
ಬೆಂಗಳೂರು (ಜೂ.09): ಗ್ಯಾರಂಟಿಗಳ ಬಗ್ಗೆ ಸ್ವತಃ ಸಚಿವರಿಗೇ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಅವರೆಲ್ಲರೂ ಅರೆಬರೆ ಜ್ಞಾನಿಗಳಂತೆ ಮಾತನಾಡುತ್ತಿದ್ದಾರೆ. ಜನತೆಗೂ ಇದು ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ವಿವಿಧ ಜಿಲ್ಲೆಯ ಜೆಡಿಎಸ್ ಮುಖಂಡರ ಆತ್ಮಾವಲೋಕನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೃಹಲಕ್ಷ್ಮೇ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್ ಅವರು ಹೇಳಿಕೆ ನೀಡಿ ಗೊಂದಲ ತಂದಿಟ್ಟಿದ್ದಾರೆ. ಅವರೊಬ್ಬರೇ ಅಲ್ಲ, ಬಹುತೇಕ ಎಲ್ಲಾ ಸಚಿವರಿಗೆ ಗ್ಯಾರಂಟಿಗಳ ಯಾವ ಗ್ಯಾರಂಟಿಯೂ ಇಲ್ಲ ಎಂದು ಹೇಳಿದರು.
ಒಂದು ಕಾರ್ಯಕ್ರಮದ ಗೊಂದಲವಲ್ಲ, ಐದು ಕಾರ್ಯಕ್ರಮಗಳೂ ಗೊಂದಲದಲ್ಲೇ ಇವೆ. ಯಾರಿಗೂ ಯಾವ ಸ್ಪಷ್ಟತೆಯೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಗ್ಯಾರಂಟಿಗಳು ಲೇವಡಿಯ ವಸ್ತುವಾಗಿವೆ. ಗೃಹಜ್ಯೋತಿ ಯೋಜನೆ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಅರ್ಥವಾಗಿಲ್ಲ. ಅವರು ತಾಳಮೇಳ ಇಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗಿಲ್ಲ. ಗೃಹಲಕ್ಷ್ಮೇ, ಗೃಹಜ್ಯೋತಿ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅತೀವ ಕುತೂಹಲ, ನಿರೀಕ್ಷೆ ಹುಟ್ಟು ಹಾಕಲಾಗಿತ್ತು. ಇಲಾಖೆಯನ್ನು ಮುನ್ನಡೆಸುವ ಇಬ್ಬರೂ ಸಚಿವರಿಗೆ ಯೋಜನೆಯ ಖಾತರಿ, ಸ್ಪಷ್ಟತೆ ಇಲ್ಲ ಎನ್ನುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಆ.1ರಿಂದ ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಸಚಿವ ಜಮೀರ್ ಜನತಾ ದರ್ಶನ
ಅದಿರು ಸಾಗಣೆ ವರದಿ ಬಹಿರಂಗಪಡಿಸಿ: ಕಾನೂನು ಸಚಿವ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ 2013-18ರಲ್ಲಿ ಅಕ್ರಮ ಅದಿರು ಸಾಗಣೆ ಕುರಿತಂತೆ ಸದನ ಸಮಿತಿ ರಚನೆ ಮಾಡಲಾಗಿತ್ತು. ಸುದೀರ್ಘ ಪರಿಶೀಲನೆ ನಂತರ ವರದಿ ನೀಡಲಾಗಿದ್ದು, ಬಿಜೆಪಿಯನ್ನು 40 ಪರ್ಸೆಂಟ್ ಪಕ್ಷ ಎಂದವರು ಈ ವರದಿಯನ್ನು ಬಹಿರಂಗಪಡಿಸಬೇಕು. ಆ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶಗಳಿವೆ. 35 ಕೋಟಿ ಟನ್ ಅದಿರು ಅಕ್ರಮವಾಗಿ ರಫ್ತಾಗಿದೆ ಎನ್ನುವುದನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆ ಅದಿರಿನ ಮೌಲ್ಯ 1.43 ಲಕ್ಷ ಕೋಟಿ ರುಪಾಯಿ ಎಂಬ ವಿಚಾರ ಅಡಗಿದೆ. ಅದನ್ನು ಈಗ ಬಹಿರಂಗ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಆ.17/18ಕ್ಕೆ ಬೆಳಗಾವಿಯಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯ
ಮಕ್ಕಳ ವಿಚಾರದಲ್ಲಿ ಸರ್ಕಾರ ಚೆಲ್ಲಾಟ: ಮಕ್ಕಳ ವಿಚಾರದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಹಿಂದಿನ ಸರ್ಕಾರ ಈಗಾಗಲೇ ಪಠ್ಯ ಬದಲಾವಣೆ ಮಾಡಿದೆ. ಈ ಬಗ್ಗೆ ಸಾಕಷ್ಟುಗೊಂದಲವಾಗಿತ್ತು. ಈಗಿನ ಸರ್ಕಾರವೂ ಅದೇ ದಾರಿಯಲ್ಲಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರು. ವೆಚ್ಚ ಮಾಡಿ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ಕಳುಹಿಸಲಾಗಿದೆ. ಇದು ಜನರ ದುಡ್ಡಲ್ಲವೇ? ಮಕ್ಕಳಿಗೆ ಪರಿಶುದ್ಧ ವಾತಾವರಣ ಸೃಷ್ಟಿಮಾಡಬೇಕು. ಮಕ್ಕಳಿಗೆ ಒಳ್ಳೆಯ ಜ್ಞಾನ ತುಂಬಬೇಕು. ದ್ವಂದ್ವ ಹೇಳಿಕೆಗಳನ್ನು ನೀಡುವ ಮೂಲಕ ಅವರ ಮೇಲೆ ಪರಿಣಾಮ ಬೀಳುವಂತೆ ಮಾಡುವುದು ಬೇಡ. ಸರ್ಕಾರದ ಪ್ರಾರಂಭಿಕ ಹಂತದಲ್ಲೇ ಈ ರೀತಿಯ ಗೊಂದಲ ಬಿತ್ತನೆ ಮಾಡಿದರೆ ಹೇಗೆ? ಇನ್ನು ಐದು ವರ್ಷದ ಕಥೆ ಏನು ಎನ್ನುವುದು ನನ್ನ ಪ್ರಶ್ನೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.