Assembly Elections 2022: ಪಂಚರಾಜ್ಯ ಚುನಾವಣೆಯಲ್ಲಿ ಪಂಚ ಕನ್ನಡಿಗರ ಸಾರಥ್ಯ!

By Kannadaprabha NewsFirst Published Jan 17, 2022, 4:32 AM IST
Highlights

*   ಯುಪಿ, ಉತ್ತರಾಖಂಡ, ಗೋವಾದಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಗೆ ಕರ್ನಾಟಕದ ಚುನಾವಣಾ ಉಸ್ತುವಾರಿಗಳು
*   ಬಿಜೆಪಿಯಿಂದ ಶೋಭಾ, ಜೋಶಿ, ಸಿ.ಟಿ.ರವಿ, ಸಂತೋಷ್‌ಗೆ ಜವಾಬ್ದಾರಿ
*  ಗೋವಾದಲ್ಲಿ ರವಿ ವರ್ಸಸ್‌ ದಿನೇಶ್‌ ಗುಂಡೂರಾವ್‌
 

ಡೆಲ್ಲಿ ಮಂಜು

ನವದೆಹಲಿ(ಜ.17):  ಜವಾಬ್ದಾರಿ ಎಂಥದ್ದೇ ಇರಲಿ ನಿಭಾಯಿಸಿ ಸೈ ಎನ್ನಿಸಿಕೊಳ್ಳುವುದರಲ್ಲಿ ಕನ್ನಡಿಗರು(Kannadigas) ಸದಾ ಮುಂದು. ಅದರಲ್ಲೂ ರಾಜಕೀಯ(Politics) ಚುದುರಂಗದಲ್ಲಿ ಎದುರಾಳಿಗಳ ವಿರುದ್ಧ ತಂತ್ರಗಾರಿಕೆಯ ದಾಳ ಉರುಳಿಸುವುದರಲ್ಲೂ ನಿಸ್ಸೀಮರು! ಬಹುಷಃ ಇದನ್ನು ಅರಿತೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ(BJP) ಮತ್ತು ಕಾಂಗ್ರೆಸ್‌ಗಳೆರಡೂ(Congress) ಕನ್ನಡಿಗರಿಗೆ ಚುನಾವಣಾ ತಂತ್ರಗಾರರ ಜವಾಬ್ದಾರಿ ಹೊರಿಸಿ, ಗೆಲುವಿನ ತಂತ್ರಗಾರಿಕೆ ರೂಪಿಸುವಂತೆ ಈ ಬಾರಿ ಕಳುಹಿಸಿಕೊಟ್ಟಿವೆ.

ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ(Pralhad Joshi), ಶೋಭಾ ಕರಂದ್ಲಾಜೆ(Shobha Karandlaje), ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌(BL Santosh), ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿCT Ravi), ಮಾಜಿ ಸಚಿವ ದಿನೇಶ್‌ ಗುಂಡೂರಾವ್‌(Dinesh Gundurao) ಸತ್ವ ಪರೀಕ್ಷೆಗೆ ಪಂಚರಾಜ್ಯದ ಚುನಾವಣೆ(Election) ವೇದಿಕೆಯಾಗಲಿದೆ.

40% Commission ದಾಖಲೆ ಬಿಡುಗಡೆ ಮಾಡಿದ್ರೆ ಸರ್ಕಾರ ಪತನ, ಹೊಸ ಬಾಂಬ್ ಸಿಡಿಸಿದ ಗುತ್ತಿಗೆದಾರರ ಸಂಘ

ಪಂಚರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ 2024ರ ಸಾರ್ವತ್ರಿಕ ಚುನಾವಣೆಗೆ(General Election of 2024) ಸೆಮಿಫೈನಲ್‌ ಅಂತಲೇ ಹೇಳಲಾಗುತ್ತಿದೆ. ಅದರಲ್ಲೂ ಉತ್ತರ ಪ್ರದೇಶದ(Uttar Pradesh ಗೆಲುವು ಮುಂದಿನ ಲೋಕಸಭಾ ಚುನಾವಣೆಯ ವಿಜಯಗೀತೆ ಬರೆಯಲಿದೆ ಅನ್ನುವುದು ಕೂಡ ಅಷ್ಟೇ ಸತ್ಯ. ಇಂತಹ ಚುನಾವಣಾ ಚದುರಂಗದಾಟದಲ್ಲಿ ತಂತ್ರಗಾರಿಕೆಯ ಭಾಗವಾಗಿ ಕನ್ನಡಿಗರು ಕಾಣಿಸಿಕೊಳ್ಳುತ್ತಿದ್ದಾರೆ.

ಯುಪಿ, ಉತ್ತರಾಖಂಡ ಗೋವಾದಲ್ಲಿ ಕೆಲಸ:

ಭಾರತೀಯ ಜನತಾ ಪಕ್ಷದದಿಂದ ಉತ್ತರ ಪ್ರದೇಶ ಸಹ ಪ್ರಭಾರಿಯಾಗಿ ಶೋಭಾ ಕರಂದ್ಲಾಜೆ, ಉತ್ತರಾಖಂಡ(Uttarakhand) ಚುನಾವಣಾ ಪ್ರಭಾರಿಯಾಗಿ ಪ್ರಹ್ಲಾದ್‌ ಜೋಶಿ, ಗೋವಾಕ್ಕೆ(Goa) ಸಿ.ಟಿ.ರವಿ (ಗೋವಾ ರಾಜ್ಯದ ಬಿಜೆಪಿ ಉಸ್ತುವಾರಿ ಸಹ) ಚುನಾವಣಾ ಅಖಾಡದಲ್ಲಿ ಇದ್ದಾರೆ. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್‌.ಸಂತೋಷ್‌ ಇವೆರಲ್ಲರ ಮೇಲೆ ಮೇಟಿಯಂತೆ ಕೆಲಸ ನಿರ್ವಹಿಸಲಿದ್ದಾರೆ. ಇನ್ನು, ಕೆಪಿಸಿಸಿಯ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗೋವಾ ರಾಜ್ಯದ ಕಾಂಗ್ರೆಸ್‌ ಉಸ್ತುವಾರಿಯಾಗಿ ಚುನಾವಣೆಯ ಜವಾಬ್ದಾರಿ ಹೊತ್ತಿದ್ದಾರೆ. ಎಂಎಲ್‌ಸಿ ಹರಿಪ್ರಸಾದ್‌ ಸೇರಿ ಹಲವರನ್ನು ತಂತ್ರಗಾರಿಕೆಯ ಭಾಗವಾಗಿ ಕಾಂಗ್ರೆಸ್‌ ಪಕ್ಷ ನಿಯೋಜಿಸಲಿದೆ ಎನ್ನಲಾಗಿದೆ.

ಕನ್ನಡಿಗ ವರ್ಸಸ್‌ ಕನ್ನಡಿಗ:

ಎರಡನೇ ತಲೆಮಾರಿನ ನಾಯಕರ ಸಾಮರ್ಥ್ಯ, ಬುದ್ಧಿವಂತಿಕೆ ಹಾಗೂ ತಂತ್ರಗಾರಿಕೆಗಳನ್ನು ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶಕ್ಕೆ ಬಿಜೆಪಿ, ಕಾಂಗ್ರೆಸ್‌ ನಾ ಮುಂದು, ತಾ ಮುಂದು ಎಂದು ಕನ್ನಡಿಗರನ್ನು ಬಳಸಿಕೊಳ್ಳುತ್ತಿವೆ. ಚುನಾವಣೆಗಳ ಉಸ್ತುವಾರಿಗಳಾಗಿ, ರಾಜ್ಯಗಳಿಗೆ ಪಕ್ಷದ ಉಸ್ತುವಾರಿಗಳಾಗಿ ಕನ್ನಡಿಗರು ಕೆಲಸ ನಿರ್ವಹಿಸಿರುವುದು ಇದೇ ಮೊದಲಲ್ಲ. ಈ ಬಾರಿ ಗೋವಾದಲ್ಲಿ ಕನ್ನಡಿಗ ವರ್ಸಸ್‌ ಕನ್ನಡಿಗ ಎಂಬಂತೆ ತಂತ್ರಗಾರರು ಅಖಾಡದಲ್ಲಿ ಮುಖಾಮುಖಿಯಾಗಲಿದ್ದಾರೆ. ಗೋವಾಕ್ಕೆ ಎರಡು ಪಕ್ಷಗಳಿಂದ ಇಬ್ಬರೂ ಕನ್ನಡಿಗರೇ ಉಸ್ತುವಾರಿ. ಪಕ್ಷದ ಸಂಘಟನೆ ಜೊತೆಗೆ ಚುನಾವಣೆ ಹೊತ್ತಲ್ಲಿ ಗೆಲುವಿನ ತಂತ್ರಗಾರಿಕೆ ಮಾಡುವ ಹೊಣೆಗಾರಿಕೆ ಕೂಡ ಇವರ ಹೆಗಲ ಮೇಲಿದೆ. ಭಾಜಪದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಸ್ತುವಾರಿ ವಹಿಸಿದರೆ, ಕಾಂಗ್ರೆಸ್‌ ಪಕ್ಷದಿಂದ ಶಾಸಕ ದಿನೇಶ್‌ ಗುಂಡೂರಾವ್‌ ಅವರಿಗೆ ಉಸ್ತುವಾರಿ ವಹಿಸಲಾಗಿದೆ. ಹೀಗಾಗಿ ಇಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಗೆಲುವಿನ ಹಿಂದೆ ಕನ್ನಡಿಗರ ತಂತ್ರಗಾರಿಕೆ ಇದ್ದೇ ಇರುತ್ತದೆ.

ಶೋಭಾ ಎಲೆಕ್ಷನ್‌ ‘ಯಾತ್ರೆ’:

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಮಂತ್ರಿಯಾಗಿದ್ದೇ ತಡ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದ ವಿವಿಧ ರಾಜ್ಯ ಸುತ್ತುತ್ತಿದ್ದಾರೆ. ಇವರ ಶ್ರಮ ಬಲ್ಲ ಬಿಜೆಪಿ ಹೈಕಮಾಂಡ್‌ ನೇರವಾಗಿ ಉತ್ತರ ಪ್ರದೇಶದ ಚುನಾವಣಾ ಅಂಗಳದಲ್ಲಿ ತಂತ್ರಗಾರಿಕೆ ಮಾಡುವ ಸಲುವಾಗಿ ಇಳಿಸಿದೆ. ಲಖನೌ, ಅಯೋಧ್ಯೆ ಸೇರಿ ಅವಧ್‌ ಪ್ರಾಂತ್ಯದ ಹಲವು ಜಿಲ್ಲೆಗಳಲ್ಲಿ 82 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯನ್ನು ನೇರವಾಗಿ ಇವರಿಗೆ ಬಿಜೆಪಿ ವಹಿಸಿದೆ. ಅಲ್ಲಿನ ಪ್ರತಿ ಮಂಡಲಕ್ಕೆ ಹೋಗಿ ಮುಖಂಡರನ್ನು ಭೇಟಿ ಮಾಡಿ, ಚರ್ಚಿಸಿ ಪಕ್ಷದ ಅಭ್ಯರ್ಥಿಯ ಗೆಲುವಿನ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

Congress Politics: ಕಾಂಗ್ರೆಸ್‌ನಲ್ಲಿ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸುವ ಬಣವಿದೆ: 'ಕೈ' ನಾಯಕನ ಆರೋಪ

ಗೆದ್ದರೆ ಬಹಳ ಖುಷಿ

ದಕ್ಷಿಣ ಭಾರತದವರು(South India) ಉತ್ತರ ಭಾರತಕ್ಕೆ(North India)ಹೋಗುವುದಿಲ್ಲ ಎಂಬ ಭಾವನೆ ಇದೆ. ನಾವು ಆ ರೀತಿ ಇಲ್ಲ ಅನ್ನುವುದನ್ನು ಕನ್ನಡಿಗರ ಆಯ್ಕೆ ತೋರಿಸುತ್ತದೆ. ಕನ್ನಡಿಗರ ಉಸ್ತುವಾರಿಯಲ್ಲಿ ಪಕ್ಷ ಗೆದ್ದರೆ ಬಹಳ ಖುಷಿ ಅಂತ ಉತ್ತರ ಪ್ರದೇಶ ಬಿಜೆಪಿ ಉಸ್ತುವಾರಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. 

ಕನ್ನಡಿಗರಿಗೆ ಹೊಸತಲ್ಲ

ಜನಸಂಘದ ಕಾಲದಿಂದ ಕನ್ನಡಿಗರು ನಾನಾ ರಾಜ್ಯಗಳಲ್ಲಿ ಪಕ್ಷದ ಜವಾಬ್ದಾರಿ ನಿಭಾಯಿಸಿದ್ದಾರೆ. ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಕನ್ನಡಿಗರೇ ಉಸ್ತುವಾರಿ ಇದ್ದೇವೆ. ನಮ್ಮ ಪಕ್ಷಗಳನ್ನು ಪ್ರತಿನಿಧಿಸಿ ರಾಜಕಾರಣ ಮಾಡುತ್ತೇವೆ ಅಂತ ಗೋವಾ ಬಿಜೆಪಿ ಉಸ್ತುವಾರಿ ಸಿಟಿ ರವಿ ಹೇಳಿದ್ದಾರೆ.  

ಅವರ ಪಕ್ಷದ ಕೆಲಸ ಅವರು ಮಾಡ್ತಾರೆ, ನಮ್ಮ ಪಕ್ಷದ ಕೆಲಸ ನಾವು ಮಾಡ್ತೇವೆ ಬಹಳಷ್ಟು ಕನ್ನಡಿಗರು ಅಖಿಲ ಭಾರತದ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಉಸ್ತುವಾರಿಗಳಾಗಿ ಕೆಲಸ ಮಾಡಿದ್ದಾರೆ. ಗೋವಾದಲ್ಲಿ ಕನ್ನಡಿಗ ವರ್ಸಸ್‌ ಕನ್ನಡಿಗ ಪೈಪೋಟಿ ಅನ್ನೋದೇನಿಲ್ಲ. ನಮ್ಮ ಕೆಲಸ ನಾವು ಮಾಡುತ್ತೇವೆ ಅಂತ ಗೋವಾ ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.  
 

click me!