ಹಿಂದಿನ ಹಾಗೂ ಹಾಲಿ ಆಯೋಗ ಸಲ್ಲಿಸಿರುವ ಎರಡು ವರದಿ ಸಲ್ಲಿಕೆಯಾದರೆ ಸರ್ಕಾರದ ಯಾವ ತೀರ್ಮಾನ ತೆಗೆದುಕೊಳ್ಳಬಹುದು? ಹಿಂದಿನ ಆಯೋಗ ಸಿದ್ದಪಡಿಸಿರುವ ವರದಿ ಪರಿಷ್ಕರಣೆ ಮಾಡಿ ಸಲ್ಲಿಸಲು ಕಾನೂನಿನ ಪ್ರಕಾರ ಸಾಧ್ಯವೆ ಎಂಬ ಹತ್ತಾರು ಪ್ರಶ್ನೆಗಳಿಗೆ ಎಚ್. ಕಾಂತರಾಜು ಈ ಬಾರಿಯ ‘ಕನ್ನಡಪ್ರಭ’ದ ‘ಮುಖಾಮುಖಿ’ಯಲ್ಲಿ ಉತ್ತರಿಸಿದ್ದಾರೆ.
ಎಂ.ಆರ್. ಚಂದ್ರಮೌಳಿ
ಬಿಹಾರ ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಬೆನ್ನಲ್ಲೇ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಹಿಂದಿನ ಅಧ್ಯಕ್ಷರಾದ ಎಚ್. ಕಾಂತರಾಜು ನೇತೃತ್ವದ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಮುನ್ನೆಲೆಗೆ ಬಂದಿದೆ. ಸರ್ಕಾರ ವರದಿ ಅಂಗೀಕರಿಸಿ ಜಾರಿಗೆ ಮುಂದಾಗಬೇಕು ಎಂಬ ಒತ್ತಡ ನಿಧಾನವಾಗಿ ಆರಂಭವಾಗಿದೆ. ನವೆಂಬರ್ ಮೂರನೇ ವಾರದೊಳಗೆ ಸರ್ಕಾರಕ್ಕೆ ಹಿಂದಿನ ಆಯೋಗ ಸಲ್ಲಿಸಿರುವ ವರದಿ ಜೊತೆಗೆ ಹಾಲಿ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅಧ್ಯಕ್ಷತೆಯ ಆಯೋಗ ಸಲ್ಲಿಸಲಿರುವ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಈ ನಡುವೆ ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವರದಿಯನ್ನು ಅಂಗೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ವರದಿ ಅಂಗೀಕರಿಸಿ ಜಾರಿ ತಂದರೆ ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಏರಿಳಿತವಾಗುತ್ತಾ? ಹಿಂದುಳಿದ ವರ್ಗದಲ್ಲೇ ಒಳ ಮೀಸಲಾತಿ ತರುವ ಒತ್ತಡ ಬರುವ ಸಾಧ್ಯತೆ ಇದೆಯೇ? ಹಿಂದಿನ ಹಾಗೂ ಹಾಲಿ ಆಯೋಗ ಸಲ್ಲಿಸಿರುವ ಎರಡು ವರದಿ ಸಲ್ಲಿಕೆಯಾದರೆ ಸರ್ಕಾರದ ಯಾವ ತೀರ್ಮಾನ ತೆಗೆದುಕೊಳ್ಳಬಹುದು? ಹಿಂದಿನ ಆಯೋಗ ಸಿದ್ದಪಡಿಸಿರುವ ವರದಿ ಪರಿಷ್ಕರಣೆ ಮಾಡಿ ಸಲ್ಲಿಸಲು ಕಾನೂನಿನ ಪ್ರಕಾರ ಸಾಧ್ಯವೆ ಎಂಬ ಹತ್ತಾರು ಪ್ರಶ್ನೆಗಳಿಗೆ ಎಚ್. ಕಾಂತರಾಜು ಈ ಬಾರಿಯ ‘ಕನ್ನಡಪ್ರಭ’ದ ‘ಮುಖಾಮುಖಿ’ಯಲ್ಲಿ ಉತ್ತರಿಸಿದ್ದಾರೆ.
ಬಿಎಂಟಿಸಿಗೆ ಬಹುಕೋಟಿ ವಂಚನೆ, ಅಧಿಕಾರಿಗಳಿಂದಲೇ ನಕಲಿ ಸಹಿ: ಎಷ್ಟು ಹಣ, ಅಧಿಕಾರಿಗಳ ಹೆಸರೇನು?
* ಬಿಹಾರದ ಜಾತಿ ಗಣತಿ ಬಹಿರಂಗವಾಗಿ ರಾಜ್ಯದಲ್ಲೂ ಜಾತಿ ಸಮೀಕ್ಷೆ ಬಹಿರಂಗಕ್ಕೆ ಒತ್ತಡ ನಿರ್ಮಾಣವಾಗಿದೆ. ನೀವು ಮಾಡಿದ್ದೂ ಜಾತಿ ಸಮೀಕ್ಷೇನಾ?
ಬಿಹಾರದಲ್ಲಿ ನಡೆದಿರುವ ಗಣತಿಯ ಪ್ರಶ್ನಾವಳಿ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಮಾಧ್ಯಮಗಳಲ್ಲಿ ಜಾತಿ ಗಣತಿ ಎಂದೇ ಬರುತ್ತಿದೆ. ನನ್ನ ಅಭಿಪ್ರಾಯದಲ್ಲಿ ಕೇವಲ ಜಾತಿ ಆಧರಿಸಿ ಗಣತಿ ಮಾಡಿರಲಿಕ್ಕಿಲ್ಲ. ಯಾಕೆಂದರೆ ಕೇವಲ ಜಾತಿ ಗಣತಿ ಆಧರಿಸಿ ಹಿಂದುಳಿದ ವರ್ಗಗಳಿಗೆ ಸೌಲಭ್ಯ ಕೊಡುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ. ಹೀಗಾಗಿ ನಾವು ಜಾತಿಯನ್ನು ಒಂದು ಅಂಶವಾಗಿಟ್ಟುಕೊಂಡು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಎಷ್ಟರಮಟ್ಟಿಗೆ ಹಿಂದುಳಿದಿದ್ದಾರೆಂಬುದನ್ನು ತಿಳಿದುಕೊಳ್ಳಲು 55 ಪ್ರಶ್ನಾವಳಿ ಮಾಡಿ ಮಾಹಿತಿ ಸಂಗ್ರಹಿಸಿದ್ದೇವೆ.
* ದೇಶದ ಪ್ರಧಾನಿ ನರೇಂದ್ರ ಮೋದಿ ಇಂತಹ ಸಮೀಕ್ಷೆಗಳಿಂದ ಸಂಘರ್ಷವಾಗಬಹುದು ಎನ್ನುತ್ತಾರಲ್ಲ?
ಸಮೀಕ್ಷೆಯಿಂದ ಸಂಘರ್ಷ ನಡೆಯುವುದಿಲ್ಲ ಎಂಬುದು ತಮ್ಮ ಖಚಿತ ಅಭಿಪ್ರಾಯ. ನನ್ನ ಪ್ರಕಾರ ಸಮಾಜದ ಎಲ್ಲ ಜಾತಿ ಸಮುದಾಯಗಳು ಸಮಾನವಾಗಿ ಬದುಕಲು ಏನೇನು ಮಾಡಬೇಕು ಎಂಬುದನ್ನು ಸರ್ಕಾರ ತಿಳಿದುಕೊಳ್ಳಲು ಇರುವ ಏಕೈಕ ಮಾರ್ಗ ಜಾತಿ ಆಧರಿತ ಸಮೀಕ್ಷೆ. ಏಕೆಂದರೆ, ಜಾತಿ ನಮ್ಮ ಸಮಾಜದ ವಾಸ್ತವ, ಅದನ್ನು ಒಪ್ಪಿಕೊಳ್ಳಲೇಬೇಕು. ಈ ದೃಷ್ಟಿಯಿಂದ ಮೋದಿ ಅವರ ಅಭಿಪ್ರಾಯ ತಪ್ಪು ಎಂಬುದು ನನ್ನ ಅಭಿಮತ. ಏಕೆಂದರೆ, ನಮ್ಮ ದೇಶದಲ್ಲಿನ ಜಾತಿ ವ್ಯವಸ್ಥೆ ಎಷ್ಟು ಆಳವಾಗಿ ಇದೆ ಎಂಬುದನ್ನು ನೋಡಬೇಕು. ಜಾತಿ ಕಾರಣಕ್ಕಾಗಿಯೇ ಸಮಾಜದಲ್ಲಿನ ಅನೇಕರು ಸೌಲಭ್ಯ ವಂಚಿತರಾಗಿದ್ದಾರೆ, ಹಿಂದುಳಿದಿದ್ದಾರೆ. ಹಾಗೇ ನೋಡಿದರೆ ಎಲ್ಲ ಜಾತಿಯಲ್ಲೂ ಬಡವರು ಇದ್ದಾರೆ, ನಿಜ. ಅದನ್ನು ಪರಿಗಣಿಸಬೇಕು. ಆದ್ದರಿಂದ ಜಾತಿಯ ಅಂಶವನ್ನೂ ಸಹ ಇಟ್ಟುಕೊಂಡೇ ಸಮೀಕ್ಷೆಯನ್ನು ನಾವು ಮಾಡಿದ್ದೇವೆ.
* ಇಂತಹದೊಂದು ಸಮೀಕ್ಷೆಯಿಂದ ಜನತೆಗೇನು ಪ್ರಯೋಜನ?
ನಮ್ಮ ವರದಿ ನೋಡಿ ಅದನ್ನು ಸರ್ಕಾರ ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ ಯಾರಿಗೆ ಎಷ್ಟು ಅನುಕೂಲವಾಗುತ್ತದೆ ಎಂಬುದು ಗೊತ್ತಾಗುತ್ತದೆ. ನಾವು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಸಮಾಜದಲ್ಲಿ ಇರುವ ಪರಿಸ್ಥಿತಿ ಆಧರಿಸಿ ವರದಿ ಕೊಟ್ಟಿರುತ್ತೇವೆ. ಅದನ್ನು ನೋಡಿ ಸರ್ಕಾರ ನಿರ್ಧಾರ ಮಾಡಬೇಕಾಗುತ್ತದೆ. ಇನ್ನೂ ಜನರಲ್ ಆಗಿ ಹೇಳಬಹುದಾದರೆ ಸಂವಿಧಾನ ಅಥವಾ ಯಾವುದೇ ಸರ್ಕಾರದ ಉದ್ದೇಶ ಜನರ ಸ್ಥಿತಿಗತಿಗೆ ಅನುಗುಣವಾಗಿ ಸ್ಪಂದಿಸಬೇಕು. ಅನುಕೂಲ ಮಾಡಿಕೊಡಬೇಕು ಎಂಬುದಾಗಿದೆ. ಹೀಗೆ ಅನುಕೂಲ, ಸೌಲಭ್ಯ ಕೊಡಬೇಕಾದರೆ ಜನರ ಸಮಸ್ಯೆ, ಅವರ ಅಗತ್ಯತೆ ಏನೆಂಬ ಮಾಹಿತಿ ಬೇಕಾಗುತ್ತದೆ. ಹಾಗಾಗಿ ಜನಗಣತಿ ಅಥವಾ ಸಮೀಕ್ಷೆ ಅಭಿವೃದ್ಧಿಗೆ ಪೂರಕವಾಗಿದೆ ಎಂದೇ ಹೇಳಬೇಕಾಗುತ್ತದೆ.
* ಮೀಸಲಾತಿ ಹೆಚ್ಚಳಕ್ಕೆ ಇಂತಹ ಸಮೀಕ್ಷೆ ಪೂರಕವೇ?
ದೇಶದಲ್ಲಿ 1931ರ ನಂತರ ಇತರೆ ಹಿಂದುಳಿದ ವರ್ಗಗಳ ಅವರ ವಿವರಗಳು ಬರಲಿಲ್ಲ. ಜೊತೆಗೆ ಮೀಸಲಾತಿ ಎಷ್ಟು ಕೊಡಬೇಕು ಎಂಬ ವಿಷಯ ಚರ್ಚೆಗೆ ಬಂದಿರಲಿಲ್ಲ. ಆದೆ ಮೀಸಲಾತಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಬಂದಾಗ ಮೀಸಲಾತಿ ಪ್ರಮಾಣ ಶೇ. 50ಕ್ಕಿಂತ ಹೆಚ್ಚಿರಬಾರದು ಎಂದು ತೀರ್ಪು ನೀಡಿದೆ. ಈಗ ಬಿಹಾರದ ಗಣತಿಯಲ್ಲಿ ಹಿಂದುಳಿದ ವರ್ಗಗಳು ಶೇ. 63ಕ್ಕಿಂತ ಜಾಸ್ತಿ ಇದ್ದಾರೆಂಬ ಮಾಹಿತಿ ಬಂದಿದೆ. ಈಗ ಅಲ್ಲಿ ಹಿಂದುಳಿದವರು ಶೇ. 63ರಷ್ಟಿದ್ದರೂ ಮೀಸಲಾತಿ ಸೌಲಭ್ಯ ಕೊಡಲು ಬರುವುದಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಸಂವಿಧಾನ ಕೂಡಾ ಇಷ್ಟೇ ಮೀಸಲಾತಿ ಕೊಡಬೇಕು, ಅಥವಾ ಕೊಡಬಾರದು ಎಂದು ಹೇಳಿಲ್ಲ. ಅಷ್ಟೇ ಅಲ್ಲ ನಮ್ಮ ಹತ್ತಿರ ನಿಖರವಾದ ಅಂಕಿ-ಅಂಶಗಳು ಇಲ್ಲ ಎಂದು ಹೇಳಿದ. ಅದರರ್ಥ ನಿಖರವಾದ ಅಂಕಿ-ಅಂಶ ಬಂದಾಗ ತೀರ್ಮಾನ ಮಾಡಬಹುದು ಎಂಬುದನ್ನು ಪರೋಕ್ಷವಾಗಿ ಹೇಳಿದೆ. ಹಾಗಾಗಿ ಅಂಕಿ-ಅಂಶ ಕೊಟ್ಟು, ಪರಿಶಿಷ್ಟರು, ಹಿಂದುಳಿದವರು ಇಷ್ಟು ಸಂಖ್ಯೆಯಲ್ಲಿ ಇದ್ದಾರೆ ಸೂಕ್ತವಾದ ಮೀಸಲಾತಿ ಕೊಡಿ ಎಂದು ಕೇಳುವಂತಹ ಸಂದರ್ಭ ಬರಬಹುದು. ಈ ವಿಷಯ ರಾಜ್ಯಕ್ಕೆ ಸೀಮಿತವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಮುಂದೆ ಕೇಳಬಹುದಾಗಿದೆ.
* ಇಂತಹ ಸಮೀಕ್ಷೆಗಳಿಂದ ಹಿಂದುಳಿದ ಸಮುದಾಯಗಳಲ್ಲಿ ಒಳ ವರ್ಗೀಕರಣ ಸಾಧ್ಯವೇ?
ಖಂಡಿತವಾಗಿ ಇದೆ, ಹಿಂದುಳಿದ ವರ್ಗದಲ್ಲೇ ಅತಿ ಹಿಂದುಳಿದ ಸಮುದಾಯಗಳಿಗೆ ಕೇವಲ ಮೀಸಲಾತಿ ನೀಡಿದರೆ ಸಾಕಾಗುವುದಿಲ್ಲ. ಒಳವರ್ಗೀಕರಣ ಮಾಡಿದಾಗ ಮಾತ್ರ ಸೌಲಭ್ಯಗಳು ಅವಕಾಶ ವಂಚಿತರಿಗೆ ಸಿಗಲು ಸಾಧ್ಯ. ಅಂತಹ ವ್ಯವಸ್ಥೆ ಬರಬೇಕು.
* ಸಮೀಕ್ಷೆಯ ಉದ್ದೇಶ ಹಿಂದುಳಿದವರಿಗೆ ಸೌಲಭ್ಯ ಸಿಗಬೇಕು ಎಂಬುದು. ಅದನ್ನು ಈಗಾಗಲೇ ಸರ್ಕಾರಗಳು ಕೊಡುತ್ತಿವೆಯಲ್ಲ?
ನಿಜ, ಸ್ವಾತಂತ್ರ್ಯ ಬಂದಾಗಿನಿಂದ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ಬಗೆಯ ಅನುಕೂಲ ಮಾಡಿಕೊಡುತ್ತಲೇ ಬಂದಿವೆ. ಆದರೆ ಎಷ್ಟರ ಮಟ್ಟಿಗೆ ಹಿಂದುಳಿದ ಸಮಾಜಗಳಿಗೆ ಅವು ತಲುಪಿವೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಇಂತಹ ಸಮೀಕ್ಷೆ ಅಗತ್ಯ. ಒಂದು ವೇಳೆ ಯಾವುದೇ ಸಮುದಾಯ ಅಭಿವೃದ್ಧಿಯಾಗಿದ್ದರೆ, ಸಮಾನತೆ ಬಂದಿದ್ದರೆ ಈಗ ಕೊಡುವ ಸೌಲಭ್ಯ ಮುಂದುವರಿಸಿದರೆ ಸಾಕು. ಇಂದೂ ಕೂಡಾ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಶಿಕ್ಷಣದಲ್ಲಿ ದೊಡ್ಡ ಅಸಮಾನತೆ ಇದೆ.ಕಲಿಕೆ ಮಟ್ಟ, ಸೌಲಭ್ಯಗಳ ವ್ಯತ್ಯಾಸವಿದೆ. ಇವೆಲ್ಲ ಸಮೀಕ್ಷೆಗಳ ಮೂಲಕ ಗೊತ್ತಾಗುತ್ತದೆ.
* ಸಮೀಕ್ಷೆ ಬಗ್ಗೆ ಕೆಲವು ಸಮುದಾಯಗಳಿಂದ ತೀವ್ರ ವಿರೋಧವಿದೆ?
ವಿರೋಧ ಮಾಡಲು, ಅಭಿಪ್ರಾಯ ಹೇಳಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಕೆಲವರಿಗೆ ವರದಿ ಜಾರಿಗೆ ಬಂದರೆ ನಮ್ಮ ಜಾತಿ, ಸಮುದಾಯಕ್ಕೆ ತೊಂದರೆ ಆಗಬಹುದು ಎಂಬ ಭಾವನೆ ಬಂದಿರಬಹುದು. ಆದರೆ ವರದಿ ಬಂದ ನಂತರ ಅಭಿಪ್ರಾಯ ಬದಲಾಗಬಹುದು. ಯಾವ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಬಗ್ಗೆ ಗೊತ್ತಿಲ್ಲ. ಆದರೆ ಸುಪ್ರೀಂ ಕೋರ್ಟ್ ಇಂತಹ ಸಮೀಕ್ಷೆ ಮಾಡವುದು ಸರಿ ಎಂದು ಹೇಳಿದೆ.
* ನಿಮ್ಮ ವರದಿಯ ದತ್ತಾಂಶ ಆಧರಿಸಿ ಪರಿಷ್ಕೃತ ವರದಿ ಸಲ್ಲಿಸುವುದಾಗಿ ಹಾಲಿ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳುತ್ತಾರೆ?
ಸರ್ಕಾರ ಆಯೋಗಕ್ಕೆ ಏನು ಹೇಳಿದೆ ಎಂಬುದು ಗೊತ್ತಿಲ್ಲ. ಆದರೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಕಾಂತರಾಜ ಆಯೋಗದ ವರದಿ ಜೊತೆಗೆ ತಮ್ಮ ವರದಿಯನ್ನು ಸಲ್ಲಿಸುವುದಾಗಿ ಹೇಳಿದ್ದಾರೆಂಬುದು ಮಾತ್ರ ಗೊತ್ತು. ಪರಿಷ್ಕೃತ ವರದಿ ಸಲ್ಲಿಕೆ ಬಗ್ಗೆ ನಮಗೆ ಗೊತ್ತಿಲ್ಲ, ಸರ್ಕಾರ ಕೇಳಿದರೆ ತಮ್ಮ ವರದಿ ಸಲ್ಲಿಸಬೇಕಾಗುತ್ತದೆ. ಕಾಯ್ದೆ ಪ್ರಕಾರ ನನ್ನ ವರದಿಯನ್ನು ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಸಲು ಅವಕಾಶವಿಲ್ಲ.
* ತಮ್ಮ ವರದಿ 2019ರಲ್ಲೇ ಸಲ್ಲಿಕೆಯಾದರೂ ಈವರೆಗೆ ಅಂಗೀಕಾರವಾಗಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯೇ?
ರಾಜಕೀಯದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಈ ಸಮೀಕ್ಷೆ ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷ, ಸರ್ವ ಸಮಾಜ ಒಪ್ಪಬೇಕು. ಇಂತಹ ವರದಿ ಬೇಡವೇ ಬೇಡ ಎಂದರೆ ಯಥಾಸ್ಥಿತಿ ಮುಂದುವರೆಯಬೇಕು ಎಂಬ ಭಾವನೆ ಬರುತ್ತದೆ. ಆದ್ದರಿಂದ ಸಮಾಜ ಬದಲಾವಣೆ ಆಗಲು ಎಲ್ಲರೂ ಸ್ವಾಗತಿಸಬೇಕು.
ಬೆಂಗಳೂರಿನಲ್ಲಿ 31 ಸಾವಿರ ಬೀದಿ ನಾಯಿಗಳು ಇಳಿಕೆ: ಬಿಬಿಎಂಪಿ ಸಮೀಕ್ಷೆ
* ವರದಿ ಅಂಗೀಕಾರವಾಗಿ ಯಥಾವತ್ ಜಾರಿಯಾದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದೇ?
ಸಮೀಕ್ಷಾ ವರದಿಉದ್ದೇಶವೇ ಸಮಾಜದ ನ್ಯೂನತೆ ಸರಿಪಡಿಸುವುದು. ಯಾರು ಅವಕಾಶದಿಂದ ವಂಚಿತರಾಗಿದ್ದಾರೆ, ಎಷ್ಟರ ಮಟ್ಟಿಗೆ ಅವಕಾಶ ಕಡಿಮೆಯಾಗಿದೆ ಎಂಬುದನ್ನು ತಿಳಿಸುವುದಾಗಿದೆ. ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಸಿಗದೇ ಇರುವವರು ಹೆಚ್ಚಿನ ಅನುಕೂಲ ನೀಡುವಂತೆ ಕೇಳಬಹುದು. ಇತ್ತೀಚೆಗೆ ಹಿಂದುಳಿದ ಸಮುದಾಯಗಳಿಗೂ ಸಾಕಷ್ಟು ಅರಿವು ಬಂದಿದೆ.
* ಸದ್ಯದ ರಾಜಕೀಯ ವಾತಾವರಣ, ಭವಿಷ್ಯದ ಚುನಾವಣೆ, ಗಮನಿಸಿದರೆ ಈ ವರದಿಗಳು ಜಾರಿಯಾಗಬಹುದೇ?
ವರದಿಯನ್ನು ಪುರಸ್ಕರಿಸುವ ಅಥವಾ ನಿರಾಕರಿಸುವ ಹಕ್ಕು ಸರ್ಕಾರಕ್ಕೆ ಇರುತ್ತದೆ. ಆದರೆ ನಿರಾಕರಿಸಿದರೆ ಅದಕ್ಕೆ ಕಾರಣ ಹೇಳಬೇಕಾಗುತ್ತದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ವರದಿ ಅಂಗೀಕರಿಸುವುದಾಗಿ ಹೇಳಿದ್ದಾರೆ. ಯಾವ ಉದ್ದೇಶಕ್ಕಾಗಿ ಈ ವರದಿ ನೀಡುವಂತೆ ಕೇಳಿದ್ದರೋ ಅದಕ್ಕೆ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ಇದೆ.