
ಕಾರವಾರ (ಮಾ.13): ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಿದ್ದಕ್ಕೆ ನೋವಾಗಿಲ್ಲ. ಆದರೆ ಅನಂತ್‌ಕುಮಾರ ಹೆಗಡೆ ಬಂದಿಲ್ಲವೆಂದು ನೋವಾಗಿದೆ. ವಿಧಾನಸಭಾ ಚುನಾವಣೆ ವೇಳೆ ಒಂದು ಬಾರಿ ಬಂದು ಹೋಗಿದ್ದರೆ ಕಾರವಾರದಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ಈ ಮಾತನ್ನು ನಾನು ಹೇಳುತ್ತಿಲ್ಲ. ಇಡೀ ಕಾರವಾರದ ಜನ ಹೇಳುತ್ತಿದ್ದಾರೆ ಎಂದು ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನೋವು ತೋಡಿಕೊಂಡರು. ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮಾತನಾಡಿದ ಅವರು, ಸಂಸದ ಅನಂತ್ ಅವರ ಹಿಂದೆ ಅವರದ್ದೇ ಆದ ಕಾರ್ಯಕರ್ತರ ಪಡೆಯಿದೆ.
ವಿಧಾನಸಭಾ ಚುನಾವಣೆಯಲ್ಲಿ ಅವರು ಬಾರದ್ದಕ್ಕೆ ನಮಗೆ ಹಿನ್ನಡೆ ಆಯಿತು. ಈಗಲಾದರೂ ನಮ್ಮ ಪಕ್ಷದ ಕಚೇರಿಗೆ ಬಂದು ಕಾರ್ಯಕರ್ತರ ಸಭೆಗೆ ಆಹ್ವಾನ ನೀಡಿದ್ದಕ್ಕೆ ಅಭಿನಂದನೆ ಎಂದರು. ಅನಂತ್ ಹೆಗಡೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದ ಸಮಯದಲ್ಲಿ ತಾವು ಆಕಾಂಕ್ಷಿಯಾಗಿದ್ದು, ಆದರೆ ಈಗ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತಾವು ಆಕಾಂಕ್ಷಿ ಅಲ್ಲ. ಯಾವತ್ತೂ ಅನಂತ್‌ರಿಗೆ ಟಿಕೆಟ್ ಕೊಡಬಾರದು ಎಂದು ಹೇಳಲಿಲ್ಲ. ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿರುವುದು ಸಂತಸ ಉಂಟುಮಾಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಮತವನ್ನು ಈ ಬಾರಿ ನಮ್ಮ ವಿಧಾನಸಭಾ ಕ್ಷೇತ್ರದಿಂದ ಕೊಡುತ್ತೇವೆ ಎಂದರು.
ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಮೆದುಳು ಕೇಂದ್ರ ಶುರು: ಸಚಿವ ದಿನೇಶ್ ಗುಂಡೂರಾವ್
ಮೋದಿ ವಿಶ್ವದ ಆಶಾಕಿರಣ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮಹಿಳೆಯರಿಗೆ ಅಧಿಕಾರದ ಅವಕಾಶ ಒದಗಿಸಿ, ಭದ್ರತೆ, ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮೋದಿ ಈ ದೇಶದ, ವಿಶ್ವದ ಆಶಾಕಿರಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಬಣ್ಣಿಸಿದರು. ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ನಾರಿಶಕ್ತಿ ವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮಿಸಲಾತಿ ನೀಡಿದ ಬಗ್ಗೆ ಒಬ್ಬ ಮಹಿಳೆಯಾಗಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.
ಹೆಣ್ಣುಮಕ್ಕಳಿಗೆ ಶಕ್ತಿ ನೀಡಲು ಮೊದಲ ಬಾರಿಗೆ ಈ ಮಸೂದೆ ಜಾರಿಗೆ ತಂದಿದ್ದಾರೆ. ಕಾಡಿಗೆ ಹೋಗಿ ಕಟ್ಟಿಗೆ ತರುವುದನ್ನು ತಪ್ಪಿಸಿ ಮಹಿಳೆಯರ ಕಣ್ಣೀರು ಒರೆಸಲು ಉಜ್ವಲ್ ಯೋಜನೆ ಜಾರಿಗೆ ತಂದು 8 ಕೋಟಿ ಜನರಿಗೆ ಅಡುಗೆ ಅನಿಲ ಸೌಲಭ್ಯ ಒದಗಿಸಿದ್ದಾರೆ ಎಂದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ, ರೈತ ಕಲ್ಯಾಣ ಯೋಜನೆ ಜಾರಿ, ಕೋಟ್ಯಂತರ ಜನರ ಕನಸಾಗಿದ್ದ ಪ್ರಭು ಶ್ರೀ ರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ಮೂಲಕ ಜನರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಕಾಶಿ, ಮಥುರಾ, ವಾರಣಾಸಿ... ಹೀಗೆ ವಿವಿಧ ಸ್ಥಳಗಳ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅಲ್ಲದೇ, ಭಕ್ತರಿಗೆ ತೆರಳಲು ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ರೂಪಾಲಿ ಹೇಳಿದರು.
ಜನಸಾಮಾನ್ಯರ ಹಿತಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ: ಸಚಿವ ಎಚ್.ಕೆ.ಪಾಟೀಲ್
ಮೋದಿಯೇ ಗ್ಯಾರಂಟಿ: ನಮ್ಮೆಲ್ಲರಿಗೂ ಮೋದಿಯೇ ಗ್ಯಾರಂಟಿ. ಬೇರೆ ಯಾವುದೇ ಗ್ಯಾರಂಟಿಗೆ ವಾರಂಟಿಗಳಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿಯ ಹೆಸರಿನಲ್ಲಿ ಬಡ ಜನರಿಗೆ ತೊಂದರೆ ಕೊಡುತ್ತಿದೆ. ಕೆಲವರಿಗೆ ಮಾತ್ರ ವಿದ್ಯುತ್ ಶುಲ್ಕ ವಿನಾಯಿತಿ ಮಾಡಿದಂತೆ ತೋರಿಸಿ, ಹಿಂಬಾಗಿಲಿನಿಂದ ಇತರರಿಗೆ ವಿದ್ಯುತ್ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮೂರು ದಿನ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಂದು ಮ್ಯಾರಥಾನ್ ಪೂರ್ಣಗೊಂಡಿದ್ದು, ವಿಧಾನಸಭಾ ಕ್ಷೇತ್ರವಾರು ಮಂಗಳವಾರ ಬೈಕ್ ರ್‍ಯಾಲಿ ಮತ್ತು ಮೂರನೆಯ ದಿನ ಮೋದಿ ಮಾತನಾಡುವ ಮೂಲಕ ಸಮಾರೋಪಗೊಳ್ಳಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.