
ಬೆಂಗಳೂರು (ಏ.21): ರಾಜ್ಯ ಸರ್ಕಾರದ ಬಗ್ಗೆ ತಾಲಿಬಾನ್ ಮಾಡೆಲ್ ಸರ್ಕಾರ ಹಾಗೂ ಜಿಹಾದಿ ಮತಾಂಧ ಬ್ರದರ್ಸ್ ಎಂದು ಟ್ವೀಟರ್‌ನಲ್ಲಿ ದ್ವೇಷ ಭಾವನೆ ಉಂಟು ಮಾಡುವ ರೀತಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಟ್ವೀಟರ್‌ನಲ್ಲಿ ರಾಜ್ಯ ಬಿಜೆಪಿ ಅಧಿಕೃತ ಖಾತೆಯಲ್ಲಿ ಈ ಟ್ವಿಟ್‌ಗಳನ್ನು ಶುಕ್ರವಾರ ಮಾಡಲಾಗಿದ್ದು, ಈ ಬಗ್ಗೆ ಮಲ್ಲೇಶ್ವರ ಠಾಣೆಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅರ್ಜನ್ ಅಯೂರ್ ನೀಡಿದ ದೂರು ಸಲ್ಲಿಸಿದರು. ಅದರನ್ವಯ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಟ್ವೀಟರ್ ಖಾತೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಏನಿದು ಟ್ವಿಟ್?: ಇತ್ತೀಚಿಗೆ ರಾಜ್ಯದಲ್ಲಿ ನಡೆದ ಅಪರಾಧ ಕೃತ್ಯಗಳನ್ನು ಪ್ರಸ್ತಾಪಿಸಿ ಟ್ವಿಟರ್‌ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ಬಿಜೆಪಿ ಸರಣಿ ಟ್ವಿಟ್‌ಗಳನ್ನು ಮಾಡಿತ್ತು. ಅದರಲ್ಲಿ ಕಾಂಗ್ರೆಸ್ ಪಾ‘ಕೈ’ಸ್ತಾನ ಸರ್ಕಾರದಲ್ಲಿ ಹಿಂದೂಗಳ ಜೀವಕ್ಕೆ ಬೆಲೆ ಇಲ್ಲ! ಹಿಂದುಗಳೇ ಎಚ್ಚರ!, ಜೈ ಶ್ರೀರಾಮ್ ಎಂದರೆ ಬ್ರದರ್ಸ್‌ಗಳಿಂದ ಹಲ್ಲೆ, ಲವ್ ಜಿಹಾದ್‌ಗೆ ಒಪ್ಪದೆ ಇದ್ದರೆ ಬರ್ಬರ ಕೊಲೆ. ಒಡೆಯರ್ ಪರ ನಿಂತರೆ ಕಾರು ಹರಿಸಿ ಕೊಲೆ. ಡ್ರಾಪ್ ಕೊಟ್ಟರೆ ಮತಾಂಧರಿಂದ ಹಿಗ್ಗಾಮುಗ್ಗ ಥಳಿತ. ಕನ್ನಡ ಮಾತನಾಡಿದರೆ ನಟಿ ಮೇಲೆಯೇ ಹಲ್ಲೆ ಯತ್ನ ಹೀಗೆ ಟ್ವಿಟ್‌ಗಳಿದ್ದವು. ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಟ್ವಿಟ್‌ಗಳನ್ನು ಮಾಡಿ ದ್ವೇಷ ಭಾವನೆ ಮೂಡಿಸಲಾಗುತ್ತಿದೆ ಎಂದು ಆರೋಪಿಸಿ ಪೊಲೀಸರಿಗೆ ಚುನಾವಣಾಧಿಕಾರಿ ದೂರು ನೀಡಿದ್ದಾರೆ.
ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ದೇಶ, ವಿದೇಶದ ಪ್ರಭಾವಿಗಳು ಒಂದಾಗಿದ್ದಾರೆ: ಪ್ರಧಾನಿ ಮೋದಿ
ವಿಜಯೇಂದ್ರ ಮತಬೇಟೆ: ಭಾರತ ಮತ್ತೆ ವಿಶ್ವಗುರುವಿನ ಪ್ರಧಾನ ಪಾತ್ರ ವಹಿಸುವತ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಳವಡಿಸಿಕೊಂಡ ನೀತಿಗಳು ಮತ್ತು ಕ್ರಮಗಳು ಕಾರಣವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಅವರು ರೋಡ್ ಶೋ ಮೂಲಕ ಸಂಚರಿಸಿ ಮತಯಾಚಿಸಿದರು. ಭಾರತ ಮೊದಲು ಎಂಬುದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ. ದೇಶದ ಕಾರ್ಯತಂತ್ರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಹೆಚ್ಚಿನ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನು ಇದು ಹೊಂದಿದೆ. ಅಂತಾರಾಷ್ಟ್ರೀಯ ಸಂಬಂಧಗಳ ನಿರ್ವಹಣೆಯಲ್ಲಿ ಹಿಂದಿನ ಸರ್ಕಾರಗಳಿಗಿಂತಲೂ ಮೋದಿ ಸರ್ಕಾರ ಹೆಚ್ಚು ಯಶಸ್ವಿಯಾಗಿದೆ.
ಟೆಕ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಕಾಂಗ್ರೆಸ್: ಪ್ರಧಾನಿ ಮೋದಿ ಕಿಡಿ
ಪ್ರಪಂಚದ ಯಾವುದೇ ಭಾಗದಲ್ಲಿರುವ ಭಾರತೀಯರ ಸುರಕ್ಷತೆಗೆ ಮೋದಿ ಸರ್ಕಾರ ಪ್ರಾಮುಖ್ಯತೆ ನೀಡಿದೆ ಎಂದು ಪ್ರತಿಪಾದಿಸಿದರು. ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗಾಗಿ ಬದುಕಬೇಕೆಂಬ ಕನಸು ಹೊತ್ತು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸಲು, ದೇಶದ ಭವಿಷ್ಯಕ್ಕೆ ಹಗಲಿರಳು ದುಡಿಯುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೋಸ್ಕರ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಗೆ, ಮೋದಿಯವರಿಗೆ ದೇಶ ಮೊದಲು ಆಗಿದ್ದರೆ, ಕಾಂಗ್ರೆಸ್ಸಿಗರಿಗೆ ಕುಟುಂಬ ಮೊದಲು ಆಗಿದೆ. ವಂಶಾಡಳಿತ ಪಕ್ಷಗಳಿಗೆ ಸ್ವಜನಪಕ್ಷಪಾತ, ಭ್ರಷ್ಟಾಚಾರವೇ ಮುಖ್ಯವಾಗಿರುತ್ತದೆ. ದೇಶದ ಭವಿಷ್ಯ, ಜನರ ಕಲ್ಯಾಣ ಗೌಣವಾಗುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.