ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣವಿದೆ. ಜನ ಸಮಯ, ಸಂದರ್ಭ ನೋಡಿ ಆಶೀರ್ವಾದ ಮಾಡುತ್ತಾರೆ. ಜನರ ಆಶೀರ್ವಾದದಿಂದ ನಾವು ಗೆದ್ದು ಬಂದಿದ್ದೇವೆ. ಜನಸಾಮಾನ್ಯರಿಗಾಗಿ, ರೈತರಿಗಾಗಿ ಕೆಲಸ ಮಾಡಿದ ಕುಟುಂಬ ನಮ್ಮದು ಎಂದ ಎಚ್.ಡಿ.ಕುಮಾರಸ್ವಾಮಿ.
ಶಿವಮೊಗ್ಗ(ಫೆ.24): ನಾವು ಒಕ್ಕಲಿಗರಾಗಿ ಇರೋದೆ ಸಿ.ಟಿ.ರವಿಯವರಿಗೆ ಹೊಟ್ಟೆ ಉರಿ. ನಾವು ಯಾವುದನ್ನೂ ಗುತ್ತಿಗೆ ಪಡೆದಿಲ್ಲ. ಗೌಡಿಕೆಯನ್ನು ಗುತ್ತಿಗೆ ತೆಗೆದುಕೊಂಡಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪಂಚರತ್ನ ಯಾತ್ರೆ ಅಂಗವಾಗಿ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಗೌಡಿಕೆಯನ್ನು ಕುಮಾರಸ್ವಾಮಿಯವರ ಕುಟುಂಬಕ್ಕೆ ಗುತ್ತಿಗೆ ಕೊಟ್ಟು ಬಿಟ್ಟಿದ್ದೇವಾ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಹೇಳಿಕೆಗೆ ಕಿಡಿ ಕಾರಿದ ಕುಮಾರಸ್ವಾಮಿ, ನಾವು ಯಾವುದನ್ನೂ ಗುತ್ತಿಗೆ ಪಡೆದಿಲ್ಲ. ಗೌಡಿಕೆಯನ್ನು ಗುತ್ತಿಗೆ ತೆಗೆದುಕೊಂಡಿಲ್ಲ ಎಂದರು.
ಕುಟುಂಬ ರಾಜಕಾರಣಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣವಿದೆ. ಜನ ಸಮಯ, ಸಂದರ್ಭ ನೋಡಿ ಆಶೀರ್ವಾದ ಮಾಡುತ್ತಾರೆ. ಜನರ ಆಶೀರ್ವಾದದಿಂದ ನಾವು ಗೆದ್ದು ಬಂದಿದ್ದೇವೆ. ಜನಸಾಮಾನ್ಯರಿಗಾಗಿ, ರೈತರಿಗಾಗಿ ಕೆಲಸ ಮಾಡಿದ ಕುಟುಂಬ ನಮ್ಮದು ಎಂದರು.
ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ; ಇಂಥ ರಾಜಕಾರಣ ನಾನು ಇಂದಿಗೂ ಮಾಡಿಲ್ಲ: ಎಚ್‌ಡಿಕೆ
ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಹಾಸನದಲ್ಲಿ ಭವಾನಿ ರೇವಣ್ಣ, ಸಂಸದರು ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ. ಅಭ್ಯರ್ಥಿ ಘೋಷಣೆಯಾದ ಬಳಿಕ ಅವರ ಪರ ಪ್ರಚಾರ ಮಾಡುತ್ತಾರೆ. ಅಧಿಕಾರಕ್ಕಾಗಿ ವಿವಾದಿತ ಎಸ್‌ಡಿಪಿಐನಂತಹ ಪಕ್ಷಗಳ ಜೊತೆ ಕೈಜೋಡಿಸಲ್ಲ. ರೈತಸಂಘದಂತಹ ಪಕ್ಷಗಳು ಬಂದರೆ ಚಿಂತನೆ ನಡೆಸುತ್ತೇನೆ ಎಂದರು.
ಹಾರಗಳ ಸ್ವಾಗತ:
ಈ ಮಧ್ಯೆ, ಪಂಚರತ್ನ ಯಾತ್ರೆಗೆ ಆಗಮಿಸಿದ ಕುಮಾರಸ್ವಾಮಿಗೆ ವಿಶೇಷ ಹಾರಗಳನ್ನು ಹಾಕಿ ಸ್ವಾಗತ ಕೋರಲಾಯಿತು. ಶಿವಮೊಗ್ಗದ ಸೂಳೆಬೈಲಿನಲ್ಲಿ ಬೃಹತ್ ತುಳಸಿ ಹಾರ, ಬಿ.ಬೀರನಹಳ್ಳಿ, ಶೆಟ್ಟಿಹಳ್ಳಿಯಲ್ಲಿ ಸುಗಂಧರಾಜ ಹೂವಿನ ಬೃಹತ್ ಹಾರ, ಕಾಟಿಕೆರೆಯಲ್ಲಿ ರೆಡ್‌ರೋಸ್ ಹಾರ, ಪಿಳ್ಳೆಂಗೆರೆಯಲ್ಲಿ ಬಾಳೆಕಾಯಿ ಗೊನೆಯ ವಿಶೇಷ ಹಾರ, ಹಾರೋಬೆನಹಳ್ಳಿಯಲ್ಲಿ ಎಳನೀರು ಹಾರ, ಹೊಳೆಬೆನವಹಳ್ಳಿ, ಯಲವಟ್ಟಿಯಲ್ಲಿ ಬೃಹತ್ ಮೂಸಂಬಿ ಹಾರ, ಹಸೂಡಿ ಗ್ರಾಮದಲ್ಲಿ ಮಲ್ಲಿಗೆ ಹಾರ, ಪೈನಾಪಲ್ ಹಣ್ಣಿನ ಹಾರ ಹಾಕಿ ಕಾರ್ಯಕರ್ತರು ಅಭಿಮಾನ ಮೆರೆದರು.
ಇದೇ ವೇಳೆ, ಅವರು ಸೂಳೆಬೈಲು ಈದ್ಗಾ ಮೈದಾನಕ್ಕೆ ತೆರಳಿ, ಮುಸ್ಲಿಂ ಬಾಂಧವರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ, ಯಲವಟ್ಟಿಯಲ್ಲಿ ವೀರಭದ್ರೇಶ್ವರ ದೇವಸ್ಥಾನ, ಪಿಳ್ಳಂಗಿರಿ ಗ್ರಾಮದ ಲಕ್ಷ್ಮೇ ವೆಂಕಟೇಶ್ವರಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ, ದೇವರ ದರ್ಶನ ಪಡೆದರು. ಬಳಿಕ, ಹೊಳೆಬೆನವಳ್ಳಿಯಲ್ಲಿ ನವ ಜೋಡಿಗಳು ಕುಮಾರಸ್ವಾಮಿಯನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಈ ಮಧ್ಯೆ, ಶಿವಮೊಗ್ಗ ತಾಲೂಕಿನ ಬಿ.ಬೀರನಹಳ್ಳಿಯ ಮಾರುತಿ ಪ್ರೌಢಶಾಲೆ ಆವರಣದಲ್ಲಿ ಶಾಲಾ ಮಕ್ಕಳ ಜೊತೆ ಅವರು ಸಂವಾದ ನಡೆದರು.