ನನಗೆ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಅವಕಾಶ ಸಿಕ್ಕರೆ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಪಾಂಡವಪುರ (ಆ.13): ನನಗೆ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಅವಕಾಶ ಸಿಕ್ಕರೆ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ತಾಲೂಕಿನ ಅರಳಕುಪ್ಪೆ ಗ್ರಾಮದ ಲಕ್ಷ್ಮಣ ಎಂಬುವರ ಜಮೀನಿನಲ್ಲಿ ನಡೆದ ಕುಮಾರಣ್ಣ ಕೃಷಿ-ಖುಷಿ ಪ್ರಯುಕ್ತ ಭತ್ತದ ಸಸಿ ನಾಟಿ ಮಾಡಿ ರೈತರನ್ನುದ್ದೇಶಿಸಿ ಮಾತನಾಡಿದರು.
ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದಕ್ಕೂ ಕೇಂದ್ರ ಸಚಿವನಾಗಿ ಕೆಲಸ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಿಕ್ಕ ಅವಕಾಶ ತುಂಬಾ ಕಡಿಮೆ. ಆದರೂ ಆ ಅವಧಿಯಲ್ಲಿ ರೈತಪರ, ಜನಪರವಾದ ಆಡಳಿತ ನಡೆಸಿದ್ದೇನೆ. ಐದು ವರ್ಷದ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಪ್ರತಿ ಕುಟುಂಬ ನೆಮ್ಮದಿಯಿಂದ ಬದುಕು ನಡೆಸುವ ಹಾಗೆ ಕೆಲಸ ಮಾಡಿ ತೋರಿಸುತ್ತೇನೆ. ಇಲ್ಲವಾದರೆ ನನ್ನ ಮುಖವನ್ನು ಈ ಮಣ್ಣಿಗೆ ತೋರಿಸೋದಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಕೆಆರ್‌ಎಸ್ ಅಣೆಕಟ್ಟೆಗೆ ಸ್ಟಾಪ್‌ಲಾಕ್ ಗೇಟ್ ಅಳವಡಿಕೆ ಅಗತ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಜಿಲ್ಲೆಯ ಜನರ ಆಶೀರ್ವಾದದಿಂದ ಗೆದ್ದು ಸಚಿವನಾಗಿದ್ದೇನೆ. ನನಗೆ ನೀವು ಜನ್ಮ ನೀಡದಿದ್ದರೂ ನನ್ನನ್ನು ಮಗನಾಗಿ ಸ್ವೀಕಾರ ಮಾಡಿದ್ದೀರಾ. ಕೆಲವರು ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಜಿಲ್ಲೆಯ ಜನತೆ ನನ್ನ ಬಗ್ಗೆ ಅನುಮಾನಪಡಬೇಡಿ, ನಾನು ಡೆಲ್ಲಿಯಲ್ಲಿದ್ದರೂ ನನ್ನ ಹೃದಯ ಜಿಲ್ಲೆಯಲ್ಲಿಯೇ ಇರುತ್ತದೆ. ನನ್ನ ಅಧಿಕಾರದ ಅವಧಿಯಲ್ಲಿ ಜಿಲ್ಲೆಗೆ ಹೊಸ ಕಾರ್ಖಾನೆಗಳನ್ನು ತಂದು ಯುವಕರ, ಮಹಿಳೆಯರಿಗೆ ಉದ್ಯೋಗ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ. ಜತೆಗೆ ನನಗೆ 500ಕ್ಕೂ ಅಧಿಕ ಮಂದಿ ನಿರುದ್ಯೋಗಿ ಅರ್ಜಿಸಲ್ಲಿಸಿದ್ದಾರೆ. ಅವರಿಗೆ ಬೇರೆಬೇರೆ ಕಾರ್ಖಾನೆಗಳಲ್ಲಿ ಕೆಲಸ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಿಕ್ಕಂತಹ ಕೆಲಸವನ್ನು ಯುವಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರೈತರು ಕುಟುಂಬದಿಂದ ಬಂದ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ರಾಜ್ಯದ ಉದ್ದಗಲಕ್ಕೂ ಸಾಕಷ್ಟು ಜನಪರ, ರೈತಪರವಾದ ಆಡಳಿತ ನಡೆಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಿಕ್ಕಂತಹ ಕಡಿಮೆ ಅಧಿಕಾರದ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದ್ದರು. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರಳಿ ಆರ್ಥಿಕ ನೆರವು ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದರು. ಪ್ರಸ್ತುತ ದಿನಗಳಲ್ಲಿ ರೈತ ಸಮುದಾಯ ಸಂಕಷ್ಟದಲ್ಲಿದೆ, ರೈತರ ಬೆಳೆಗಳಿಗೆ ಸೂಕ್ತವಾದ ಬೆಲೆಗಳು ದೊರೆಯುತ್ತಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನು ಹಮ್ಮಿಕೊಂಡಿದ್ದರು.
ಇದೊಂದು ಉತ್ತಮವಾದ ಯೋಜನೆಯಾಗಿದೆ ಎಚ್‌ಡಿಕೆಗೆ ಅವರಿಗೆ ಐದು ವರ್ಷ ಅಧಿಕಾರಸಿಕ್ಕರೆ ರೈತರು, ಜನರ ಸಮಸ್ಯೆ ಪರಿಹರಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಎರಡು ವರ್ಷಗಳಿಂದ ಬರಗಾಲದಿಂದ ಕೆಂಗೆಟ್ಟಿದ ರೈತರು ಎಚ್.ಡಿ. ಕುಮಾರಸ್ವಾಮಿ ಅವರು ಗೆದ್ದು ಮಂತ್ರಿಯಾಗುತ್ತಿದ್ದಂತೆಯೇ ಉತ್ತಮ ಮಳೆಯಾಗಿ ಕಾವೇರಿ ತುಂಬಿ ಹರಿದಿದ್ದಾಳೆ. ರೈತರ ಬಯಕೆಯಂತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆಹಿಸಿ ಭತ್ತದ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ರೈತರ ಉತ್ಸಾಹ ಹೆಚ್ಚಿಸಿದ್ದೇವೆ ಎಂದರು.
ದೇವೇಗೌಡರ ವಯಸ್ಸಿಗೆ ಮರ್ಯಾದೆ ಕೊಡುವುದು ಕಲಿಯಬೇಕು: ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್
ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಎಚ್.ಮಂಜುನಾಥ್, ಜೆಡಿಎಸ್ ಯುವ ನಾಯಕ ಸಿ.ಪಿ.ಶಿವರಾಜು, ನಲ್ಲಿಗೆರೆ ಬಾಲು, ಅಮರಾವತಿ ಚಂದ್ರಶೇಖರ್, ಎಸ್.ಎ.ಮಲ್ಲೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ವಿ.ಎಸ್.ನಿಂಗೇಗೌಡ, ಗವೀಗೌಡ, ಪ್ರವೀಣ್, ಚೇತನ್, ಗ್ರಾಪಂ ಮಾಜಿ ಅಧ್ಯಕ್ಷರಾದ ಮಹದೇವು, ವಿಶ್ವನಾಥ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.