ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೂರುವ ಪಕ್ಷ: ಸಿದ್ದು ಟೀಕೆ| ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ| ಕಣ್ಣೀರು ಹಾಕಿ ಮತ ಕೇಳೋದು ರಾಜಕಾರಣವೇ?| ತಿಪ್ಪರಲಾಗ ಹಾಕಿದರೂ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲ್ಲ
ಬೆಂಗಳೂರು(ಅ.05): ‘ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ. ಇನ್ನೊಬ್ಬರ ಹೆಗಲ ಮೇಲೆ ಕುಳಿತು ಅಧಿಕಾರ ಮಾಡುವ ಜೆಡಿಎಸ್‌ನವರು ಇನ್ನು ತಿಪ್ಪರಲಾಗ ಹಾಕಿದರೂ ಮತ್ತೊಮ್ಮೆ ಅಧಿಕಾರಕ್ಕೆ ಬರಲ್ಲ. ಕಣ್ಣೀರು ಹಾಕಿ ಮತ ಕೇಳುವುದು ರಾಜಕಾರಣದ ಲಕ್ಷಣವೇ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ಕಿಡಿ ಕಾರಿದ್ದಾರೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಭಾನುವಾರ ಟೀಕಾ ಪ್ರಹಾರ ನಡೆಸಿದ ಸಿದ್ದರಾಮಯ್ಯ, ‘ಜೆಡಿಎಸ್‌ನವರು ಎಂದಿಗೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಬಿಜೆಪಿಯವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದರೆ ಜೆಡಿಎಸ್‌ನವರು ಕಣ್ಣೀರು ಹಾಕುವುದರಲ್ಲಿ ತಲ್ಲೀನರಾಗಿದ್ದಾರೆ. ಜನಸೇವೆ ಮಾಡುವವರು ಕೆಲಸ ಮಾಡಲು ಆಶೀರ್ವಾದ ಮಾಡಿ ಎಂದು ಕೇಳಬೇಕೆ ಹೊರತು ಕಣ್ಣೀರು ಹಾಕಬಾರದು. ಆದರೆ ಎಚ್.ಡಿ. ಕುಮಾರಸ್ವಾಮಿ ತಮ್ಮ ತಂದೆ ದೇವೇಗೌಡರ ಮಾದರಿಯಲ್ಲೇ ಕಣ್ಣೀರು ಹಾಕುವುದನ್ನು ಮುಂದುವರಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ತುಮಕೂರು ಜಿಲ್ಲಾ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಶಿರಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮೊನ್ನೆಯೂ ಕಣ್ಣೀರು ಹಾಕಿದ್ದಾರೆ. ಏಕೆ ಕಣ್ಣೀರು ಹಾಕಿದ್ದಾರೆ ಎಂಬುದೂ ಗೊತ್ತಿಲ್ಲ. ಕಣ್ಣೀರಿನ ಮೂಲಕವೇ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇವೆಲ್ಲಾ ರಾಜಕಾರಣದ ಲಕ್ಷಣವೇ?’ ಎಂದು ಪ್ರಶ್ನಿಸಿದರು.
ಉಪ ಚುನಾವಣೆ ದಿಕ್ಸೂಚಿ:
‘ರಾಜ್ಯ ಸರ್ಕಾರವು ಸಂಕಷ್ಟದಲ್ಲಿರುವ ಜನರಿಗೆ ನೆರವಾಗದೆ ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ ರಾಜರಾಜೇಶ್ವರಿನಗರ ಹಾಗೂ ಶಿರಾ ಉಪ ಚುನಾವಣೆಗಳ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಲಿದೆ. ಹೀಗಾಗಿ ಉಪ ಚುನಾವಣೆ ಗೆದ್ದು ಬಿಜೆಪಿಗೆ ಎಚ್ಚರಿಕೆಯ ಗಂಟೆ ಮೊಳಗಿಸಬೇಕು. ಶಿಕ್ಷಕರ ಹಾಗೂ ಪದವಿ ಕ್ಷೇತ್ರಗಳ ನಾಲ್ಕು ಪರಿಷತ್ ಸ್ಥಾನಗಳನ್ನೂ ಗೆಲ್ಲಬೇಕು’ ಎಂದು ಕರೆ ನೀಡಿದರು.
‘ಯಡಿಯೂರಪ್ಪ ನೇತೃತ್ವದ ಬಿಜೆಪಿ, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ 17 ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದೆ. ಅಧಿಕಾರಕ್ಕೆ ಬಂದ ಮೇಲೆ ಯಡಿಯೂರಪ್ಪ ಏನೂ ಮಾಡಿಲ್ಲ. ಉದ್ಯೋಗಿಗಳಿಗೆ ವೇತನ, ನಿವೃತ್ತರಿಗೆ ಪಿಂಚಣಿ ನೀಡಲು ಸಹ ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.
‘2018ರಲ್ಲಿ ಬೇರೆ ಬೇರೆ ಕಾರಣಗಳಿಂದ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿಲ್ಲವೇ ಹೊರತು ನಾವು ಜನ ವಿರೋಧಿಯಾಗಿ ಅಧಿಕಾರ ಕಳೆದುಕೊಳ್ಳಲಿಲ್ಲ. ನಾವು ವಿವಿಧ ಭಾಗ್ಯಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಗಳನ್ನು ಜಾರಿಗೆ ತರದಿದ್ದರೆ ಇಂದು ಜನ ಬೀದಿಯಲ್ಲಿ ಇರಬೇಕಾದ ಸ್ಥಿತಿ ಬರುತ್ತಿತ್ತು. ಇದು ಜನರಿಗೆ ಅರಿವಾಗಿದೆ. ಹೀಗಾಗಿ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಸಾಕಷ್ಟುಅವಕಾಶಗಳಿವೆ’ ಎಂದು ಹೇಳಿದರು.
ಇದು ಲಂಚಬಾಕ ಸರ್ಕಾರ: ಸಿದ್ದು
ಬೆಂಗಳೂರು: ಯಡಿಯೂರಪ್ಪ ಅವರ ಅವಧಿಯಲ್ಲಿ ರಾಜ್ಯ ಸರ್ಕಾರದ ಸಾಲದ ಮೊತ್ತ 4 ಲಕ್ಷ ಕೋಟಿ ರು.ಗಳ ಗಡಿ ದಾಟಿದೆ. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1.5 ಲಕ್ಷ ಕೋಟಿ ರು. ಮೊತ್ತದ ಸಾಲ ಮಾಡಿದ್ದಾರೆ. ಇದೊಂದು ಲಂಚಬಾಕ ಸರ್ಕಾರ. ಜನರು ಯಾವ ಸರ್ಕಾರ ಕೆಲಸ ಮಾಡುತ್ತಿದೆ ಎನ್ನುವುದನ್ನು ಗಮನಿಸಬೇಕು. ಜಾತಿ ರಾಜಕಾರಣ ಮಾಡಿಕೊಂಡು ಬರುವವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.