ಬಿಜೆಪಿ ಸರ್ಕಾರದ 40% ಕಮಿಷನ್‌ ವಿರುದ್ಧ ಹೋರಾಟ: ಕೃಷ್ಣ ಭೈರೇಗೌಡ, ಪ್ರಿಯಾಂಕ್‌ ಎಚ್ಚರಿಕೆ

By Kannadaprabha NewsFirst Published Sep 2, 2022, 8:41 AM IST
Highlights

ಬೆಂಗಳೂರಿನ ದುಸ್ಥಿತಿಗೆ ಶೇ.40 ಕಮಿಷನ್‌ ಕಾರಣ. ಇದರ ಬಗ್ಗೆ ಆರೋಪ ಮಾಡಿದವರ ಮೇಲೆ ವಿವಿಧ ರೀತಿಯ ದಾಳಿಗೆ ಸರ್ಕಾರ ಮುಂದಾಗಿದೆ: ಕಾಂಗ್ರೆಸ್‌ ನಾಯಕರು 

ಬೆಂಗಳೂರು(ಸೆ.02): ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಿಯಂತ್ರಿಸಲು ಪ್ರಯತ್ನ ಮಾಡುತ್ತಿಲ್ಲ. ಶೇ.40 ಕಮಿಷನ್‌ ಬಗ್ಗೆ ಆರೋಪ ಮಾಡಿದವರ ವಿರುದ್ಧವೇ ದಾಳಿ ಮಾಡುತ್ತಿದ್ದು ಇದರ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದರು. ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೃಷ್ಣಭೈರೇಗೌಡ ಅವರು, ವಿಶ್ವದ ಐಟಿ ರಾಜಧಾನಿಯಾಗಿ ವಿಜ್ಞಾನ, ತಂತ್ರಜ್ಞಾನದ ಕೇಂದ್ರವಾಗಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರು ಇಂದು ಅತಿ ಹೆಚ್ಚು ರಸ್ತೆ ಗುಂಡಿ ನಗರ, ಮುಳುಗುತ್ತಿರುವ ನಗರವಾಗಿದೆ. ಬೆಂಗಳೂರಿನ ದುಸ್ಥಿತಿಗೆ ಶೇ.40 ಕಮಿಷನ್‌ ಕಾರಣ. ಇದರ ಬಗ್ಗೆ ಆರೋಪ ಮಾಡಿದವರ ಮೇಲೆ ವಿವಿಧ ರೀತಿಯ ದಾಳಿಗೆ ಸರ್ಕಾರ ಮುಂದಾಗಿದೆ ಎಂದು ಅವರು ಆರೋಪಿಸಿದರು.

ಬೆಂಗಳೂರಿನಲ್ಲಿ ಸುವ್ಯವಸ್ಥಿತ ಆಡಳಿತ ವ್ಯವಸ್ಥೆಯೇ ಇಲ್ಲವಾಗಿದೆ. ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ಕೊಟ್ಟಿಲ್ಲ. ಇದಕ್ಕೆ ಬಿಜೆಪಿಯ ಅಧಿಕಾರದ ಆಂತರಿಕ ಗುದ್ದಾಟ ಕಾರಣ. ಅಧಿಕಾರಿಗಳು ಭ್ರಷ್ಟರಿಗೆ ಹಣ ಮಾಡಿಕೊಡುವುದರಲ್ಲಿ ತೊಡಗಿದ್ದಾರೆ. ಹೀಗಾಗಿ ದುರಾಡಳಿತ ತಾಂಡವ ನೃತ್ಯದಿಂದ ಬೆಂಗಳೂರು ಮುಳುಗುತ್ತಿರುವ ನಗರವಾಗಿದೆ. ಬಿಬಿಎಂಪಿ ಗುತ್ತಿಗೆದಾರರು ಹೇಳಿರುವಂತೆ ಶೇ.50 ಲಂಚ ಸ್ವೀಕರಿಸಿದ ಯಾವುದೇ ರಸ್ತೆ, ಮೇಲ್ಸೇತುವೆ, ಕಾಲುವೆಗಳು ಉಳಿಯುತ್ತಿಲ್ಲ. ಅವ್ಯವಸ್ಥೆಯಿಂದ ಒಂದೇ ವಾರದಲ್ಲಿ ಮೇಲ್ಸೇತುವೆ ಬಂದ್‌ ಆಗುತ್ತಿದೆ. ಶೇ.50 ಕಮಿಷನ್‌ ಪಡೆದ ಮೇಲೆ ಉಳಿದ ಶೇ.50ನಲ್ಲಿ ಮಾಡಿದ ಕಾಮಗಾರಿ ಹೆಚ್ಚು ಬಾಳಿಕೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

40% COMMISSION: 40% ಕಮಿಷನ್‌ಗೆ ಉತ್ತರಿಸದ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಿಜೆಪಿಗೆ ಹತ್ತಿರವಾಗಿರುವ ಮೋಹನ್‌ ದಾಸ್‌ ಪೈ, ಬೆಂಗಳೂರಿನ ಆಕಾನ್‌ ಆಗಿರುವ ಕಿರಣ್‌ ಮಜುಮ್ದಾರ್‌ ಶಾ ಅವರು ನೇರವಾಗಿ ಪ್ರಧಾನಿಗಳಿಗೆ ಹಲವು ಬಾರಿ ಬೆಂಗಳೂರು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಆದರೂ ಮೋದಿಗೆ ಹಾಗೂ ಅಮಿತ್‌ ಶಾ ಅವರಿಗೆ ಬೆಂಗಳೂರು ರಕ್ಷಿಸುವ ಮನಸ್ಸಿಲ್ಲ. ಅವರಿಗೆ ಕೇವಲ ಅಧಿಕಾರಕ್ಕೆ ಬರಬೇಕು. ಶೇ.40 ಲೂಟಿ ಮಾಡಬೇಕು. ರಿಯಲ್‌ ಎಸ್ಟೇಟ್‌ ಲೂಟಿ ಮಾಡಬೇಕು. ಇಷ್ಟೇ ಅವರ ಆದ್ಯತೆಯಾಗಿದೆ ಎಂದು ಟೀಕಿಸಿದರು.

ಶಿವಾನಂದ ಸರ್ಕಲ್‌ ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳಿಸಲು ನಾಲ್ಕೈದು ಗಡುವು ಮುಗಿದಿದ್ದರೂ ಇದುವರೆಗೂ ಜನರ ಬಳಕೆಗೆ ಯೋಗ್ಯವಾದ ಮೇಲ್ಸೇತುವೆ ನಿರ್ಮಿಸಿಲ್ಲ. ರಸ್ತೆಗಳಲ್ಲಿ ಗುಂಡಿ ಮುಚ್ಚಲು ಆಗದ ಸರ್ಕಾರಕ್ಕೆ ಹಳೆ ಮೇಲ್ಸೆತುವೆಗಳ ನಿರ್ವಣೆ ಮಾಡುವ ಯೋಗ್ಯತೆಯೂ ಇಲ್ಲವಾಗಿದೆ. ಈ ಆರೋಪ ಕಾಂಗ್ರೆಸ್‌ ಪಕ್ಷದ್ದಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ಅಂಕಿ ಅಂಶಗಳ ಬ್ಯೂರೋ ಮಾಹಿತಿ. 2018ರಲ್ಲಿ ರಾಜ್ಯದಲ್ಲಿ ಡ್ರಗ್ಸ್‌ ನಿಗ್ರಹ ಕಾಯ್ದೆ ಅಡಿ 1030 ಪ್ರಕರಣ ದಾಖಲಿಸಿದ್ದು, ಕಳೆದ ಎರಡು ವರ್ಷಗಳಲ್ಲಿ 5587 ಪ್ರಕರಣಗಳು ದಾಖಲಾಗಿದ್ದು, ಡ್ರಗ್ಸ್‌ ಪ್ರಕರಣಗಳ ಸಂಖ್ಯೆ ಶೇ.462ರಷ್ಟು ಹೆಚ್ಚಾಗಿದೆ ಇದು ಬಿಜೆಪಿ ಸರ್ಕಾರದಲ್ಲಿ ಆಗಿರುವ ಏರಿಕೆ ಎಂದು ತಿಳಿಸಿದರು.
 

click me!