ಸಂವಿಧಾನದ ರಚನಾಕಾರರು ಮೇಲ್ಮನೆಯ ಸದಸ್ಯರನ್ನು ಆಯ್ಕೆಮಾಡುವ ವಿಶೇಷ ಅಧಿಕಾರವನ್ನು ಕೇವಲ ಪದವೀಧರರಿಗೆ ಮತ್ತು ಪ್ರೌಢಶಾಲೆಗೆ ಮೇಲ್ಪಟ್ಟಶಿಕ್ಷಕರಿಗೆ ನೀಡಿರುವುದರ ಹಿಂದಿನ ಮಹತ್ವವನ್ನು ಅರಿತುಕೊಂಡು ಮತ ಚಲಾಯಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ.
ಸಂವಿಧಾನದ ರಚನೆಯ ಸಂದರ್ಭದಲ್ಲಿ ಸಂವಿಧಾನದ ಕರ್ತೃಗಳು ಸಾಕಷ್ಟುಚರ್ಚೆ ಮತ್ತು ಸಂವಾದಗಳ ನಂತರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೇಲ್ಮನೆಯ ಕಲ್ಪನೆಯೊಂದಿಗೆ ಉಭಯ ಸದನಗಳ ಶಾಸಕಾಂಗದ ರಚನೆಗೆ ಅನುವು ಮಾಡಿಕೊಟ್ಟಿದ್ದಾರೆ.
ಜೊತೆಗೆ ಸಾಕಷ್ಟು ಪೂರ್ವಾಲೋಚನೆಯೊಂದಿಗೆ ಮೇಲ್ಮನೆಯ ಸದಸ್ಯರ ಆಯ್ಕೆಗೆ ಅಗತ್ಯವಿರುವ ಮಾನದಂಡಗಳನ್ನು ಮತ್ತು ಸದಸ್ಯರ ಆಯ್ಕೆಯ ಕ್ಷೇತ್ರಗಳನ್ನು ನಿರ್ಣಯಿಸಿದ್ದಾರೆ. ಕೇಂದ್ರದಲ್ಲಿನ ರಾಜ್ಯಸಭೆ ಮತ್ತು ಲೋಕಸಭೆಗಳ ಮಾದರಿಯಲ್ಲಿ ವಿಧಾನ ಪರಿಷತ್ ಮತ್ತು ವಿಧಾನ ಸಭೆಯನ್ನು ಹೊಂದಿರುವ ಉಭಯ ಸದನಗಳ ಶಾಸಕಾಂಗ ನಮ್ಮ ದೇಶದ ಸುಮಾರು 8 ರಾಜ್ಯಗಳಲ್ಲಿ ಕಾರ್ಯವೆಸಗುತ್ತಿದೆ.
ಕರ್ನಾಟಕ ರಾಜ್ಯದ ವಿಧಾನಪರಿಷತ್ತಿನಲ್ಲಿ 75 ಸ್ಥಾನಗಳಿದ್ದು, 25 ಸದಸ್ಯರು ವಿಧಾನಸಭೆಯಿಂದ, 25 ಸದಸ್ಯರು ಸ್ಥಳೀಯ ಸಂಸ್ಥೆಗಳಿಂದ, 7 ಸದಸ್ಯರು ಪದವೀಧರರ ಕ್ಷೇತ್ರದಿಂದ, 7 ಸದಸ್ಯರು ಶಿಕ್ಷಕರ ಕ್ಷೇತ್ರದಿಂದ ಹಾಗೂ 11 ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ವಿಧಾನ ಪರಿಷತ್ ಚುನಾವಣೆ: ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮಾಹಿತಿ
ಇದೇ ಬರುವ ಜೂನ್ 13, 2022ರಂದು ವಿಧಾನ ಪರಿಷತ್ತಿನ 2 ಪದವೀಧರ ಕ್ಷೇತ್ರದ ಮತ್ತು 2 ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ನೊಂದಣಿ ಮಾಡಿಸಿಕೊಂಡಿರುವ ಪದವೀಧರ ಮತ್ತು ಶಿಕ್ಷಕ ಮತದಾರರು ಮುಂದಿನ 6 ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯದ ಮೇಲ್ಮನೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ.
ದೇಶದ ಯಾವುದೇ ಅಧಿಕೃತ ವಿಶ್ವವಿದ್ಯಾಲಯದಿಂದ 3 ವರ್ಷಗಳ ಹಿಂದೆ ಪದವಿ ಪಡೆದು ಚುನಾವಣಾ ಕ್ಷೇತ್ರದಲ್ಲಿ ನೊಂದಣಿ ಮಾಡಿಸಿರುವ ಪದವೀಧರರು ಪದವೀಧರ ಕ್ಷೇತ್ರಕ್ಕೆ ಮತದಾರರು. ಅದೇ ರೀತಿ ಪ್ರೌಢಶಾಲೆ ಮತ್ತು ಮೇಲ್ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ, ಚುನಾವಣಾ ಕ್ಷೇತ್ರದಲ್ಲಿ ನೋಂದಣಿ ಮಾಡಿಸಿಕೊಂಡಿರುವ ಶಿಕ್ಷಕರು ಶಿಕ್ಷಕರ ಕ್ಷೇತ್ರದ ಮತದಾರರು.
ಮೇಲ್ಮನೆಯಲ್ಲಿ ಮಹತ್ವದ ಚರ್ಚೆ
ಸದನಗಳು ನಡೆಯುವ ಸಂದರ್ಭದಲ್ಲಿ ಜನಸಾಮಾನ್ಯರ ಜೀವನದಲ್ಲಿ ಅಗಾಧ ಪರಿಣಾಮ ಬೀರಬಲ್ಲ ವಿಧೇಯಕಗಳನ್ನು ಜಾರಿಗೆ ತರುವ ಮುನ್ನ ಸಾಕಷ್ಟುಗಂಭೀರವಾದ ಚರ್ಚೆ ನಡೆದು, ಸಾಧಕ ಬಾಧಕಗಳನ್ನು ವಿಮರ್ಶಿಸಿ ನಿರ್ಣಯ ತೆಗೆದುಕೊಳ್ಳುವ ಅಗತ್ಯವಿದ್ದು, ಕೆಳಮನೆಗಳಲ್ಲಿನ ಸಂಖ್ಯೆ ಹಾಗೂ ಸಮಯದ ಮಿತಿ ಅಲ್ಲದೇ ಜನರಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಅಭಿವೃದ್ಧಿಯ ಎಲ್ಲಾ ಆಯಾಮಗಳಲ್ಲೂ ವಿಸ್ತೃತ ವಿಮರ್ಶೆಗೆ ಅವಕಾಶಗಳು ಲಭ್ಯ ಇಲ್ಲದಿರುವ ಸಾಧ್ಯತೆಗಳಿಂದ ಮೇಲ್ಮನೆಯ ರಚನೆ ಅತ್ಯಂತ ಮಹತ್ವದ್ದಾಗಿರುತ್ತದೆ. ಮೇಲ್ಮನೆಯ ಸದಸ್ಯರ ಸಂಖ್ಯೆ ಕೆಳಮನೆಯ ಒಟ್ಟು ಸಂಖ್ಯೆಯ 1/3ರಷ್ಟುಇರುವುದರಿಂದ ಮೇಲ್ಮನೆಯಲ್ಲಿ ಕೆಳಮನೆಯ 3ರಷ್ಟುಅವಧಿ ಚರ್ಚೆಗೆ ಲಭ್ಯವಿರುತ್ತದೆ. ಇದರಿಂದಾಗಿ ಯಾವುದೇ ವಿಷಯಗಳ ಕುರಿತು ವಿಸ್ತೃತ ಚರ್ಚೆಗೆ ಹೆಚ್ಚಿನ ಕಾಲಾವಕಾಶ ಲಭ್ಯವಿರುತ್ತದೆ.
ಪ್ರಜ್ಞಾವಂತ ಮತದಾರರಿಂದ ಆಯ್ಕೆ
ಸಂವಿಧಾನದ ರಚನಾಕಾರರು ಮೇಲ್ಮನೆಯ ಸದಸ್ಯರನ್ನು ಆಯ್ಕೆಮಾಡುವ ವಿಶೇಷ ಅಧಿಕಾರವನ್ನು ಕೇವಲ ಪದವೀಧರರಿಗೆ ಮತ್ತು ಪ್ರೌಢಶಾಲೆಗೆ ಮೇಲ್ಪಟ್ಟಶಿಕ್ಷಕರಿಗೆ ನೀಡಿರುವುದರ ಹಿಂದಿನ ಮಹತ್ವವನ್ನು ಅರಿತುಕೊಂಡು ಮತ ಚಲಾಯಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರಲು ಸಹಾಯವಾಗುತ್ತದೆ. ಜನರಿಂದ ನೇರವಾಗಿ ಕೆಳಮನೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಂಭವಿಸಬಹುದಾದ ಲೋಪದೋಷಗಳು ಅತ್ಯಂತ ಪ್ರೌಢ ಮತ್ತು ಪ್ರಜ್ಞಾವಂತ ಮತದಾರರಾದ ಪದವೀಧರರು ಮತ್ತು ಶಿಕ್ಷಕರಿಂದ ಆಗುವುದಿಲ್ಲ ಎಂಬ ವಿಶ್ವಾಸದಿಂದ ಈ ವಿಶೇಷ ಜವಾಬ್ದಾರಿಯನ್ನು ಪದವೀಧರರಿಗೆ ಮತ್ತು ಶಿಕ್ಷಕರಿಗೆ ನೀಡಿರುವುದರಿಂದ ಸಾಂವಿಧಾನಿಕ ಸಂಸ್ಥೆಯಾದ ಶಾಸಕಾಂಗದ ರಚನೆಯಲ್ಲಿ ಪ್ರಜ್ಞಾವಂತ ಮತದಾರರಾದ ಪದವೀಧರ ಮತ್ತು ಶಿಕ್ಷಕರ ಜವಾಬ್ದಾರಿ ಇಂದಿನ ಸಂದರ್ಭದಲ್ಲಿ ಇನ್ನೂ ಹೆಚ್ಚು ಮಹತ್ವಪೂರ್ಣವಾಗಿದೆ.
ವಿಧಾನ ಪರಿಷತ್ ಚುನಾವಣೆ: 'ಕಾಂಗ್ರೆಸ್, ಜೆಡಿಎಸ್‌ನಿಂದ ಹಣದ ಆಮಿಷ'
ಕರ್ನಾಟಕ ರಾಜ್ಯದ ಮೇಲ್ಮನೆಗೆ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಮ್ಮ ರಾಜ್ಯದ ಈ ಕ್ಷೇತ್ರಗಳ ಅತ್ಯಂತ ಪ್ರಜ್ಞಾವಂತ ಹಾಗೂ ಪ್ರೌಢ ಮತದಾರರು ನಿರಂತರವಾಗಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತಿರುವುದು ವಾಸ್ತವ. ಡಿ.ಎಚ್.ಶಂಕರಮೂರ್ತಿ, ಕೃ.ನರಹರಿ, ಡಾ.ಎಮ್.ಆರ್.ತಂಗ, ಕರಂಬಳ್ಳಿ ಸಂಜೀವಶೆಟ್ಟಿ, ರಾಮಚಂದ್ರಗೌಡ ಮತ್ತು ಬಾಲಕೃಷ್ಣ ಭಟ್ಟಮುಂತಾದವರು ಈ ನಿಟ್ಟಿನಲ್ಲಿ ಮೇಲ್ಮನೆಯ ಮಾದರಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆ ತಂದಿದೆ.
ಸಮರ್ಥ ಅಭ್ಯರ್ಥಿಗಳನ್ನು ಆರಿಸಿ
ದೇಶವು ಅನುಭವಿಸುತ್ತಿರುವ ಅದ್ಭುತವಾದ ಬದಲಾವಣೆಯ ಪರ್ವಕಾಲದಲ್ಲಿ ನಮ್ಮ ರಾಜ್ಯದ ಅತ್ಯಂತ ಪ್ರಜ್ಞಾವಂತ ಮತ್ತು ಪ್ರಬುದ್ಧ ಪದವೀಧರ ಮತ್ತು ಶಿಕ್ಷಕ ಮತದಾರರು ಮೇಲ್ಮನೆಯ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಂದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸುವರ್ಣಾವಕಾಶವನ್ನು ಹೊಂದಿದ್ದಾರೆ. ದೇಶದ ಸಾಂಸ್ಕೃತಿಕ ಪುನರುತ್ಥಾನ, ಅತ್ಯಂತ ಪರಿಣಾಮಕಾರಿ ಅಂತರರಾಷ್ಟ್ರೀಯ ನೀತಿ, ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020, ದೊಡ್ಡ ಸಂಖ್ಯೆಯಲ್ಲಿ ಎ.ಐ.ಐ.ಎಮ್, ಐ.ಐ.ಟಿ, ಐ.ಐ.ಎಮ್ ಮುಂತಾದ ಸಂಸ್ಥೆಗಳ ಪ್ರಾರಂಭ, ಪಾರದರ್ಶಕ ಆಡಳಿತ, ಸೋರಿಕೆ ಇಲ್ಲದ ಗರೀಬ್ ಕಲ್ಯಾಣ ಯೋಜನೆಗಳು, ಸ್ವಚ್ಛ ಭಾರತದ ಯೋಜನೆಯ ಅನುಷ್ಠಾನ, ರಸ್ತೆ, ರೈಲು, ವಿಮಾನಯಾನ ಹಾಗೂ ಜಲಯಾನಗಳ ಯೋಜನೆಗಳಲ್ಲಿ ಗುಣಮಟ್ಟದ ಮೂಲಭೂತ ಸೌಕರ್ಯಗಳ ನಿರ್ಮಾಣ, ಗಡಿ ಭದ್ರತೆ, ಸೇನೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರೈಕೆ, ಆಂತರಿಕ ಸುರಕ್ಷತೆ, ಕಾಶ್ಮೀರದ ಸಮಸ್ಯೆಗೆ ಪರಿಹಾರ, ಪ್ರತ್ಯೇಕತೆ-ಮೂಲಭೂತವಾದ-ಭಯೋತ್ಪಾದನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ, ಜಗತ್ತು ಎದುರಿಸಿದ ಕೋವಿಡ್ ಮಹಾಮಾರಿ ಮತ್ತು ಉಕ್ರೇನ್-ರಷ್ಯಾ ಯುದ್ಧದ ಗಂಭೀರ ಆರ್ಥಿಕ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಿ ಪ್ರಪಂಚದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿರುವುದು ವಿಶ್ವ ಭೂಪಟದಲ್ಲಿ ಭಾರತವನ್ನು ಅತ್ಯಂತ ಪ್ರಮುಖ ರಾಷ್ಟ್ರವನ್ನಾಗಿ ಗುರುತಿಸುವಂತೆ ಮಾಡಿದೆ.
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜೆ.ಓ.ಸಿ. ಶಿಕ್ಷಕ/ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ನೀಡಿರುವುದು, ಮೊರಾರ್ಜಿ ವಸತಿ ಶಾಲೆಗಳ ಶಿಕ್ಷಕರ ಕಾಯಮಾತಿ, 191 ಪದವಿ ಕಾಲೇಜುಗಳ ಪ್ರಾರಂಭ, 14 ಇಂಜಿನಿಯರಿಂಗ್ ಕಾಲೇಜುಗಳ ಪ್ರಾರಂಭ, ಶಾಶ್ವತ ಅನುದಾನರಹಿತ ಎನ್ನುವ ಹಿಂದಿನ ಸರ್ಕಾರದ ನೀತಿಯನ್ನು ತಿದ್ದಿ 87-92 ಹಾಗೂ 92-95ರವರೆಗೆ ಪ್ರಾರಂಭಿಸಿದ ಶಾಲಾ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಿರುವುದು, ಅನುದಾನಿತ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ತುಂಬಲು ಅನುಮತಿ ನೀಡಿರುವುದು, ಶಿಕ್ಷಕ ಮತ್ತು ಉಪನ್ಯಾಸಕರ ನೇಮಕಾತಿಗೆ ಕೈಗೊಂಡಿರುವ ಕ್ರಮಗಳು ಮುಂತಾದ ಮಹತ್ತರ ನಿರ್ಣಯಗಳ ಮೂಲಕ ಶಿಕ್ಷಣ ಕ್ಷೇತ್ರವನ್ನು ಆದ್ಯತೆಯ ಕ್ಷೇತ್ರವನ್ನಾಗಿ ಪರಿವರ್ತಿಸಿದೆ.
ಪರಿಷತ್ ಕ್ಷೇತ್ರ ಸಮೀಕ್ಷೆ: ಪಶ್ಚಿಮದಲ್ಲಿ ಗುರು- ಶಿಷ್ಯರ ಕಾಳಗ!
ನಮ್ಮ ದೇಶವು ವಿಶ್ವದ ಅಗ್ರಮಾನ್ಯರಾಷ್ಟ್ರವಾಗುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದ್ದು, ಈ ಸಂದರ್ಭದಲ್ಲಿ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಪ್ರಜ್ಞಾವಂತ ಮತದಾರರು ಸಂವಿಧಾನ ನೀಡಿದ ಈ ವಿಶೇಷ ಜವಾಬ್ದಾರಿಯನ್ನು ಅರ್ಥೈಸಿಕೊಂಡು, ಪ್ರಲೋಭನೆಗಳಿಗೆ ಒಳಗಾಗದೆ ಮೇಲ್ಮನೆಗೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಪ್ರಜಾಪ್ರಭುತ್ವ ಯಶಸ್ವೀ ಪ್ರಜಾಪ್ರಭುತ್ವವಾಗುವಲ್ಲಿ ಪ್ರಜೆಗಳಾಗಿ ನಮ್ಮ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವುದು ನಮ್ಮ ಪ್ರಾಥಮಿಕ ಕರ್ತವ್ಯ ಮತ್ತು ಆದ್ಯತೆಯಾಗಬೇಕು.
- ಕ್ಯಾ.ಗಣೇಶ್ ಕಾರ್ಣಿಕ್, ರಾಜ್ಯ ಬಿಜೆಪಿ ವಕ್ತಾರ