ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಹೋರಾಟಕ್ಕೆ ಸಿದ್ದರಾಮಯ್ಯನವರು ಗೈರಾಗಿರುವುದಕ್ಕೆ ಎಸ್.ಟಿ. ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ರಾಯಚೂರು, (ಡಿ.04): ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಪಕ್ಷಾತೀತವಾಗಿ ಸಮಾಜದ ನಾಲ್ಕು ಜನ ಮಠಾಧೀಶರ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗಿದೆ ಎಂದು ಮಾಜಿ ಸಂಸದ ಹಾಗೂ ಕುರುಬ ಎಸ್.ಟಿ. ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.
ರಾಯಚೂರಿನಲ್ಲಿ ಇಂದು (ಶುಕ್ರವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಅನೇಕ ಹೋರಾಟಗಳು ನಡೆದಿವೆ. ಈಚೆಗೆ ನಡೆದ ಸಮಾವೇಶದಲ್ಲಿಯೂ ಕೂಡ ಸಮಾಜದ ಗುರು ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದರೂ ಕೂಡ ಅವರು ಬರಲಿಲ್ಲ. ಸಿದ್ದರಾಮಯ್ಯನವರು ಕುರುಬ ಸಮಾಜದ ಮುಂಚೂಣಿ ನಾಯಕ. ಆದರೆ ಹೋರಾಟಕ್ಕೆ ಬಾರದಿರಲು ಒಳ ಮರ್ಮ ಏನು ಎಂದು ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದೆ ಸಾಗೋಣ ಬನ್ನಿ: ಸಿದ್ದರಾಮಯ್ಯಗೆ ಆಹ್ವಾನ ನೀಡಿದ ವಿಶ್ವನಾಥ್ ನಡೆ ಕುತೂಹಲ
ಈಗಾಗಲೇ ಸಮಾಜದ ಜನಪ್ರತಿನಿಧಿಗಳು ಸಮಾಜದ ಗುರುಗಳು, ಮಹಿಳಾ ಮುಖಂಡರು ಸಮಾವೇಶ ಮಾಡಿದ್ದಾರೆ. ಬಿಜೆಪಿ ರಾಷ್ಟ್ರ ಕಾರ್ಯದರ್ಶಿ ಬಿ.ಎಲ್.ಸಂತೋಷ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ. ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇದು ಆರ್ ಎಸ್‌ಎಸ್ ಹೋರಾಟವಲ್ಲ. ಸಮಾಜದ ಹೋರಾಟ ಎಂದು ಹೇಳಿದರು.
ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜನವರಿ 2, ಬಳ್ಳಾರಿ ಮತ್ತು ಕೊಪ್ಪಳ ಹಾಗೂ ಜನವರಿ 3 ರಂದು ಕಲಬುರಗಿ, ಯಾದಗಿರಿ ಬೀದರ್ ಜಿಲ್ಲೆಗಳಲ್ಲಿ ಸಮಾವೇಶ ಆಯೋಜಿಸಲಾಗುವುದು ಎಂದು ವಿವರಿಸಿದರು.
ಆನಂತರ ಜನವರಿ 15 ರಂದು ಕಾಗಿನೆಲೆ ಕನಕಗುರುಪೀಠದ ನಾಲ್ಕು ಜನ ಶ್ರೀಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಕಾಲ್ನಡಿಗೆ ಜಾಥಾದ ಮೂಲಕ ಫೆಬ್ರವರಿ 7ರಂದು ಬೆಂಗಳೂರಿನಲ್ಲಿ 10 ಲಕ್ಷ ಸಮಾಜದ ಜನರನ್ನು ಸೇರಿಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.