
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ರಾತ್ರಿ ದೆಹಲಿಗೆ ತೆರಳಿದ್ದು, ಪ್ರಮುಖವಾಗಿ ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಐದು ನಾಮನಿರ್ದೇಶನ ಸ್ಥಾನಗಳಿಗೆ ವಿವಿಧ ಕ್ಷೇತ್ರಗಳಿಂದ ಗಣ್ಯರ ಹೆಸರು ಅಂತಿಮಗೊಳಿಸುವ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲಿದ್ದಾರೆ.
ಇದೇ ವೇಳೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿಯಾಗಿರುವ ಒಂದು ಸ್ಥಾನ ಮತ್ತು ಮೊದಲೇ ಖಾಲಿ ಇದ್ದ ಮತ್ತೊಂದು ಸ್ಥಾನ ಸೇರಿ ಎರಡು ಸಚಿವ ಸ್ಥಾನಗಳ ಭರ್ತಿ ಕುರಿತೂ ವರಿಷ್ಠರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.
ಈ ಸ್ಥಾನಗಳಿಗೆ ಪ್ರಮುಖವಾಗಿ ಖ್ಯಾತ ನಟ ವಿ.ರವಿಚಂದ್ರನ್, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ.ಪ್ರಭಾಕರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ರಮೇಶ್ ಬಾಬು, ಯು.ಬಿ.ವೆಂಕಟೇಶ್, ಮಾಜಿ ಸಚಿವೆ ರಾಣಿ ಸತೀಶ್, ಮುಖಂಡರಾದ ಕಾಂತಾ ನಾಯಕ್, ವಿಜಯ್ ಮುಳಗುಂದ್ ಅವರ ಹೆಸರುಗಳು ಕೇಳಿಬರುತ್ತಿವೆ.
ಸಂವಿಧಾನದ 171ರ ಅನುಚ್ಛೇದದಡಿ ವಿಧಾನ ಪರಿಷತ್‌ಗೆ ಸಹಕಾರ, ಕಲೆ ಅಥವಾ ಚಿತ್ರರಂಗ, ಸಾಹಿತ್ಯ, ವಿಜ್ಞಾನ ಮತ್ತು ಸಮಾಜಸೇವೆ ಕ್ಷೇತ್ರಗಳಿಂದ ಐವರು ಸದಸ್ಯರನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಲು ಅವಕಾಶವಿದೆ. ಈ ಐದು ಸ್ಥಾನಗಳಿಗೆ ಈ ಹಿಂದೆ ನಾಮನಿರ್ದೇಶನಗೊಂಡಿದ್ದವರ ಅಧಿಕಾರಾವಧಿ ಪೂರ್ಣಗೊಂಡು ತೆರವಾಗಿರುವುದರಿಂದ ಈಗ ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಿದೆ.
ಈ ಪೈಕಿ ಚಿತ್ರರಂಗದಿಂದ ಖ್ಯಾತ ನಟ ಕ್ರೇಜಿಸ್ಟ್ರಾರ್ ರವಿಚಂದ್ರನ್, ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಅವರ ಹೆಸರುಗಳು ಕೇಳಿಬಂದಿವೆ. ಸಾಧುಕೋಕಿಲ ಅವರಿಗೆ ಈಗಾಗಲೇ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಆಪ್ತರಾಗಿರುವ ರವಿಚಂದ್ರನ್ ಅವರ ನಾಮನಿರ್ದೇಶನಕ್ಕೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಇನ್ನು, ಪತ್ರಿಕೋದ್ಯಮ ಕ್ಷೇತ್ರದಿಂದ ಕೆ.ವಿ.ಪ್ರಭಾಕರ್ ಅವರ ಹೆಸರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ರಮೇಶ್ ಬಾಬು ಅವರಿಗೆ ಈ ಹಿಂದೆ ಕೇವಲ 10 ತಿಂಗಳು ಮಾತ್ರ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿತ್ತು. ಹಾಗಾಗಿ ಈ ಬಾರಿ ಅವರಿಗೆ ಮತ್ತೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಅದೇ ರೀತಿ ಬ್ರಾಹ್ಮಣ ಸಮುದಾಯದ ಯು.ಬಿ.ವೆಂಕಟೇಶ್ ಮತ್ತು ವಿಜಯ್ ಮುಳಗುಂದ ಅವರ ಹೆಸರು, ಮಹಿಳಾ ವಿಭಾಗದಿಂದ ರಾಣಿ ಸತೀಶ್ ಮತ್ತು ಕಾಂತಾ ನಾಯಕ್ ಅವರ ಹೆಸರು ಚರ್ಚೆಯಲ್ಲಿದ್ದು, ಮುಖ್ಯಮಂತ್ರಿ ಅವರು ವರಿಷ್ಠರೊಂದಿಗೆ ಚರ್ಚಿಸಿ ಹೆಸರುಗಳನ್ನು ಅಂತಿಮಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವೇಳೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿಯಾಗಿರುವ ಒಂದು ಸ್ಥಾನ ಮತ್ತು ಮೊದಲೇ ಖಾಲಿ ಇದ್ದ ಮತ್ತೊಂದು ಸ್ಥಾನ ಸೇರಿ ಎರಡು ಸಚಿವ ಸ್ಥಾನಗಳ ಭರ್ತಿ ಕುರಿತೂ ವರಿಷ್ಠರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚಿಸುವ ಸಾಧ್ಯತೆ ಇದೆ.
ಮಾಹಿತಿ ಪ್ರಕಾರ, ತಮ್ಮ ಸಂಪುಟದಲ್ಲಿ ಈವರೆಗೆ ಮಹಿಳಾ ಪ್ರಾತಿನಿಧ್ಯ ಇಲ್ಲದ ಕಾರಣ ಖಾಲಿ ಇರುವ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಸಂಡೂರು ಶಾಸಕಿ ಅನ್ನಪೂರ್ಣ ಅವರಿಗೆ ನೀಡುವ ಯೋಚನೆ ಮುಖ್ಯಮಂತ್ರಿ ಅವರಲ್ಲಿದೆ ಎನ್ನಲಾಗುತ್ತಿದೆ.
ಈ ಮಧ್ಯೆ, ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಆ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದಾರೆ. ಆದರೆ, ಈ ಹಿಂದೆ ಸಂಪುಟ ವಿಸ್ತರಣೆ ವೇಳೆ ಒಂದು ಸ್ಥಾನಕ್ಕೆ ಗಾಯತ್ರಿ ಶಾಂತೇಗೌಡ ಮತ್ತು ಬಸವರಾಜ ಶಿವಣ್ಣವರ ಅವರ ನಡುವೆ ಪೈಪೋಟಿ ನಡೆದಿತ್ತು. ಈಗ ಆ ಸ್ಥಾನವನ್ನು ಅನ್ನಪೂರ್ಣ ಅವರಿಗೆ ನೀಡಿದರೆ ಅದೇ ಸಮುದಾಯಕ್ಕೂ ನೀಡಿದಂತಾಗುತ್ತದೆ. ಜತೆಗೆ ಮಹಿಳಾ ಕೋಟಾವೂ ಪೂರ್ಣಗೊಳ್ಳುತ್ತದೆ ಎನ್ನುವ ಲೆಕ್ಕಾಚಾರ ಮುಖ್ಯಮಂತ್ರಿ ಅವರದ್ದು ಎನ್ನಲಾಗುತ್ತಿದೆ.
ಉಳಿದ ಇನ್ನೊಂದು ಸ್ಥಾನಕ್ಕೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರನ್ನು ಪರಿಗಣಿಸಬೇಕೆಂಬ ಒತ್ತಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಯಿಂದ ಇದೆ. ಜೊತೆಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ವಿಜಯನಗರ ಶಾಸಕ ಎಂ.ಕೃಷ್ಣಪ್ಪ(ಲೇಔಟ್ ಕೃಷ್ಣಪ್ಪ) ಅವರಿಗೂ ಅವಕಾಶ ನೀಡಬೇಕಾದ ಅನಿವಾರ್ಯತೆಯಲ್ಲಿ ಪಕ್ಷ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸಚಿವ ಮಾಗಡಿ ಬಾಲಕೃಷ್ಣ ಅವರ ರಾಜೀನಾಮೆ ಪಡೆದು ಅವರಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡುವ ಮನವೊಲಿಕೆ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಇದಕ್ಕೆ ಅವರು ಒಪ್ಪುತ್ತಾರಾ? ಎನ್ನುವುದು ಕುತೂಹಲ ಮೂಡಿಸಿದೆ.
ವಿಧಾನ ಪರಿಷತ್‌ನ ನಾಮನಿರ್ದೇಶಿತ ಸದಸ್ಯ ಸ್ಥಾನಗಳಿಗೆ ಸಹಕಾರ, ಸಾಹಿತ್ಯ, ಸಮಾಜಸೇವೆ ಸೇರಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಥವಾ ಸಾಧಕ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಸಮಾಜಸೇವೆ ಮತ್ತಿತರ ಹೆಸರಲ್ಲಿ ರಾಜಕಾರಣಿಗಳನ್ನೇ ಆ ಸ್ಥಾನಗಳಿಗೆ ನಾಮನಿರ್ದೇಶನ ಮಾಡುತ್ತಿವೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಇನ್ನು ಮುಂದೆ ಆ ರೀತಿ ಮಾಡಬಾರದು ಎನ್ನುವುದು ವಿವಿಧ ಕ್ಷೇತ್ರಗಳ ನಾಯಕರಿಂದ ಕೇಳಿಬರುತ್ತಿರುವ ಆಗ್ರಹವಾಗಿದೆ.
ಚಿತ್ರರಂಗದಿಂದ ರವಿಚಂದ್ರನ್/ ಸಾಧುಕೋಕಿಲ, ಪತ್ರಿಕೋದ್ಯಮದಿಂದ ಕೆ.ವಿ.ಪ್ರಭಾಕರ್, ಬ್ರಾಹ್ಮಣ ಸಮುದಾಯದ ಯು.ಬಿ.ವೆಂಕಟೇಶ್/ವಿಜಯ್ ಮುಳಗುಂದ, ಮಹಿಳಾ ವಿಭಾಗದಿಂದ ರಾಣಿ ಸತೀಶ್/ಕಾಂತಾ ನಾಯಕ್, ಹಾಲಿ ಸದಸ್ಯ ರಮೇಶ್ ಬಾಬು ಅವರಿಗೆ ಮತ್ತೊಂದು ಬಾರಿ ಅವಕಾಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.