ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ: ಅಪ್ಪ ಮಕ್ಕಳ ಸಂಖ್ಯೆ 7ಕ್ಕೇರಿಕೆ

By Govindaraj SFirst Published Nov 19, 2022, 1:00 PM IST
Highlights

ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೇಟ್‌ ಬಯಸಿ ಅರ್ಜಿ ಸಲ್ಲಿಸಿದ ಅಪ್ಪ-ಮಕ್ಕಳ ಜೋಡಿ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಹೊಸದಾಗಿ ಪಾವಗಡ ಶಾಸಕ ವೆಂಕಟರವಣಪ್ಪ ಹಾಗೂ ಅವರ ಪುತ್ರ ವೆಂಕಟೇಶ್‌ ಇಬ್ಬರೂ ಪಾವಗಡ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. 

ಬೆಂಗಳೂರು (ನ.19): ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೇಟ್‌ ಬಯಸಿ ಅರ್ಜಿ ಸಲ್ಲಿಸಿದ ಅಪ್ಪ-ಮಕ್ಕಳ ಜೋಡಿ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಹೊಸದಾಗಿ ಪಾವಗಡ ಶಾಸಕ ವೆಂಕಟರವಣಪ್ಪ ಹಾಗೂ ಅವರ ಪುತ್ರ ವೆಂಕಟೇಶ್‌ ಇಬ್ಬರೂ ಪಾವಗಡ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಬಳ್ಳಾರಿ ನಗರ ಟಿಕೆಟ್‌ಗಾಗಿ ಮಾಜಿ ಶಾಸಕ ದಿವಾಕರ್‌ಬಾಬು ಹಾಗೂ ಅವರ ಪುತ್ರ ಹನುಮ ಕಿಶೋರ್‌ ಇಬ್ಬರೂ ಅರ್ಜಿ ಹಾಕಿಕೊಂಡಿದ್ದಾರೆ. ಇದಕ್ಕೂ ಮೊದಲು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದಿಂದ ಹಾಗೂ ಅವರ ಪುತ್ರ ಸುನೀಲ್‌ ಬೋಸ್‌ ಟಿ. ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. 

ಮತ್ತೊಬ್ಬ ಮಾಜಿ ಸಚಿವ ಶಿವಾನಂದ ಪಾಟೀಲ ಅವರು ವಿಜಯಪುರ ನಗರ ಹಾಗೂ ಅವರ ಪುತ್ರಿ ಸಂಯುಕ್ತಾ ಪಾಟೀಲ ಅವರು ಬಸವನ ಬಾಗೇವಾಡಿ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಬಿ.ಬಿ. ಚಿಮ್ಮನಕಟ್ಟಿಹಾಗೂ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿಅವರು ಬಾದಾಮಿ ಕ್ಷೇತ್ರದ ಟಿಕೆಟ್‌ಗೆ, ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಹಾಗೂ ಅವರ ಪುತ್ರ ಅಲ್ಲಂ ಪ್ರಶಾಂತ್‌ ಅವರು ಬಳ್ಳಾರಿ ಕ್ಷೇತ್ರಕ್ಕೆ, ಬೆಂಗಳೂರಿನ ವಿಜಯನಗರ ಕ್ಷೇತ್ರಕ್ಕೆ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜ ನಗರ ಕ್ಷೇತ್ರಕ್ಕೆ ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣ ಅರ್ಜಿ ಹಾಕಿದ್ದಾರೆ. ಈ ಮೂಲಕ ಒಟ್ಟು ಅಪ್ಪ-ಮಕ್ಕಳ ಜೋಡಿ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Karnataka Politics: ಕಾಂಗ್ರೆಸ್ಸಿನ ಸಂತೋಷ್‌ ಲಾಡ್‌ಗೆ ಬಿಜೆಪಿ ಗಾಳ?

ಅರ್ಜಿ ಸಲ್ಲಿಸಿದ ಸಾಸಲು ಸತೀಶ್‌: ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಆಕಾಂಕ್ಷಿಯಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸಾಸಲು ಸತೀಶ್‌ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ನಡೆದ ಉಪಚುನಾವಣೆಯ ನಂತರ ಶಿರಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸಾಸಲು ಸತೀಶ್‌ ಅವರು ಈವರೆಗೂ ಪ್ರತಿ ಸಭೆ ಸಮಾರಂಭಗಳಲ್ಲಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ಟಿಕೆಟ್‌ ಕೂಡ ನನಗೆ ನೀಡುತ್ತಾರೆ ಎಂದು ಹೇಳುತ್ತಿದ್ದರು. ಈಗ ಅವರು ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ 12 ಮಂದಿಯಿಂದ ಟಿಕೆಟ್‌ಗೆ ಅರ್ಜಿ: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿಅವರಿಗೆ 2 ಬಾರಿ ಕಾಂಗ್ರೆಸ್‌ ಪಕ್ಷವು ಸ್ಪರ್ಧಿಸಲು ಅವಕಾಶ ನೀಡಿದ್ದು, ಅದರಲ್ಲಿ ಮೊದಲ ಬಾರಿಗೆ ಗೆಲವು ಪಡೆದ ಅವರು 2ನೇ ಬಾರಿಗೆ ಬಹಳ ಅಂತರಗಳಿಂದ ಸೋಲುಂಡ ಕಾರಣ ಈ ಬಾರಿಗೆ ಅವರಿಗೆ ಮತ್ತೊಮ್ಮೆ ಪಕ್ಷವು ಅವಕಾಶ ನೀಡುವ ಸಾಧ್ಯತೆ ಕಡಿಮೆಯಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಇದರಿಂದಾಗಿ ಪುತ್ತೂರಿನಲ್ಲಿ ಪಕ್ಷದ ಅಭ್ಯರ್ಥಿತನ ಬಯಸಿ ಈಗಾಗಲೇ 12 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ. ರಾಜಾರಾಮ್‌ ಕೆ.ಬಿ., ಕಾಂಗ್ರೆಸ್‌ ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಪ್ರಸಾದ್‌ ಕೌಶಲ್‌ ಶೆಟ್ಟಿ, ಎಂ.ಎಸ್‌.ಮಹಮ್ಮದ್‌, ಡಾ. ಕೃಪಾ ಅಮರ್‌ ಆಳ್ವ, ಎನ್‌.ಚಂದ್ರಹಾಸ ಶೆಟ್ಟಿ, ಸತೀಶ್‌ ಕುಮಾರ್‌ ಕೆಡೆಂಜಿ, ಸುಳ್ಯದ ಮುಖಂಡರಾದ ಧನಂಜಯ ಅಡ್ಪಂಗಾಯ, ಭರತ್‌ ಮುಂಡೋಡಿ, ದಿವ್ಯಪ್ರಭಾ ಚಿಲ್ತಡ್ಕ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಡಿಸೆಂಬರ್‌ ಅಂತ್ಯದೊಳಗೆ 150 ಅಭ್ಯರ್ಥಿಗಳ ಅಂತಿಮ: ಸಲೀಂ ಆಹ್ಮದ್

ಆರಂಭದ ಚುನಾವಣೆಯ ಸಂದರ್ಭದಲ್ಲಿ ಪುತ್ತೂರು ಮತ್ತು ಸುಳ್ಯ ಒಂದೇ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿತ್ತು. ಬಳಿಕ ಸುಳ್ಯವು ಪ್ರತ್ಯೇಕ ಕೇತ್ರವಾಗಿ ಗುರುತಿಸಿಕೊಂಡಿದ್ದರೂ ಮೀಸಲು ಕ್ಷೇತ್ರವಾದ ಕಾರಣ ಅಲ್ಲಿನ ಆಕಾಂಕ್ಷಿ ಅಭ್ಯರ್ಥಿಗಳೂ ಪುತ್ತೂರು ಕ್ಷೇತ್ರದಲ್ಲಿ ಅವಕಾಶ ಬಯಸುವುದು ಸಹಜವಾಗಿದೆ. ಡಿ.ವಿ.ಸದಾನಂದ ಗೌಡ ಸುಳ್ಯ ಕ್ಷೇತ್ರದವರಾಗಿದ್ದು ಪುತ್ತೂರಿನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಹಲವಾರು ಮಂದಿ ಸುಳ್ಯ ಕ್ಷೇತ್ರದವರು ಪುತ್ತೂರಿನಲ್ಲಿ ಸ್ಪರ್ಧಿಸಿದ್ದಾರೆ. ಈ ಬಾರಿಯೂ ಸುಳ್ಯದ ಮುಖಂಡರಾದ ಧನಂಜಯ ಅಡ್ಪಂಗಾಯ, ಭರತ್‌ ಮುಂಡೋಡಿ, ದಿವ್ಯಪ್ರಭಾ ಚಿಲ್ತಡ್ಕ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ.

click me!