ಸಕ್ರಿಯ ರಾಜಕಾರಣಕ್ಕೆ ಪರೋಕ್ಷ ನಿವೃತ್ತಿ ಘೋಷಿಸಿದ ಯಡಿಯೂರಪ್ಪ? ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ

By Sharath Sharma  |  First Published Jul 22, 2022, 2:52 PM IST

BS Yediyurappa: ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನನಾಯಕ ಬಿ ಎಸ್‌ ಯಡಿಯೂರಪ್ಪ ಸಕ್ರಿಯ ರಾಜಕಾರಣಕ್ಕೆ ಪರೋಕ್ಷವಾಗಿ ಗುಡ್‌ ಬೈ ಹೇಳಿದ್ದಾರೆ. ತಮ್ಮ ಶಿಕಾರಿಪುರ ಕ್ಷೇತ್ರವನ್ನು ಮಗ ಬಿವೈ ವಿಜಯೇಂದ್ರನಿಗೆ ಬಿಟ್ಟುಕೊಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ.


ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕೇಳಿ ಬರುವ ಪ್ರಮುಖ ಹೆಸರು ಬಿಎಸ್‌ ಯಡಿಯೂರಪ್ಪ. ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಪೂರ್ಣಾವಧಿ ಮುಗಿಸದೇ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಇದೀಗ ಸಕ್ರಿಯ ರಾಜಕಾರಣದಿಂದಲೇ ಯಡಿಯೂರಪ್ಪ ನಿರ್ಗಮಿಸಲಿದ್ದಾರೆ ಎಂಬ ಊಹಾಪೋಹ ಅವರ ನಡೆಯಿಂದಲೇ ಆರಂಭವಾಗಿದೆ. ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರದಲ್ಲಿ ಮಾತನಾಡಿದ ಅವರು, ಕ್ಷೇತ್ರವನ್ನು ಮಗ ಬಿವೈ ವಿಜಯೇಂದ್ರ ಅವರಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಬೂಕನಹಳ್ಳಿ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ವರ್ಣ ರಂಜಿತ ರಾಜಕೀಯ ಇತಿಹಾಸ ನೇಪಥ್ಯಕ್ಕೆ ಸರಿಯಲಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಸ್ಪರ್ಧಿಸುವುದಿಲ್ಲ ಎಂಬುದು ಅವರ ಹೇಳಿಕೆಯಿಂದಲೇ ಸ್ಪಷ್ಟವಾಗುತ್ತಿದೆ. ಇಲ್ಲವಾದಲ್ಲಿ ಮಗನಿಗೆ ಬೇರೊಂದು ಕ್ಷೇತ್ರವನ್ನು ಕೇಳಿ ಪಡೆಯುವ ತಾಕತ್ತು ಅವರಿಗಿದ್ದರೂ, ತಮ್ಮ ಕ್ಷೇತ್ರವನ್ನೇ ತ್ಯಾಗ ಮಾಡಿದ್ದಾದರೂ ಏಕೆ ಎಂಬ ಪ್ರಶ್ನೆ ಹುಟ್ಟುತ್ತದೆ. ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನನ್ನ ಮಗ ವಿಜಯೇಂದ್ರನನ್ನು ಗೆಲ್ಲಿಸಬೇಕು. ಈ ಕ್ಷೇತ್ರಕ್ಕಾಗಿ ನಾನು ಎಲ್ಲವನ್ನೂ ಸಮಪರ್ಪಣೆ ಮಾಡಿದ್ದೇನೆ. ಶಕ್ತಿ ಮೀರಿ ಶ್ರಮಿಸಿದ್ದೇನೆ, ನನಗೆ ನೀಡಿದ ಬೆಂಬಲವನ್ನು ನನ್ನ ಮಗನಿಗೂ ನೀಡಬೇಕು ಎಂದು ಹೇಳಿದ್ದಾರೆ. 

ಯಡಿಯೂರಪ್ಪ ಬಿಜೆಪಿ ಹೈಕಮಾಂಡ್‌ ನಿರ್ಧಾರದಿಂದ ಬೇಸರಗೊಂಡಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವಯಸ್ಸಿನ ಕಾರಣ ನೀಡಿ, ಖುದ್ದು ಯಡಿಯೂರಪ್ಪನವರೇ ರಾಜೀನಾಮೆ ನೀಡುವಂತೆ ಹೈಕಮಾಂಡ್‌ ಮಾಡಿತ್ತು. ಇದು ಅವರಲ್ಲಿ ಸಾಕಷ್ಟು ಬೇಸರವನ್ನು ಮೂಡಿಸಿತ್ತು. ರಾಜೀನಾಮೆ ನೀಡುವ ವೇಳೆ ಅವರು ಕಣ್ಣೀರು ಕೂಡ ಹಾಕಿದ್ದರು. ಇದೀಗ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಲಕ್ಷಣ ಕಾಣುತ್ತಿದೆ. ಇದು ಬಿಜೆಪಿಗೆ ದೊಡ್ಡ ಪೆಟ್ಟಾಗಲಿದೆ. ಇಂದಿಗೂ ಬಿಜೆಪಿಯಲ್ಲಿ ಅತಿದೊಡ್ಡ ನಾಯಕ ಯಡಿಯೂರಪ್ಪ. ಶಾಸಕರಲ್ಲಿ ಕೆಲವರು ಅವರ ವಿರುದ್ಧ ಅಭಿಪ್ರಾಯ ಹೊಂದಿದ್ದರೂ, ಜನರಲ್ಲಿ ಬಿಜೆಪಿ ಅಂದರೆ ಯಡಿಯೂರಪ್ಪ. ಲಿಂಗಾಯತ ಸಮುದಾಯದ ಏಕೈಕ ದೈತ್ಯ ನಾಯಕ ಯಡಿಯೂರಪ್ಪ. ಇಡೀ ಸಮುದಾಯ ಬಿಜೆಪಿ ಮತ ಹಾಕುತ್ತದೆ ಎಂದರೆ ಅದಕ್ಕೆ ಯಡಿಯೂರಪ್ಪ ಅವರೇ ಕಾರಣ. ಹೀಗಿರುವಾಗ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿದರೆ, ಲಿಂಗಾಯತ ಸಮುದಾಯದ ಮತಗಳು ಬೇರೆ ಪಕ್ಷಗಳಿಗೆ ಹೋಗುವ ಸಾಧ್ಯತೆಯಿದೆ. ಇದು ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

Tap to resize

Latest Videos

ಇದನ್ನೂ ಓದಿ: ಜು.24ರಿಂದ 3 ದಿನ ಸಿಎಂ ಬೊಮ್ಮಾಯಿ ದಿಲ್ಲಿ ಭೇಟಿ: ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪ

ಯಡಿಯೂರಪ್ಪ ಅವರ ಹೇಳಿಕೆಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಸಕ್ರಿಯ ರಾಜಕಾರಣದಿಂದ ದೂರ ಇರುವವರಲ್ಲ. ಅವರು ಸುಮ್ಮನೆ ಕೂರುವ ನಾಯಕರಲ್ಲ ಎಂಬ ಪ್ರತಿಕ್ರಿಯೆ ಕೇಳಿಬಂದಿದೆ. ಸಚಿವ ಎಂಟಿಬಿ ನಾಗರಾಜ್‌ ಪ್ರತಿಕ್ರಿಯಿಸಿ, "ಯಾಕೆ ಅವರು ಚುನಾವಣೆ ನಿಲ್ಲಲ್ಲ ಅವರನ್ನೇ ಕೇಳಬೇಕು. ಅವರು ವಯಸ್ಸಾಯ್ತು ಅಂತ ಭಾವಿಸಿರಬಹುದು. ಯಡಿಯೂರಪ್ಪ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೂರು ಸಾರಿ ಸಿಎಂ ಆಗಿದ್ದೇನೆ ಅಂತ ಅವರ ಮನಸ್ಸಿಗೂ ಬಂದಿರಬಹುದು. ಅವರು ಚುನಾವಣೆ ದೂರ ಸರಿದರೆ ಏನೂ ಪರಿಣಾಮ ಬೀರಲ್ಲ. ಅವರು ಸಕ್ರಿಯವಾಗಿ ರಾಜಕೀಯದಲ್ಲಿ ಇರ್ತಾರೆ ಅವರು ಮಕ್ಕಳೂ ಇದ್ದಾರಲ್ಲ. ಸುಮ್ಮನೆ ಮನೆಯಲ್ಲಿ ಕೂರುವವರಲ್ಲ ಅವರು. ಯಡಿಯೂರಪ್ಪನವರೂ ಇರಬೇಕು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು," ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಸಂತೋಷ್‌ ಪ್ರಕ​ರ​ಣದಿಂದ ಚೌಡೇ​ಶ್ವರಿ ಮುಕ್ತಿ ನೀಡಿ​ದ್ದಾ​ಳೆ: ಈಶ್ವ​ರ​ಪ್ಪ

ಯಡಿಯೂರಪ್ಪ ಅವರ ಹೇಳಿಕೆ ಆಶ್ಚರ್ಯ ಹಾಗೂ ಆಘಾತವಾಗಿದೆ ಎಂದು ಅವರ ನಿಕಟವರ್ತಿ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ. "ನಮ್ಮನ್ನ ರಾಜಕಾರಣ ತಂದು ಬೆಳೆಸಿದವರು ಯಡಿಯೂರಪ್ಪ ಅವರು. ರೈಸ್ ಮಿಲ್ ಗುಮಾಸ್ತನಾಗಿ ರಾಜ್ಯದ ಸಿಎಂ ಆದವರು ಅವರು. ಯಡಿಯೂರಪ್ಪ ಅವರಿಗೆ ಬಿಜೆಪಿ ಕುಟುಂಬ ಇದ್ದಂತೆ. ಯಡಿಯೂರಪ್ಪ ಅವರು ರಾಜಕೀಯದಲ್ಲಿ ಇರಬೇಕು. ಅವರು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಬೇಕು. ಯಡಿಯೂರಪ್ಪ ಅವರನ್ನ ಕಡೆಗಣಿಸುವ ಪ್ರಶ್ನೆ ಇಲ್ಲ. ಪಕ್ಷದಲ್ಲಿ ಯಡಿಯೂರಪ್ಪ ಅವರನ್ನ ಯಾರೂ ಸೈಡ್ ಲೈನ್ ಮಾಡಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸಬೇಕು. ವಿಜಯೇಂದ್ರ ಅವರ ಸ್ಪರ್ಧೆ ಕುರಿತು ಪಕ್ಷ ತೀರ್ಮಾನ ಮಾಡುತ್ತೆ. ಆದರೆ ಯಡಿಯೂರಪ್ಪ ಅವರು ನಮ್ಮ ಮಾರ್ಗದರ್ಶಕರಾಗಿ ಇರಬೇಕು. ಅವರೇ ಹೇಳಿದಂತೆ ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರಬೇಕು. ರಾಜ್ಯದ ಉದ್ದಗಲಕ್ಕೆ ಸಂಚಾರ ಮಾಡಬೇಕು," ಎಂದು ರೇಣುಕಾಚಾರ್ಯ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ. 

click me!