Latest Videos

ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗೆ ಒಳಜಗಳ: ಮಾಜಿ ಸಿಎಂ ಬೊಮ್ಮಾಯಿ

By Kannadaprabha NewsFirst Published May 22, 2024, 10:06 AM IST
Highlights

ಚುನಾವಣೆ ಬಂದ ಕಾರಣ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾಂಗ್ರೆಸ್‍ನಲ್ಲಿ ಅಲ್ಪವಿರಾಮ ಬಿದ್ದಿದೆ. ಕೆಲವೇ ದಿನಗಳಲ್ಲಿ ಎಐಸಿಸಿಯಲ್ಲೂ ಸಾಕಷ್ಟು ಬದಲಾವಣೆ ಆಗಲಿದೆ. ಅದರ ಪರಿಣಾಮ ರಾಜ್ಯ ಸರ್ಕಾರದ ಮೇಲೆ ಸಹ ಬೀಳಲಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲು ಸಾಕಷ್ಟು ಜನ ಪೈಪೋಟಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಾದಿಗಾಗಿ ಮುಸುಕಿನ ಗುದ್ದಾಟ ನಡೆದಿದೆ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಲಬುರಗಿ(ಮೇ.22):  ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ನಡೆಯುತ್ತಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕದೆ ಹೋದರೆ, ಶಕ್ತಿ ತುಂಬಲು ಆಗಲ್ಲ’ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಸಂದರ್ಭದಲ್ಲಿ ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಅವರಿಗೂ ತಮಗೆ ಮುಖ್ಯಮಂತ್ರಿ ಸ್ಥಾನ ಸಿಗದ ಅಸಮಾಧಾನವಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಈ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಆಂತರಿಕ ಗೊಂದಲಗಳಿವೆ ಎಂಬುದು ಸ್ಪಷ್ಟ ಎಂದು ವ್ಯಾಖ್ಯಾನಿಸಿದರು.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ: ಬೊಮ್ಮಾಯಿ

ಚುನಾವಣೆ ಬಂದ ಕಾರಣ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾಂಗ್ರೆಸ್‍ನಲ್ಲಿ ಅಲ್ಪವಿರಾಮ ಬಿದ್ದಿದೆ. ಕೆಲವೇ ದಿನಗಳಲ್ಲಿ ಎಐಸಿಸಿಯಲ್ಲೂ ಸಾಕಷ್ಟು ಬದಲಾವಣೆ ಆಗಲಿದೆ. ಅದರ ಪರಿಣಾಮ ರಾಜ್ಯ ಸರ್ಕಾರದ ಮೇಲೆ ಸಹ ಬೀಳಲಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲು ಸಾಕಷ್ಟು ಜನ ಪೈಪೋಟಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಾದಿಗಾಗಿ ಮುಸುಕಿನ ಗುದ್ದಾಟ ನಡೆದಿದೆ ಎಂದರು.

ರಾಜ್ಯದ ನಾಲ್ವರು ಸಚಿವರು ಕೇಂದ್ರದ ಬಿಜೆಪಿ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದಾರೆಂಬ ವಿಚಾರ ನನಗೆ ಗೊತ್ತಿಲ್ಲ ಎಂದ ಬೊಮ್ಮಾಯಿ, ಚುನಾವಣೆ ಬಳಿಕ ವಿಜಯೇಂದ್ರ ತಮ್ಮ ಸ್ಥಾನದಲ್ಲಿರಲ್ಲ ಎಂಬ ಪ್ರಿಯಾಂಕ್‍ ಖರ್ಗೆ ಹೇಳಿಕೆಗೆ ‘ಸರ್ಟಿಫಿಕೆಟ್‌ ಕೊಡೋಕೆ ಅವರ್‍ಯಾರು? ಅವರು ಏನೇನೋ ಅಂತಾರೆ, ಅನ್ನಲಿ ಬಿಡಿ ಎಂದರು.

ಬರ ನಿರ್ವಹಣೆಯಲ್ಲೂ ವಿಫಲ: ಸರ್ಕಾರದಿಂದ ಬರ ನಿರ್ವಹಣೆ ಸೂಕ್ತವಾಗಿ ಆಗುತ್ತಿಲ್ಲ. ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ನಯಾ ಪೈಸೆ ಖರ್ಚು ಮಾಡುತ್ತಿಲ್ಲ. ಮಾತೆತ್ತಿದರೆ ಜಿಲ್ಲಾಧಿಕಾರಿ ಬಳಿ ಕೋಟ್ಯಂತರ ರು. ಇದೆ ಅಂತಾರೆ. ಇದರಿಂದ ಇದು ರೈತ ವಿರೋಧಿ ಸರ್ಕಾರ ಅನ್ನೋದು ಸ್ಪಷ್ಟ. ಇನ್ನೊಂದೆಡೆ ಶಾಸಕರಿಗೆ ಅನುದಾನ ಅನ್ನೋದು ಮರಿಚೀಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದು ಗೂಂಡಾ ರಾಜ್ಯ; ಹುಬ್ಬಳ್ಳಿ ಅಂಜಲಿ ಕೊಲೆಗೆ ಪೊಲೀಸರೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಶಿಕ್ಷಣ ಕ್ಷೇತ್ರ ಅಸ್ತವ್ಯಸ್ಥೆ: ಕಳೆದೊಂದು ವರ್ಷದಲ್ಲಿ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸುತ್ತಾ ಸಂಪೂರ್ಣ ಹದಗೆಡಿಸಿದೆ. ಈ ಸರ್ಕಾರ ಬಂದಮೇಲೆ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಶಿಕ್ಷಕರ ನೇಮಕಾತಿ ವಿಚಾರದಲ್ಲೂ ಗೊಂದಲ ಹುಟ್ಟಿಸಲಾಗಿದೆ. ಬಜೆಟ್‍ನಲ್ಲಿ ಶಿಕ್ಷಣಕ್ಕೆ ಅತೀ ಕಡಿಮೆ ಅನುದಾನ ಇಟ್ಟಿದ್ದಾರೆಂದು ಬೊಮ್ಮಾಯಿ ಬೇಸರ ಹೊರಹಾಕಿದರು.

ನಾವು ಎನ್‍ಇಪಿ ತಂದಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಆ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಕಾಂಗ್ರೆಸ್ ಸರ್ಕಾರ ಗೊಂದಲಮಯ ಮಾಡಿದೆ ಎಂದರು.

click me!