
ಮುಂಬೈ: 74 ಸಾವಿರ ಕೋಟಿ ರು.ಗೂ ಅಧಿಕ ಬಜೆಟ್ ಗಾತ್ರದಿಂದಾಗಿ ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹಿರಿಮೆ ಹೊಂದಿರುವ ಬೃಹನ್ಮುಂಬೈ ಪಾಲಿಕೆಗೆ ಗುರುವಾರ ಶಾಂತಿಯುತ ಚುನಾವಣೆ ನಡೆದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ. ಜೊತೆಗೆ ಇದೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಹುದ್ದೆ ಲಭ್ಯವಾಗುವ ಸಾಧ್ಯತೆ ಕಂಡುಬಂದಿದೆ. ಮತ್ತೊಂದೆಡೆ 30 ವರ್ಷಗಳಲ್ಲೇ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಬಣದ ಶಿವಸೇನೆ ಅಧಿಕಾರದಿಂದ ವಂಚಿತವಾಗುವತ್ತ ಹೆಜ್ಜೆ ಹಾಕಿದೆ.
2017ರಲ್ಲಿ ಕಡೆಯ ಬಾರಿ ಚುನಾವಣೆ ಎದುರಿಸಿದ್ದ 227 ಸ್ಥಾನ ಬಲದ ಪಾಲಿಕೆಯ ಅವಧಿ 2022ರಲ್ಲಿ ಮುಗಿದಿತ್ತು. 4 ವರ್ಷದ ಬಳಿಕ ಗುರುವಾರ ಚುನಾವಣೆ ನಡೆಯಿತು. ಈ ಬಾರಿ 227 ಸ್ಥಾನಕ್ಕೆ 1700 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಶೇ.50ರಷ್ಟು ಮತದಾನವಾಯಿತು. ಶುಕ್ರವಾರ ಫಲಿತಾಂಶ ಪ್ರಕಟವಾಗಲಿದ್ದು, ಬಹುಮತಕ್ಕೆ 114 ಸ್ಥಾನಗಳು ಬೇಕಿದೆ.ಬಿಜೆಪಿ ಮೈತ್ರಿಗೆ ಗೆಲುವು?:
ಕಳೆದ 30 ವರ್ಷಗಳಿಂದಲೂ ಬೃಹನ್ಮುಂಬೈ ಪಾಲಿಕೆಯಲ್ಲಿ ಶಿವಸೇನೆ ಅತಿದೊಡ್ಡ ಪಕ್ಷವಾಗಿಯೇ ಗೆಲ್ಲುತ್ತಾ ಬಂದಿದ್ದು, ಮೇಯರ್ ಸ್ಥಾನ ತನ್ನಲ್ಲೇ ಉಳಿಸಿಕೊಂಡಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸುಳಿವು ನೀಡಿವೆ. ಹೀಗಾಗಿ ಬಿಜೆಪಿಗೆ ಮೇಯರ್ ಹುದ್ದೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಉಪಮೇಯರ್ ಸ್ಥಾನ ಲಭ್ಯವಾಗುವ ಸಾಧ್ಯತೆ ನಿಚ್ಚಳವಾಗಿದೆ. ವಾರ್ಷಿಕ 74500 ಕೋಟಿ ರು. ಬಜೆಟ್‌ನೊಂದಿಗೆ ಬೃಹನ್ಮುಂಬೈ ಪಾಲಿಕೆ ಭಾರತದ ನಂ.1 ಶ್ರೀಮಂತ ಪಾಲಿಕೆ ಎಂಬ ಹಿರಿಮೆ ಹೊಂದಿದೆ. 2ನೇ ಸ್ಥಾನ ಹೊಂದಿರುವ ಬೆಂಗಳೂರಿನದ್ದು ಅಂದಾಜು 19500 ಕೋಟಿ ರು. ಬಜೆಟ್ ಇದೆ.
ಮೈ ಆ್ಯಕ್ಸಿಸ್ ಇಂಡಿಯಾ ಸಮೀಕ್ಷೆಯು, ಬಿಜೆಪಿ- ಶಿವಸೇನೆ ಕೂಟ ಶೇ.42ರಷ್ಟು ಮತಗಳೊಂದಿಗೆ 131- 151 ಸ್ಥಾನ ಗಳಿಸಲಿದೆ. ಇನ್ನು ಶಿವಸೇನೆ (ಉದ್ಧವ್), ಎಂಎನ್‌ಎಸ್, ಎನ್‌ಸಿಪಿ (ಪವಾರ್) ಬಣ ಶೇ.32ರಷ್ಟು ಮತಗಳೊಂದಿಗೆ 58-68 ಸ್ಥಾನ ಗಳಿಸಲಿದೆ. ಕಾಂಗ್ರೆಸ್, ವಂಚಿತ್ ಬಹುಜನ್ ಅಘಾಡಿ, ಆರ್‌ಎಸ್‌ಪಿ ಒಟ್ಟಾಗಿ 12-16 ಸ್ಥಾನ ಗೆಲ್ಲಲಿವೆ. ಅಜಿತ್ ಪವಾರ್ ಬಣದ ಎನ್‌ಸಿಪಿ, ಎಂಐಎಂ, ಎಡಪಕ್ಷಗಳು 6-12 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.
ಜೆವಿಸಿ ಸಮೀಕ್ಷೆಯು, ಬಿಜೆಪಿ- ಸೇನೆಗೆ 138, ಶಿವಸೇನೆ (ಉದ್ಧವ್), ಎಂಎನ್‌ಎಸ್, ಎನ್‌ಸಿಪಿ(ಪವಾರ್) ಬಣಕ್ಕೆ 59, ಕಾಂಗ್ರೆಸ್, ವಂಚಿತ್ ಬಹುಜನ್ ಅಘಾಡಿ, ಆರ್‌ಎಸ್‌ಪಿಗೆ 23 ಸ್ಥಾನದ ಭವಿಷ್ಯ ನುಡಿದಿದೆ.
ಸಕಾಲ್ ಸಮೀಕ್ಷೆ ಬಿಜೆಪಿ- ಸೇನೆಗೆ 119, ಶಿವಸೇನೆ (ಉದ್ಧವ್), ಎಂಎನ್‌ಎಸ್, ಎನ್‌ಸಿಪಿ(ಪವಾರ್) ಬಣಕ್ಕೆ75, ಕಾಂಗ್ರೆಸ್‌ಗೆ 20ಕ್ಕಿಂತ ಹೆಚ್ಚು ಸ್ಥಾನ ಸಿಗದು ಎಂದು ಹೇಳಿದೆ.
ಜನ್ಮತ್ ಸಮೀಕ್ಷೆಯು ಬಿಜೆಪಿ- ಸೇನೆಗೆ 138, ಉದ್ಧವ್ ಕೂಟಕ್ಕೆ 62, ಕಾಂಗ್ರೆಸ್ ಕೂಟಕ್ಕೆ 20 ಸ್ಥಾನದ ಭವಿಷ್ಯ ನುಡಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.