ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಹೊರಟಿರುವುದು ಜಾತಿ ಗಣತಿ ಹೌದೋ ಅಲ್ಲವೋ ಎನ್ನುವ ಸ್ಪಷ್ಟತೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ (ಅ.13): ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಹೊರಟಿರುವುದು ಜಾತಿ ಗಣತಿ ಹೌದೋ ಅಲ್ಲವೋ ಎನ್ನುವ ಸ್ಪಷ್ಟತೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ಪ್ರಕಟವಾದರೆ ಕೆಲವು ಸಮುದಾಯಗಳಿಗೆ ಅಸಮಾಧಾನವಾಗಲಿದೆಯಾ? ಎಂಬುದರ ಕುರಿತು ಮೊದಲು ಚರ್ಚೆಯಾಗಲಿ. ಹಿಂದಿನ ಕಾಂಗ್ರೆಸ್ ಸರ್ಕಾರ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಬಹುದಿತ್ತು. ಚುನಾವಣೆ ಬಂತು ಅಂತ ಆ ಸಮಯದಲ್ಲಿ ಮಾಡಲಿಲ್ಲ. ಈಗ ಈ ಬಗ್ಗೆ ಮಾತನಾಡುತ್ತಾರೆ.
ಅದು ಜಾತಿಗಣತಿ ಹೌದೋ ಅಲ್ಲವೋ ಅನ್ನುವುದರ ಬಗ್ಗೆ ಈ ವರೆಗೂ ಸ್ಪಷ್ಟತೆ ಇಲ್ಲ. ಈಗಲಾದರೂ ಸರ್ಕಾರ ಸ್ಪಷ್ಟತೆ ನೀಡಬೇಕು. ಹಿಂದೆ ₹160 ಕೋಟಿ ಖರ್ಚು ಮಾಡಿ ಜಾತಿ ಸಮೀಕ್ಷೆ ಮಾಡಿದ್ದು ಅದು ಯಾವ ಜಾತಿ ಸಮೀಕ್ಷೆ ಎನ್ನುವ ಸ್ಪಷ್ಟತೆ ಇಲ್ಲ. ಅದರ ಬಗ್ಗೆಯೂ ಸರ್ಕಾರ ಸ್ಪಷ್ಟತೆ ನೀಡಲಿ ಎಂದರು. ವರದಿ ಆಧಾರದ ಮೇಲೆ ಸಾಧಕ, ಬಾಧಕಗಳ ಕುರಿತು ಚರ್ಚಿಸೋಣ ಎಂದು ಕಾಂಗ್ರೆಸ್ಸಿನ ನಾಯಕರು ಹೇಳಿದ್ದಾರೆ. ಈ ಸಮೀಕ್ಷೆಯ ಫಲಶ್ರುತಿ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ, ಫಲಿತಾಂಶ ಏನಾಗುತ್ತದೆ? ಕೆಲವು ವರ್ಗದಲ್ಲಿ ಅಸಮಾಧಾನ ಉಂಟಾಗುತ್ತಾ ಈ ಬಗ್ಗೆ ಮೊದಲು ಚರ್ಚೆಯಾಗಲಿ. ಸಿಡಬ್ಲ್ಯೂಸಿ ಸಭೆಯಲ್ಲಿ ಜಾತಿ ಗಣತಿ ಜಾರಿ ಮಾಡುವ ಕುರಿತು ನಿರ್ಣಯ ತೆಗೆದುಕೊಂಡಿದ್ದಾರೆ, ಅವರು ಮಾಡಲಿ ಎಂದರು.
ರೈತರ ಅನುದಾನಕ್ಕೆ ಸಿದ್ದರಾಮಯ್ಯ ಕತ್ತರಿ: ಜಿ.ಟಿ.ದೇವೆಗೌಡ ಆರೋಪ
ತನಿಖೆ ನಡೆಸಲಿ: ನರಗುಂದ ಸೇರಿದಂತೆ ಕೆಲ ಕ್ಷೇತ್ರಗಳ ಹಿಂದಿನ ಕಾಮಗಾರಿಗಳ ತನಿಖೆ ಮಾಡಲು ಮುಖ್ಯಮಂತ್ರಿಗಳು ಶಿಫಾರಸು ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನರಗುಂದ ಸೇರಿದಂತೆ ಯಾವುದೇ ಕ್ಷೇತ್ರವಾಗಲಿ ನಡೆದ ಕಾಮಗಾರಿಗಳ ತನಿಖೆ ಮಾಡಲಿ. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಎಲ್ಲ ಇಲಾಖೆಯ ಕಾಮಗಾರಿಗಳ ತನಿಖೆಯಾಗಲಿ, ಬೇಡ ಅಂದವರು ಯಾರು? ಕಾಮಗಾರಿ ಎಲ್ಲವೂ ಮುಗಿದಿದೆ. ಬಿಲ್ ಗಳನ್ನು ಸಹ ಕೊಡಲಾಗಿದೆ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿನ ಕಾಮಗಾರಿಗಳ ಬಿಲ್ಲನ್ನು ಸರ್ಕಾರ ಇನ್ನೂ ಕೊಟ್ಟಿಲ್ಲ. ಮೊದಲು ಬಿಲ್ಲುಗಳನ್ನು ಕೊಡಲಿ, ನಂತರ ಎಲ್ಲೆಲ್ಲಿ ತಪ್ಪುಗಳು ನಡೆದಿದೆ ಎಂಬುದರ ಬಗ್ಗೆ ತನಿಖೆಯಾಗಲಿ ಎಂದರು.
ರಾಜ್ಯ ಸರ್ಕಾರಕ್ಕೆ ಕೇಂದ್ರದ ಸ್ಟ್ರೋಕ್: ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ತೋರಿಸುತ್ತಿರುವ ಕುರಿತು ಮಾತನಾಡಿದ ಬೊಮ್ಮಾಯಿ, ರಾಜ್ಯಕ್ಕೆ ಕೇಂದ್ರ ಸರ್ಕಾರದ ಸ್ಟ್ರೋಕ್ ಆಗಿದೆ. ಬರ, ಕಾವೇರಿ ಗೊಂದಲ ಆದರೂ ಎಲ್ಲದಕ್ಕೂ ಕೇಂದ್ರದ ಕಡೆಗೆ ಬೆರಳು ತೋರಿಸುತ್ತಾರೆ. ಈಗ ರಾಜ್ಯದಲ್ಲಿ ವಿದ್ಯುತ್ ಅಭಾವದ ಹಿನ್ನೆಲೆ ಕೇಂದ್ರಕ್ಕೆ ಬೊಟ್ಟು ಮಾಡುತ್ತಿದ್ದಾರೆ. ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸರಿಯಾದ ಕಲ್ಲಿದ್ದಲು ಒದಗಿಸಿ. ವಿದ್ಯುತ್ ಉತ್ಪಾದನೆ ಮಾಡಿದರೆ ಈ ಸಮಸ್ಯೆ ಬರುತ್ತಿರಲಿಲ್ಲ. ತಮ್ಮ ಹಣಕಾಸಿನ ದುಸ್ಥಿತಿಗೆ ಅಸಮರ್ಪಕ ಕೆಲಸದಿಂದ ವಿದ್ಯುತ್ ಸಮಸ್ಯೆ ಬಿಗಡಾಯಿಸಿದೆ. ಸರಿಯಾದ ವಿದ್ಯುತ್ತನ್ನು ಪೂರೈಸುವುದು ರಾಜ್ಯ ಸರ್ಕಾರದ ಕರ್ತವ್ಯ. ವಿದ್ಯುತ್ ಉತ್ಪಾದನೆಗೆ ಕೇಂದ್ರ ಏನು ಸಹಾಯ ಮಾಡಬೇಕು ಎಂದು ಪ್ರಶ್ನಿಸಿದರು.
ಹಮಾಸ್‌ರಿಗೆ ಕಾಂಗ್ರೆಸ್ ಬೆಂಬಲ ಖಂಡನಾರ್ಹ: ಪ್ಯಾಲೆಸ್ತೀನ್‌ನಲ್ಲಿರುವ ಹಮಾಸ್ ಉಗ್ರರಿಗೆ ಕಾಂಗ್ರೆಸ್ ಬೆಂಬಲಿಸುತ್ತಿರುವುದು ಖಂಡನಾರ್ಹ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇದೊಂದು ಅಂತಾರಾಷ್ಟ್ರೀಯ ವಿಚಾರ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವೆ ಬಹಳ ವರ್ಷಗಳ ಸಂಘರ್ಷವಿದೆ. ಹಮಾಸರು ಉಗ್ರವಾದಿಗಳು. ಅವರು ಪ್ಯಾಲೆಸ್ತೀನ್ ನಾಗರಿಕರಲ್ಲ, ಅದನ್ನು ಕಾಂಗ್ರೆಸ್ ಮರೆಮಾಚಲು ಪ್ರಯತ್ನಿಸುತ್ತಿದೆ.
ಲೋಕಸಭೆ ಚುನಾವಣೆ ಜಯಕ್ಕೆ 'ಗ್ಯಾರಂಟಿ' ಅಸ್ತ್ರ ಬಳಸಿ: ಸಚಿವ ಕೃಷ್ಣ ಬೈರೇಗೌಡ
ಪ್ಯಾಲೆಸ್ತೀನ್‌ನಲ್ಲಿರುವಂತಹ ಭಯೋತ್ಪಾದಕರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಅವರ ಹಕ್ಕುಗಳ ಪರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಧ್ವನಿ ಎತ್ತಿರುವುದು ಖಂಡನಾರ್ಹ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಭಯೋತ್ಪಾದಕರು ಒಂದೇ. ಅಮಾಯಕರು, ಹೆಣ್ಣುಮಕ್ಕಳು, ಮಕ್ಕಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತಿದೆ. ಇದನ್ನು ಯಾವುದೇ ಸಮಾಜ ಹಾಗೂ ಸಮುದಾಯ ಒಪ್ಪಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತೆ ತುಷ್ಟಿಕರಣದ ರಾಜಕಾರಣಕ್ಕೆ ಇಳಿಯುತ್ತಿರುವುದು ದೊಡ್ಡ ದುರಂತ ಎಂದರು.