ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್. ಅವರು ಯಾವುದೇ ಹೋರಾಟ ಮಾಡಿದವರಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು (ನ.01): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್. ಅವರು ಯಾವುದೇ ಹೋರಾಟ ಮಾಡಿದವರಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ತಮ್ಮ ವಿರುದ್ಧದ ಕಟೀಲ್ ವಾಗ್ದಾಳಿ ಕುರಿತು ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಟೀಲ್ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು. ಆರ್‌ಎಸ್‌ಎಸ್‌ನವರು ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದಾರೆ. ಸುಳ್ಳನ್ನೇ ಉತ್ಪಾದನೆ ಮಾಡುತ್ತಾರೆ ಎಂದು ದೂರಿದರು. ಬಿಜೆಪಿಯವರಿಗೆ ನನ್ನನ್ನು ಕಂಡರೆ ಭಯ. ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ನನ್ನ ಇಮೇಜ್ ಹಾಳು ಮಾಡುವುದು ಅವರ ಉದ್ದೇಶ. ಇದು ಆರ್‌ಎಸ್‌ಎಸ್ ಕಾರ್ಯ ತಂತ್ರ. ಆರ್‌ಎಸ್‌ಎಸ್ ಬರೆದುಕೊಟ್ಟಂತೆ ಈ ಗಿರಾಕಿಗಳು ಭಾಷಣ ಮಾಡುತ್ತಾರೆ. ಅವರೆಲ್ಲ ಯಾವತ್ತು ಸಾಮಾಜಿಕ ನ್ಯಾಯದ ಪರ ಇದ್ದರು ಎಂದು ಪ್ರಶ್ನಿಸಿದರು.
ಕಮಿಷನ್ ಸರ್ಕಾರಕ್ಕೆ ಇದು ಸಾಕ್ಷಿ: ಗುತ್ತಿಗೆದಾರೊಬ್ಬರು ದಯಾಮರಣಕ್ಕೆ ಅನುಮತಿ ಕೊಡಿ ಎಂದು ಪ್ರಧಾನಿಗೆ ಮನವಿ ಮಾಡಿದ್ದಾರೆ. ಇದು ರಾಜ್ಯ ಬಿಜೆಪಿಯದು ಶೇ.40 ಕಮಿಷನ್ ಸರ್ಕಾರ ಎಂಬುದಕ್ಕೆ ಪ್ರಬಲ ಸಾಕ್ಷಿ ಎಂದು ಇದೇ ವೇಳೆ ಸಿದ್ದರಾಮಯ್ಯ ಆರೋಪಿಸಿದರು. ಬಸವರಾಜ ಅಮರಗೋಳ ಎಂಬ ವ್ಯಕ್ತಿ ಚಿಕ್ಕಮಗಳೂರು ಜಿ.ಪಂ., ಮೂಡಿಗೆರೆ ಹಾಗೂ ಕಡೂರು ಮತ್ತಿತರ ಕಡೆ ಕೊರೋನಾ ಸಮಯದಲ್ಲಿ ಉಪಕರಣಗಳನ್ನು ಸರಬರಾಜು ಮಾಡಿದ್ದರು. ಅದಾಗಿ ಎರಡು ವರ್ಷ ಪೂರೈಸಿದೆ. ಅದರಲ್ಲಿ ಕೇವಲ ಶೇ.20 ಬಿಲ್ ಹಣವನ್ನು ಮಾತ್ರ ನೀಡಿದ್ದಾರೆ.
ಕೇಂದ್ರದ ದುರ್ಬಲ ಆರ್ಥಿಕ ನೀತಿಯಿಂದ ಬೆಲೆ ಹೆಚ್ಚಳ: ಸಿದ್ದರಾಮಯ್ಯ
ಬಾಕಿ ಹಣಕ್ಕಾಗಿ ಅವರು ಮುಖ್ಯಮಂತ್ರಿಗಳನ್ನು ಎರಡು ಬಾರಿ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿಗಳನ್ನೂ ಭೇಟಿ ಮಾಡಿದ್ದಾರೆ. ಇದರಿಂದ ಯಾವ ಉಪಯೋಗವೂ ಆಗದಿದ್ದಕ್ಕೆ ಕೊನೆಗೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ತನ್ನ ಬಳಿ ಶೇ.35-40 ಕಮಿಷನ್ ಕೇಳುತ್ತಿದ್ದಾರೆ, ಇಷ್ಟುಹಣ ನನ್ನಿಂದ ಕೊಡಲಾಗುತ್ತಿಲ್ಲ. ಬಾಕಿ ಬಿಲ್ ಹಣವನ್ನು ನೀವೇ ಕೊಡಿಸಿ. ಇಲ್ಲದಿದ್ದರೆ ನನಗೆ ದಯಾ ಮರಣಕ್ಕೆ ಅನುಮತಿ ಕೊಡಿ ಎಂದು ಕೇಳಿದ್ದಾರೆ. ಇದು ಈ ಸರ್ಕಾರ ಶೇ.40 ಕಮಿಷನ್ ಸರ್ಕಾರ ಎಂಬುದಕ್ಕೆ ಪ್ರಬಲ ಸಾಕ್ಷಿ ಎಂದು ಸಿದ್ದರಾಮಯ್ಯ ದೂರಿದರು.
ಏಜೆಂಟ್‌ರಿಂದ ಆರೋಪ ಮಾಡಿಸಬೇಡಿ: ಶೇ. 40 ಕಮಿಷನ್ ಸರ್ಕಾರ ಎನ್ನುವ ಆರೋಪ ಸಿದ್ದರಾಮಯ್ಯ ಅವರ ರಾಜಕೀಯ ಒಳತಂತ್ರಗಾರಿಕೆ. ಸಾಕ್ಷ್ಯಾಧಾರಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಆಗ್ರಹಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಏಜೆಂಟ್‌ರಿಂದ ಮಾಧ್ಯಮದೆದುರು ಆರೋಪ, ಟೀಕೆ ಮಾಡಿಸುವುದು ಸರಿಯಲ್ಲ ಎಂದರು. ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚು ಗುತ್ತಿಗೆದಾರರು ಇದ್ದು, ಅವರೇ ಏಜೆಂಟ್‌ರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಕೆಲವರು ಪಕ್ಷದಿಂದ ಟಿಕೆಟ್ ಕೇಳುತ್ತಿದ್ದಾರೆ.
ಆರೇಳು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡವಿದೆ: ಸಿದ್ದರಾಮಯ್ಯ
ಟಿಕೆಟ್ ಬೇಕೆಂದರೆ ಮಾಧ್ಯಮದ ಎದುರು ಕಮಿಷನ್ ಸರ್ಕಾರ, ಭ್ರಷ್ಟಾಚಾರದ ಸರ್ಕಾರ ಎಂದು ಆರೋಪ ಮಾಡಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅದಕ್ಕಾಗಿಯೇ ಗುತ್ತಿಗೆದಾರರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ರಾಹುಲ್ ಗಾಂಧಿ ಪಾದಯಾತ್ರೆ ಮಾಡಿರುವ ಕೊಳ್ಳೆಗಾಲದಲ್ಲಿಯೇ ನಗರಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಆರು ಸ್ಥಾನ ಪಡೆದು ಗೆಲುವು ಸಾಧಿಸಿದೆ. ಅವರ ಭಾರತ್ ಜೋಡೋ ಯಾರ ಮೇಲೂ ಪರಿಣಾಮ ಬೀರಿಲ್ಲ. ಅಲ್ಲದೆ, ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಅವರನ್ನು ಸಹ ಜೋಡಿಸಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.