
ಬೆಂಗಳೂರು(ಮಾ.30): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಯಶಸ್ವಿಯಾಗಿ ಮುನ್ನಡೆದರೆ ಕಾಂಗ್ರೆಸ್ ಸರ್ವನಾಶವಾಗಿ ಅಡ್ರೆಸ್ ಇಲ್ಲದಂತಾಗುತ್ತದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಕ್ಷಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರದ ಮದದಿಂದ ಮೈಮರೆತಿರುವ ಸರ್ಕಾರಕ್ಕೆ ಮುಂದೆ ಏನಾಗುತ್ತದೆ ಎಂಬುದನ್ನು ಈಗ ಹೇಳುವುದಿಲ್ಲ, ಮುಂದಿನ ದಿನದಲ್ಲಿ ಗೊತ್ತಾಗಲಿದೆ. ಯಾವ ಶಕ್ತಿಗಳು ಬಂದರೂ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದರು.
ಲೋಕಸಭೆ ಚುನಾವಣೆ 2024: ಕಾಂಗ್ರೆಸ್ ಸೋಲಿಸಲು ಬಿಜೆಪಿ, ಜೆಡಿಎಸ್ ಮೈತ್ರಿಪಕ್ಷಗಳ ಸಂಕಲ್ಪ
ಬಿಜೆಪಿ ಮತ್ತು ಜೆಡಿಎಸ್ ಬೇರೆಯಲ್ಲ. ನಾವೆಲ್ಲ ಒಂದೇ ತಾಯಿ ಮಕ್ಕಳಂತೆ. ಅಭ್ಯರ್ಥಿ ಯಾರೇ ಇರಲಿ, ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಪಣ ತೊಡಬೇಕು. ಆಗ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ನಮ್ಮ ಪ್ರಯತ್ನವನ್ನು ತಡೆಯಲು ಯಾರಿಂದಲೂ ಅಸಾಧ್ಯ ಎಂದು ಯಡಿಯೂರಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನ ರಜೆ ಪಡೆಯದೆ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಮತ್ತು ದೇಶ- ವಿದೇಶಗಳಲ್ಲಿ ನಿರಂತರ ಪ್ರವಾಸ ಮಾಡುತ್ತಿದ್ದಾರೆ. ಈ ಹರೆಯದಲ್ಲೂ ಅತ್ಯಂತ ಉತ್ಸಾಹದಿಂದ ರಾಜ್ಯ ಪ್ರವಾಸ ಮಾಡಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಿದ್ಧರಾಗಿದ್ದಾರೆ. ಇವರಿಬ್ಬರೂ ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.