
ಮಂಡ್ಯ (ಏ.27): ಹಿಂದಿನಿಂದಲೂ ಬೇರೆಯವರಿಗೆಲ್ಲಾ ಅವಕಾಶ ನೀಡಿದ್ದೀರಿ. ಪ್ರಗತಿಯನ್ನು ಗುರಿಯಾಗಿಸಿಕೊಂಡು ಅವರು ಏನನ್ನೂ ಮಾಡಲಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ನಮಗೂ ಒಂದು ಅವಕಾಶ ಕೊಡಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ನಡೆದ ಯೋಗಿಆದಿತ್ಯನಾಥ ಅವರೊಂದಿಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ಅಧಿಕಾರದಲ್ಲಿದ್ದ ವೇಳೆ ರೈತರ ಆತ್ಮಹತ್ಯೆಗಳು ಹೆಚ್ಚು ನಡೆದಿವೆ. ಅಲ್ಲದೇ, ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿಯಲು ಕಾರಣರಾಗಿದ್ದಾರೆ ಎಂದು ದೂಷಿಸಿದರು.
ನಮಗೆ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟರೆ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿಗಳು ಆಗಬೇಕು ಎಂಬುದನ್ನು ಪಟ್ಟಿಮಾಡಿ ಕೊಡಿ. ಅದೆಲ್ಲವನ್ನೂ ನಾವು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ ಅವರು ನಮ್ಮ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಪ್ರಚಾರ ಮಾಡಲು ಬಂದಿರುವುದು ನಮ್ಮ ನಾಡಿಗೆ ದೊಡ್ಡ ಶಕ್ತಿ ಬಂದಂತಾಗಿದೆ. ಅದೇ ರೀತಿ ನಮ್ಮ ಅಭ್ಯರ್ಥಿಗಳು ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಬುಲ್ಡೋಜರ್ ರೀತಿ ನಿರ್ನಾಮ ಮಾಡಬೇಕು ಎಂದು ಕರೆ ನೀಡಿದರು.
ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ: ಎಚ್.ಡಿ.ಕುಮಾರಸ್ವಾಮಿ
ಎರಡು ಸಾವಿರ ವರ್ಷಗಳ ಹಿಂದೆ ಸನಾತನ ಧರ್ಮ ಇಡೀ ದೇಶಕ್ಕೆ ವಿಸ್ತರಣೆ ಮಾಡಿದ ನಾಡು ನಮ್ಮ ಮಂಡ್ಯ ಜಿಲ್ಲೆ. ನಾಥಪಂಥರು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತಲುಪಿ ಅಲ್ಲಿ ನಾಥಪಂಥದ ಮಠವನ್ನು ಸ್ಥಾಪಿಸಿದ್ದಾರೆ. ಇದು ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ ಎಂದು ಬಣ್ಣಿಸಿದರು. ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಜಾ.ದಳ ಭದ್ರಕೋಟೆ ಇಂದು ಛಿದ್ರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಶೀರ್ವಾದದಿಂದ ಏಳೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯೋಗಿ ಆಗಮನದಿಂದ ಬಿಜೆಪಿ ಅಲೆ: ಮಂಡ್ಯ ಜಿಲ್ಲೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಆಗಮನದಿಂದ ಬಿಜೆಪಿ ಅಭ್ಯರ್ಥಿಗಳ ಪರ ಅಲೆ ಸೃಷ್ಠಿಯಾಗಲಿದೆ ಎಂದು ಮೇಲುಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು. ತಾಲೂಕಿನ ಮೇಲುಕೋಟೆ ಕ್ಷೇತ್ರದಲ್ಲಿ ಮಂಗಳವಾರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿ, ಸಿಎಂ ಯೋಗಿ ಆದಿತ್ಯನಾಥ ಏ.26ಕ್ಕೆ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಜಿಲ್ಲೆಯ ಬಿಜೆಪಿ ಸಂಘಟನೆಗೆ ಶಕ್ತಿಬರಲಿದೆ ಎಂದರು. ಮಂಡ್ಯದಲ್ಲಿ ರೋಡ್ ನಡೆಸುವ ಸಿಎಂ ಯೋಗಿಆದಿತ್ಯನಾಥ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಮತಭೇಟೆ ನಡೆಸಲಿದ್ದಾರೆ. ರೋಡ್ ಶೋನಲ್ಲಿ ಜಿಲ್ಲೆಯ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮೇಲುಕೋಟೆ ಕ್ಷೇತ್ರಕ್ಕೂ ಯೋಗಿ ಆದಿತ್ಯನಾತ್ ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಸಾ.ರಾ. ಆಯ್ಕೆಮಾಡಿ, ಎಚ್‌ಡಿಕೆಗೆ ಬಹುಮತ ನೀಡಿ: ಎಚ್.ಡಿ.ದೇವೇಗೌಡ
ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮನ್ಮುಲ್ ನಿರ್ದೇಶಕಿ, ಮೇಲುಕೋಟೆ ಉಸ್ತುವಾರಿ ರೂಪ, ತಾಲೂಕು ಅಧ್ಯಕ್ಷ ಎಲ್.ಅಶೋಕ್, ಜಿಲ್ಲಾ ಕಾರ್ಯದರ್ಶಿ ಮಂಗಳ ನವೀನ್, ಪರಿಮಳ ಇಂದ್ರೇಶ್, ಎಸ್ ಎನ್‌ಟಿ ಸೋಮಶೇಖರ್, ಈರೇಗೌಡ, ಅಶೋಕ್, ನವೀನ್, ರಾಜೀವ್, ಚಿಕ್ಕಮರಳಿ ನವೀನ್, ಗೋದಾವರಿ ಸೇರಿದಂತೆ ಹಲವರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.