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ, ಹಾವೇರಿ ಅಭ್ಯರ್ಥಿ ತುಕಾರಾಮ ಮಾಳಗಿ, ಜಿಲ್ಲಾ ವಕ್ತಾರ ಮಹಾಂತೇಶ ಬೇವಿನಹಿಂಡಿ ಇತರರು ಇದ್ದರು.
ಮೇಡ್ಲೇರಿಯಲ್ಲಿ ಗ್ರಾಮ ವಾಸ್ತವ್ಯ: ಸಮಾವೇಶದ ಬಳಿಕ ತಾಲೂಕಿನ ಮೆಡ್ಲೇರಿ ಗ್ರಾಮಕ್ಕೆ ತೆರಳಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಡರಾತ್ರಿವರೆಗೂ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ನಂತರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಾಸ್ತವ್ಯ ಹೊಡಿದರು.