
ಬೆಂಗಳೂರು(ಜು. 23) ಕೊರೋನಾ ಪರಿಕರಗಳ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ-ಪ್ರತ್ಯಾರೋಪ ಗಮನಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ.
ಹಳೇ ಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಮೊದಲು ಕೆಸರೆರಚಾಟ ನಿಲ್ಲಿಸಬೇಕು. ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವಾಗಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಿ, ಪರಿಣಾಮಕಾರಿಯಾಗಿ ಕೋವಿಡ್ ಅನ್ನು ನಿಗ್ರಹಿಸುವತ್ತ ಗಮನಹರಿಸಬೇಕು. ಕೋವಿಡ್ ನಿಗ್ರಹಿಸುವುದಕ್ಕೆ ನಮ್ಮ ಬೆಂಬಲ. ನಿಮ್ಮ ಕ್ಷುಲ್ಲಕ ನಡವಳಿಕೆಗಳಿಗಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಮೇಲೆ ಸಿದ್ದರಾಮಯ್ಯ ಮಾಡಿದ ಆರೋಪ ಏನು?
ಕೊರೋನಾ ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿರುವುದು ನಿಜವೇ ಆಗಿದ್ದರೆ, ಅದು ಆಡಳಿತ ಪಕ್ಷದ ನೈತಿಕತೆಯೇ ಇಲ್ಲದ, ಮನುಷ್ಯತ್ವ ಹೀನ ಕೃತ್ಯವೇ ಸರಿ. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹಳೇ ರಾಷ್ಟ್ರೀಯ ಪಕ್ಷ ಮತ್ತು ಅದರ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಅದು ಆ ನಾಯಕರ ರಾಜಕೀಯ ದಾಹದ ಪ್ರತೀಕ ಎಂದು ಆರೋಪಿಸಿದ್ದಾರೆ.
ಕೊರೋನಾ ಪರಿಕರಗಳ ಖರೀದಿ ಅಕ್ರಮದ ಬಗೆಗಿನ ಅತ್ಯಂತ ಹಳೇ ರಾಷ್ಟ್ರೀಯ ಪಕ್ಷವೊಂದರ ಆರೋಪ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಪ್ರತ್ಯಾರೋಪ, ಕಸರೆರಚಾಟವನ್ನು ಗಮನಿಸಿದೆ. ಕೋವಿಡ್ ಈ ರಾಜ್ಯದ ಪ್ರತಿಯೊಬ್ಬನ ಜೀವ, ಜೀವನಕ್ಕೆ ಬೆದರಿಕೆಯೊಡ್ಡಿರುವಾಗ, ಬದುಕನ್ನೇ ಕಸಿಯುತ್ತಿರುವಾಗ ಎರಡೂ ಪಕ್ಷಗಳ ಬೇಜವಾಬ್ದಾರಿ ವರ್ತನೆ ಕಂಡು ಬೇಸರವಾಗಿದೆ ಎಂದಿದ್ದಾರೆ.
ಸರ್ಕಾರ ಈಗ ರೇಷ್ಮೆಯನ್ನು ಖರೀದಿಸಿಟ್ಟುಕೊಳ್ಳಲಿ.ಮಾರುಕಟ್ಟೆ ಚೇತರಿಸಿಕೊಂಡ ನಂತರ ಒಳ್ಳೆ ಬೆಲೆಗೆ ಸರ್ಕಾರವೇ ಮಾರಿಕೊಳ್ಳಲಿ. ಆದರೆ,ಕೂಡಲೇ ರೀಲರ್‌ಗಳಿಂದ ರೇಷ್ಮೆ ಖರೀದಿ ಮಾಡಬೇಕು ಎಂಬುದು ಇಂದು ನನ್ನ ಜೊತೆ ಚರ್ಚೆಯಲ್ಲಿ ಭಾಗವಹಿಸಿದ್ದ ರೀಲರ್‌ಗಳ ಆಗ್ರಹವಾಗಿದೆ.ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಅಂತಿಮವಾಗಿ ರೈತರ ನಹಿತ ಕಾಯಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ಕಡೆ ಚೀನಾದ ರೇಷ್ಮೆ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದೆ. ನಮ್ಮ ರೈತರು ಮತ್ತು ರೀಲರ್‌ಗಳನ್ನು ಮುಗಿಸಲು ಆರಂಭಿಸಿದೆ. ಸರ್ಕಾರವೂ ಈಗ ಸಮಸ್ಯೆಗಳಿಗೆ ಕಣ್ಣು ಮುಚ್ಚಿ ಕುಳಿತು ರೇಷ್ಮೆ ಉದ್ದಿಮೆಯನ್ನೇ ಕೊಲ್ಲಬಾರದು. ಸರ್ಕಾರ ರೇಷ್ಮೆ ಬೆಳೆಗಾರರು ಮತ್ತು ರೀಲರ್‌ಗಳ ರಕ್ಷಣೆಗೆ ಕೂಡಲೇ ಧಾವಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮತ್ತು ಲಾಕ್‌ಡೌನ್‌ಗಳಿಂದಾಗಿ ಮಾರುಕಟ್ಟೆ ಇಲ್ಲದೇ ರಾಜ್ಯದಲ್ಲಿ 1000 ಕೋಟಿ ರೂ. ಮೌಲ್ಯದ ರೇಷ್ಮೆ ಖರೀದಿಯಾಗದೇ ಉಳಿದಿದೆ ಎಂಬ ಸಂಗತಿ ರೀಲರ್‌ಗಳು, ಬೆಳೆಗಾರರೊಂದಿಗೆ ಇಂದು ನಡೆಸಿದ ಚರ್ಚೆಯಲ್ಲಿ ತಿಳಿಯಿತು. ಸರ್ಕಾರ ಕೂಡಲೇ 450–500 ಕೋಟಿ ರೂ. ಮೊತ್ತದ ರೇಷ್ಮೆ ಖರೀದಿಸಿ ಬೆಳೆಗಾರರು, ರೀಲರ್‌ಗಳನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.