
ಇಂಡಿ (ಅ.07): ನನ್ನ ಜೀವನ ಇರುವವರೆಗೂ ದಲಿತ ಮುಖ್ಯಮಂತ್ರಿಗಾಗಿ ಒತ್ತಾಯ ಇದ್ದೇ ಇರುತ್ತದೆ. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಆದರೂ ಸಂತೋಷ, ದಲಿತರು ಯಾರೇ ಆದರೂ ಸಂತೋಷ. ಎಲ್ಲ ರಾಜ್ಯಗಳಲ್ಲಿ ದಲಿತ ಮುಖ್ಯಮಂತ್ರಿ ಆಗಿ ಹೋಗಿದ್ದಾರೆ. ನಮ್ಮ ರಾಜ್ಯದಲ್ಲಿ ಏಕೆ ದಲಿತ ಮುಖ್ಯಮಂತ್ರಿ ಆಗಬಾರದು?. ಬಿಜೆಪಿಯಲ್ಲಿಯೂ ದಲಿತ ಮುಖ್ಯಮಂತ್ರಿ ಮಾಡುವಂತೆ ಕೇಳುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ರಾಜನಾಳ ಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳು ಚುನಾವಣೆಗಾಗಿ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದಾರೆ ಗ್ಯಾರಂಟಿ ಯೋಜನೆಗಳ ಬಗ್ಗೆ ಚುನಾವಣೆ ಮುಗಿದ ಮೇಲೆ ಹೇಳಬೇಕಿತ್ತು. ಚುನಾವಣೆ ಸಂದರ್ಭದಲ್ಲಿಯೇ ಏಕೆ ಘೋಷಣೆ ಮಾಡಿದರು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷವಾಯಿತು. ರಾಜ್ಯದಲ್ಲಿ ಯಾವುದೇ ಒಂದೇ ಒಂದು ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಟೀಕಿಸಿದರು. ಗ್ರಾಪಂ ಅಧ್ಯಕ್ಷ ನಾಗುಗೌಡ ಪಾಟೀಲ, ಕುಲಪ್ಪ ಹಿಟ್ನಳ್ಳಿ, ಸಲೀಮ ನಧಾಪ ಇತರರು ಈ ಸಂದರ್ಭದಲ್ಲಿ ಇದ್ದರು.
ಕಾಂಗ್ರೆಸ್ ಸರ್ಕಾರವನ್ನು ಹೊಡೆದೋಡಿಸಲು ಮೈತ್ರಿ ಅಗತ್ಯ: ನಿಖಿಲ್ ಕುಮಾರಸ್ವಾಮಿ
ನನ್ನ ಕೆಲಸಗಳಿಗೆ ಕೇಂದ್ರ ಅನುದಾನ ನೀಡುತ್ತೆ: ವಿಜಯಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಮನಗೂಳಿ ಕ್ರಾಸ್ ಬಳಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಹೆದ್ದಾರಿಗೆ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹ 57 ಕೋಟಿ ಅನುದಾನ ಮಂಜೂರು ಮಾಡಿದೆ. ನಾನು ಕೊಟ್ಟ ಪತ್ರಕ್ಕೆ, ನನ್ನ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡುವಾಗ ನಾನ್ಯಾಕೆ ಲೋಕಸಭೆ ಅಧಿವೇಶನದಲ್ಲಿ ಪ್ರಶ್ನೆ ಮಾಡಬೇಕು? ಜನರನ್ನು ಮೆಚ್ಚಿಸಲು ಪ್ರಶ್ನೆ ಮಾಡಬೇಕಾ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು. ಇಂಡಿ ತಾಲೂಕಿನ ಅಥರ್ಗಾ(ರಾಜನಾಳ) ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಕೆರೆ ತುಂಬುವ ಚಿಂತನೆ ಜಗತ್ತಿನ ಯಾವ ದೇಶ ಹಾಗೂ ರಾಜ್ಯದವರ ಕನಸಿನಲ್ಲಿಯೂ ಇರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ಈಶ್ವರಪ್ಪ ನೀರಾವರಿ ಸಚಿವರಿದ್ದಾಗ ಕೆರೆ ತುಂಬುವ ಯೋಜನೆ ಜಾರಿಗೆ ತರಲಾಯಿತು. 70 ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಿನವರಿಗೆ ಈ ಚಿಂತನೆ ಏಕೆ ಇರಲಿಲ್ಲ ಎಂದು ಪ್ರಶ್ನಿಸಿದರು. ಹುಟ್ಟೂರು ಅಥರ್ಗಾ ಗ್ರಾಮದ ಮೇಲಿನ ಅಭಿಮಾನದಿಂದ ಕೆರೆಗೆ ಬಾಗಿನ ಅರ್ಪಿಸಲು ಬಂದಿದ್ದೇನೆ. ಕೆರೆ ತುಂಬುವ ಕೆಲಸ ಕಾಂಗ್ರೆಸ್ಸಿನವರು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿನವರು ಕೆರೆ ತುಂಬುವ ಯೋಜನೆ ಜಾರಿ ಮಾಡಿಲ್ಲ. ಮನೆ ತುಂಬಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
ಇಂಡಿ ತಾಲೂಕಿನ 67 ಗ್ರಾಮಗಳಿಗೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಗೆ ಅಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದಿದ್ದೇನೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಭಾರತೀಯರು ವಿದೇಶಕ್ಕೆ ಹೋದರೆ ಭಾರತೀಯರು ಎಂದು ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ. ವಿದೇಶಕ್ಕೆ ಹೋದ ಭಾರತೀಯರು ಇಂದು ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ಬಣ್ಣಿಸಿದರು. ಅಲ್ಲದೇ, ಜನರ ಕಲ್ಯಾಣದಲ್ಲಿ ನನಗೆ ತೃಪ್ತಿ ಇದೆ. ಜನರನ್ನು ಮೆಚ್ಚಿಸುವ ಕೆಲಸದಲ್ಲಿ ನನಗೆ ಆಸಕ್ತಿ ಇಲ್ಲ, ನಾನು ಎಂಬ ಅಹಂಕಾರ ರಾಜಕಾರಣದಲ್ಲಿ ಇರಬಾರದು. ನಾನು ಎನ್ನುವುದು ನಾಯಿಯಂತೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.