ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ರಚಿಸಲು ನಿರ್ಧಾರ ಕೈಗೊಳ್ಳುವ ಮೂಲಕ ಬಿಜೆಪಿ ಸರ್ಕಾರ ಈ ಎರಡು ಸಮುದಾಯವನ್ನು ಮಂಗ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ತುಮಕೂರು (ಡಿ.30): ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ರಚಿಸಲು ನಿರ್ಧಾರ ಕೈಗೊಳ್ಳುವ ಮೂಲಕ ಬಿಜೆಪಿ ಸರ್ಕಾರ ಈ ಎರಡು ಸಮುದಾಯವನ್ನು ಮಂಗ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಗ್ರಾಮಾಂತರ ಕ್ಷೇತ್ರದ ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3ಎ ಮತ್ತು 3ಬಿ ಪ್ರವರ್ಗಗಳನ್ನು ಸೈಲೆಂಟ್ ಮಾಡಿದ್ದಾರೆ. ಈ ಸಮುದಾಯಗಳಿಗೆ ಮೀಸಲಾತಿ ಕೊಡುವಷ್ಟರಲ್ಲಿ ಈ ಸರ್ಕಾರವೇ ಇರುವುದಿಲ್ಲ. ಉತ್ತರ ಪ್ರದೇಶದಲ್ಲಿ ಮೀಸಲಾತಿಯನ್ನೇ ಹೈಕೋರ್ಟ್ ತೆಗೆದು ಹಾಕಿದೆ. ಮುಂದೆ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಬರಬಹುದು ಎಂದರು.
ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಇದೆ ನಿಜ. ಆದರೆ ಕೆಲವು ಮಾರ್ಪಾಡು ಮಾಡುವ ಮೂಲಕ ಇಷ್ಟುದಿನ ರಂಗ ಎಂದು ಕರೆಯಲಾಗಿತ್ತು. ಆದರೆ ಈಗ ರಂಗನನ್ನು ಮಂಗ ಎಂದು ಕರೆದಿದ್ದಾರೆ. ಈ ಮೂಲಕ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರನ್ನು ಮಂಗ ಮಾಡಿದ್ದಾರೆ ಎಂದು ಹರಿಹಾಯ್ದರು. ಬಿಜೆಪಿಯವರು ಚುನಾವಣೆ ಗಿಮಿಕ್‌ಗಾಗಿ ಈ ರೀತಿ ಮಾಡುತ್ತಿದ್ದಾರೆ. ಪಂಚಮಸಾಲಿಗಳು 2ಎಗೆ ಸೇರಿಸಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ 2ಡಿ ಮಾಡಿದ್ದಾರೆ. ಸರ್ಕಾರದ ತೀರ್ಮಾನ ನಾಡಿನ ಜನತೆಗೆ ಮಾಡಿದ ದ್ರೋಹವಾಗಿದೆ. ಮೀಸಲಾತಿ ಎಂಬುದು ಧ್ವನಿ ಇಲ್ಲದ ವರ್ಗಕ್ಕೆ ಅನುಕೂಲವಾಗಬೇಕು.
ಜೆಡಿಎಸ್‌ನಿಂದ ರೈತರ ಸಮಸ್ಯೆಗೆ ಪರಿಹಾರ: ಎಚ್.ಡಿ.ಕುಮಾರಸ್ವಾಮಿ
ಈ ಹಿಂದೆ ವಾಸನೆ ನೋಡಿಕೊಳ್ಳಿ ಎಂದು ಮೂಗಿಗೆ ತುಪ್ಪ ಸವರುತ್ತಿದ್ದರು. ಆದರೆ ಈಗಿರುವ ಬಿಜೆಪಿ ಸರ್ಕಾರ ಮೂಗಿಗೂ ತುಪ್ಪ ಸವರಿಲ್ಲ, ಬದಲಾಗಿ ಹಣೆಗೆ ತುಪ್ಪ ಸವರಿದ್ದಾರೇನೋ ಎಂದರು. ಕಳಸಾ ಬಂಡೂರಿ ಯೋಜನೆಗೆ 100 ಕೋಟಿ ಅನುದಾನ ನೀಡಿದ್ದು ನಾನು, ಪ್ರಚಾರಕ್ಕಾಗಿ ಬಿಜೆಪಿ ಯೋಜನೆ ಮಾಡುತ್ತಾರೆ. ಮೀಸಲಾತಿ ಮೀರಬಾರದು ಎಂಬ ನಿಯಮವಿದೆ. ತಮಿಳುನಾಡು ಸರ್ಕಾರದ ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿದೆ, ಕಾನೂನಿನ ಚೌಕಟ್ಟಿನೊಳಗೆ ನಿಯಮಗಳನ್ನು ಮಾಡಬೇಕು ನ್ಯಾಯಾಲಯಗಳು ಮೀಸಲಾತಿ ಮೀರಿದ ಯೋಜನೆ ರದ್ದುಗೊಳಿಸಿದ ಉದಾಹರಣೆ ಇದೆ ಎಂದರು.
ಸದ್ಯ ಕಳಸಾ ಬಂಡೂರಿ ಯೋಜನೆಗೆ ಸಂಬಂಧ ಡಿಪಿಆರ್‌ಗೆ ಅನುಮೋದನೆ ಸಿಕ್ಕಿದೆ ಅಷ್ಟೇ. ಆದರೆ ಅರಣ್ಯ ಇಲಾಖೆ ಹಾಗೂ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಸಿಗಬೇಕಿದೆ. ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಚುನಾವಣೆ ಮುಗಿದು ಹೋಗುತ್ತದೆ. ಕೇವಲ ಪ್ರಚಾರಕ್ಕಾಗಿ ಅಷ್ಟೇ ಈ ರೀತಿ ಮಾಡುತ್ತಿದ್ದಾರೆ ಎಂದ ಅವರು, ಪ್ರಚಾರದ ಮೇಲೆ ಬದುಕುವವರು ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು. ಜಿಎಸ್ಟಿಸಂಗ್ರಹದಲ್ಲಿ ನಮ್ಮ ರಾಜ್ಯ 2ನೇ ಸ್ಥಾನದಲ್ಲಿದೆ. ರಾಜ್ಯದ ಸಾಲ ಹೆಚ್ಚುತ್ತಿದೆ. ಹೀಗಾಗಿ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ. ಹಣಕಾಸು ಆಯೋಗದಲ್ಲಿ ಅನ್ಯಾಯ ಆಗಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಕುಳಿತು ಮುಖ್ಯಮಂತ್ರಿಗಳು ಮಾತನಾಡುವ ಧಮ್ಮು ತಾಕತ್ತು ತೋರಿಸಲಿ, ನಮ್ಮ ರಾಜ್ಯದ ಜಿಎಸ್‌ಟಿ ಪಾಲು ತರಲಿ ಎಂದು ಸವಾಲು ಹಾಕಿದರು.
ರಾಜ್ಯದ ಸಾಲ 5.4ಲಕ್ಷ ಕೋಟಿಗೆ ಹೆಚ್ಚಳ: ಕೃಷ್ಣ ಬೈರೇಗೌಡ ಆತಂಕ
ಬಿಜೆಪಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ, ಬರೀ ಸಾಲ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ರಾಜ್ಯ ಸಾಲದಲ್ಲಿ ಮುಳುಗುತ್ತಿದೆ, ಚುನಾವಣೆ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ 1.36 ಕೋಟಿ ಬಿಡುಗಡೆ ಮಾಡಿದೆ, ಗುತ್ತಿಗೆದಾರರನ್ನು ಓಲೈಸಿ ಕಮೀಷನ್ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದರು. ರಾಜ್ಯಕ್ಕೆ ಬಿಜೆಪಿಯ ಕೇಂದ್ರ ನಾಯಕರು ಲಗ್ಗೆ ಇಡಲಿ. ನಮಗೇನು ಚಿಂತೆಯಿಲ್ಲ. ಈಗಾಗಲೇ ರಾಜ್ಯದಲ್ಲಿ ಕಮಲ ಅರಳುತ್ತಿಲ್ಲ, ಮುದುಡಿ ಹೋಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಹೇಗೆ ಕಮಲ ಅರಳಿಸುತ್ತಾರೆ ಎಂದು ಅವರು ಪರೋಕ್ಷವಾಗಿ ಅಮಿತ್ ಶಾ ರಾಜ್ಯ ಪ್ರವಾಸದ ಕುರಿತು ಪ್ರಸ್ತಾಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಿ.ಸಿ. ಗೌರಿಶಂಕರ್, ಬೋಜೇಗೌಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.