ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಮಾಪ್ತರಾಗಿದ್ದ ಮೋಹನ ಲಿಂಬಿಕಾಯಿ ಅರವಿಂದ್ ಬೆಲ್ಲದ ವಿರುದ್ಧ ಸ್ಪರ್ಧೆ?
ಹುಬ್ಬಳ್ಳಿ(ಮಾ.17): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಮಾಪ್ತರಾಗಿದ್ದ, ಅವರಿಗೆ ಕಾನೂನು ಸಲಹೆಗಾರರಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ದೊಡ್ಡ ಶಾಕ್ ನೀಡಿದಂತಾಗಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಲಿಂಬಿಕಾಯಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದು ಕಾಂಗ್ರೆಸ್‌ನಲ್ಲಿನ ಟಿಕೆಟ್ ಆಕಾಂಕ್ಷಿಗಳಲ್ಲೂ ತಳಮಳ ಸೃಷ್ಟಿಸಿದೆ.
ಲಿಂಬಿಕಾಯಿ ಅವರು ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಚ್.ಕೆ.ಪಾಟೀಲರನ್ನು ಪರಾಭವಗೊಳಿಸಿದ್ದರು. ಈ ಮೂಲಕ ಪರಿಷತ್ ಪ್ರವೇಶಿಸಿದ್ದ ಲಿಂಬಿಕಾಯಿ, ಮುಂದೆ 2013ರಲ್ಲಿ ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅಲ್ಲದೆ ಆಗ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿ ಅರವಿಂದ ಬೆಲ್ಲದ ವಿರುದ್ಧ ಸೋಲುಂಡಿದ್ದರು. ಬಳಿಕ ಮತ್ತೆ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ಮರಳಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಲಹೆಗಾರರಾಗಿದ್ದರು.
ಕರ್ನಾಟಕದಲ್ಲಿ ಮಹಾರಾಷ್ಟ್ರ ಆರೋಗ್ಯ ವಿಮೆ: ಕಾಂಗ್ರೆಸ್ಸಿಂದ ತೀವ್ರ ತರಾಟೆ
ಮುಂದೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಕೇಳಿದ್ದರು. ಆದರೆ ಜೆಡಿಎಸ್‌ನಿಂದ ಬಸವರಾಜ ಹೊರಟ್ಟಿಅವರೇ ಬಿಜೆಪಿಗೆ ಬಂದಿದ್ದರಿಂದ ಇವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಆಗಿನಿಂದ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದರು.
ಗುರುವಾರ ಬೆಳಗ್ಗೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಲಿಂಬಿಕಾಯಿ, ಸಂಜೆ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಮುಖಂಡರ ಸಮ್ಮುಖ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಸೇರಿದ್ದೇನೆ. ಯಾವುದೇ ಷರತ್ತಿಲ್ಲದೆ ಸೇರ್ಪಡೆಯಾಗಿದ್ದೇನೆ. ಪಕ್ಷ ಕೊಟ್ಟಜವಾಬ್ದಾರಿ ನಿಭಾಯಿಸುತ್ತೇನೆ ಅಂತ ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ತಿಳಿಸಿದ್ದಾರೆ.