
ಬೆಂಗಳೂರು(ಮೇ.09): ಬಿಜೆಪಿಯಲ್ಲಿ ನನಗೆ ಯಾವುದೇ ಅನ್ಯಾಯವಾಗಿಲ್ಲ. ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ಗೌರವ ಸಿಕ್ಕಿರುವುದರಿಂದ ಸಂತೃಪ್ತಿಯಿಂದ ಇದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಸ್ವತಃ ರಾಜೀನಾಮೆ ನೀಡಿದೆ. ನಂತರ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಬಿಜೆಪಿಯಿಂದ ನನಗೆ ಯಾವುದೇ ಅನ್ಯಾಯವಾಗಿಲ್ಲ. ನನ್ನದು ಒಂದೇ ಗುರಿ. ಈ ಚುನಾವಣೆಯಲ್ಲಿ 135 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡಬೇಕು. ಬಳಿಕ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕು. ಈ ಗುರಿ ತಲುಪುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಬೊಮ್ಮಾಯಿ ಮತ್ತೆ ಸಿಎಂ ಆದರೆ ಅಭ್ಯಂತರ ಇಲ್ಲ: ಬಿ.ಎಸ್.ಯಡಿಯೂರಪ್ಪ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಏನನ್ನೂ ಮಾಡಲಿಲ್ಲ. ವೀರಶೈವ ಸಮಾಜವನ್ನು ಒಡೆಯಲು ಯತ್ನಿಸಿದ್ದರು. ಈಗ ಲಿಂಗಾಯತ ಸಮಾಜವನ್ನು ಎತ್ತಿಕಟ್ಟುತ್ತಿದ್ದಾರೆ. ಆದರೆ, ಲಿಂಗಾಯಿತರು ನಮ್ಮ ಬೆನ್ನಿಗೆ ಇದ್ದಾರೆ. ಮುಳುಗುವ ಹಡಗಾದ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಪ್ರಚಾರ ಮಾಡಿದ್ದರು. ಆದರೆ, ಅಲ್ಲಿ ಗೆದ್ದಿದ್ದು ಕೇವಲ ನಾಲ್ಕು ಸ್ಥಾನ ಮಾತ್ರ. ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಸಮನಲ್ಲ. ಕಾಂಗ್ರೆಸ್‌ಗೆ ನಾಯಕ ಯಾರು ಎಂಬುದೇ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿವಿಧೆಡೆ ರೋಡ್ ಶೋ ಮಾಡಿ ಜನರ ನಾಡಿಮಿಡಿತ ನೋಡಿದ್ದಾರೆ. ಈ ಬಾರಿ ಬಿಜೆಪಿ 130-140 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೀರಶೈವ ಲಿಂಗಾಯಿತ ಸ್ವಾಮೀಜಿಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಬಗ್ಗೆ ಡಿಕೆಶಿ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ, ವೀರಶೈವ ಲಿಂಗಾಯಿತ ಸಮುದಾಯದ 60-70 ಸ್ವಾಮೀಜಿಗಳು ನನ್ನನ್ನು ಕರೆಸಿ ಮಾತನಾಡಿದ್ದಾರೆ. ಮೋದಿ ಅಪರೂಪದ ಪ್ರಧಾನಿ. ಈ ಬಾರಿ ಸಮುದಾಯ ಬಿಜೆಪಿಗೆ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಜತೆಗೆ ನಿಲ್ಲುವುದಿಲ್ಲ ಎಂದೂ ಹೇಳಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.