ಎಸ್‌ಸಿ ಎಸ್‌ಟಿ ಮೀಸಲು ಅನುದಾನವನ್ನು ಬೇರೆಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಈ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸೋಮವಾರಪೇಟೆ (ಜು.31): ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮುಖ್ಯಮಂತ್ರಿ ವಾಲ್ಮೀಕಿ ನಿಗಮ ಸೇರಿದಂತೆ ಮೂಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ. ಎಸ್‌ಸಿ ಎಸ್‌ಟಿ ಮೀಸಲು ಅನುದಾನವನ್ನು ಬೇರೆಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಈ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಬಿಜೆಪಿಯ ಸೋಮವಾರಪೇಟೆ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭ್ರಷ್ಟತೆಯನ್ನು ಪ್ರಶ್ನಿಸುವ, ಪರಿಣಾಮಕಾರಿಯಾಗಿ ಹೋರಾಟ ರೂಪಿಸುವ ಅಗತ್ಯವಿದ್ದು, ಯುವ ನಾಯಕರು ಹೋರಾಟಕ್ಕೆ ಇಳಿಯಬೇಕು.
ಆ ಮೂಲಕ ೨೦೨೮ರ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಿಂದ ಯುವ ನಾಯಕರು ಶಾಸಕರಾಗಿ ಆಯ್ಕೆಯಾಗಬೇಕು ಎಂದು ಅವರು ಕರೆ ನೀಡಿದರು. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳ ಮೂಲಕ ಯಾರಿಗೂ ಹಣ ಬರುತ್ತಿಲ್ಲ. ಈ ಗ್ಯಾರಂಟಿಗಳು ಕಾಂಗ್ರೆಸ್ ಎಲೆಕ್ಷನ್‌ಗಾಗಿ ಮಾಡಿದ ಗಿಮಿಕ್ ಎಂಬುದು ಜನರಿಗೆ ಮನದಟ್ಟಾಗಿದೆ. ಮಳೆಯಿಂದ ಹಾನಿಯಾದರೆ ಬಿಜೆಪಿ ಸರ್ಕಾರ ಲಕ್ಷ ಪರಿಹಾರ ನೀಡುತ್ತಿತ್ತು. ಈಗಿನ ಕಾಂಗ್ರೆಸ್ ಬಿಡಿಗಾಸೂ ನೀಡಿಲ್ಲ ಎಂದು ದೂರಿದರು.
undefined
ಶರಾವತಿ ನದಿಪಾತ್ರದ ಜನರ ಬಗ್ಗೆ ಎಚ್ಚರ ವಹಿಸಿ: ಸಚಿವ ಮಂಕಾಳು ವೈದ್ಯ ಸೂಚನೆ
ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಬಿಜೆಪಿ ಸರ್ಕಾರದಿಂದ ಕನಿಷ್ಟ ೫೦ ಸಾವಿರದಿಂದ ಗರಿಷ್ಠ ೫ ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಜಲ ಪ್ರಳಯದಿಂದ ಮನೆ ಕಳೆದುಕೊಂಡವರಿಗೆ ನಿವೇಶನ ಕಲ್ಪಿಸಿ ೧೦ ಲಕ್ಷ ವೆಚ್ಚದಲ್ಲಿ ಮನೆಯನ್ನೂ ನಿರ್ಮಿಸಿಕೊಡಲಾಗಿತ್ತು. ಆದರೆ ಕಾಂಗ್ರೆಸ್ ಬಂದ ನಂತರ ಮಳೆಯಿಂದ ಮನೆಗಳಿಗೆ ಹಾನಿಯಾದರೆ ಪರಿಹಾರವನ್ನು ೬ ಸಾವಿರದಿಂದ ಗರಿಷ್ಠ ೧.೨೦ ಲಕ್ಷಕ್ಕೆ ಇಳಿಸಿದೆ. ಇಂತಹ ಜನವಿರೋಧಿ ಸರ್ಕಾರ ಈವರೆಗೆ ಬಂದಿರಲಿಲ್ಲ ಎಂದು ಆರೋಪಿಸಿದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ೪೦ ಪರ್ಸೆಂಟ್ ಕಮಿಷನ್ ಸರ್ಕಾರ, ಪೇ ಸಿ.ಎಂ. ಎಂದು ಸುಳ್ಳು ಹೇಳಿದ್ದನ್ನು ಜನರು ನಂಬಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಆರಂಭದಿಂದ ಇಲ್ಲಿಯವರೆಗೂ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಇದಕ್ಕೆ ವಾಲ್ಮೀಕಿ ನಿಗಮ ಹಾಗೂ ಮೂಡಾ ನಿವೇಶನ ಹಗರಣಗಳೇ ಸಾಕ್ಷಿಯಾಗಿದೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ವಿಧಾನ ಸಭಾ ಚುನಾವಣೆಯಲ್ಲಿ ಸೋಲಾಗಿದ್ದರೂ ನಂತರದ ದಿನಗಳಲ್ಲಿ ಬಿಜೆಪಿ ಇನ್ನಷ್ಟು ಬಲಗೊಂಡಿದೆ.
ಮೈಸೂರು ಪಾದಯಾತ್ರೆ ಹಿಂದೆ ಒಳ ಒಪ್ಪಂದ ರಾಜಕಾರಣ: ಶಾಸಕ ಬಸನಗೌಡ ಯತ್ನಾಳ್
ಎಂಎಲ್‌ಸಿ, ಎಂ.ಪಿ. ಸೇರಿದಂತೆ ಸಹಕಾರಿ ಸಂಘದ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ. ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಬೇಕಿದೆ ಎಂದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಬಿಜೆಪಿ ಉಪಾಧ್ಯಕ್ಷ ಎಚ್.ಕೆ. ಮಾದಪ್ಪ ಮಾತನಾಡಿದರು. ಮಂಡಲ ಅಧ್ಯಕ್ಷ ಗೌತಮ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ವಿ.ಕೆ. ಲೋಕೇಶ್, ಮಹೇಶ್ ಜೈನಿ, ಅಭಿಮನ್ಯು ಕುಮಾರ್, ಶುಶ್ರೂತ್ ಗೌಡ, ಮನುಕುಮಾರ್ ರೈ, ಮಚ್ಚಂಡ ಪ್ರಕಾಶ್, ಕವಿತಾ ವಿರೂಪಾಕ್ಷ, ಮಹೇಶ್ ತಿಮ್ಮಯ್ಯ ಮತ್ತಿತರರಿದ್ದರು.