ರೈತರ ಸಮೂಹವನ್ನೆ ಅಪಮಾನಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದು, ಇಂತಹ ಪರಿಸ್ಥಿತಿ ನೋಡಿದರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸರಕಾರ ಇದೆ ಅನಿಸುತ್ತಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ (ಸೆ.07): ರೈತರ ಸಮೂಹವನ್ನೆ ಅಪಮಾನಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದು, ಇಂತಹ ಪರಿಸ್ಥಿತಿ ನೋಡಿದರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸರಕಾರ ಇದೆ ಅನಿಸುತ್ತಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿಲ್ಲೆಗಳು ಬರಗಾಲದಲ್ಲಿ ತತ್ತರಿಸಿ ಹೋಗಿದ್ದು, ಕೆಲ ಕಡೆ ಮಾತ್ರ ಅತಿವೃಷ್ಠಿ ಎದುರಾಗಿದೆ. ಈಗಿರುವ ಇದೆ ಕಾಂಗ್ರೆಸ್ ಅಧಿಕಾರ ಇಲ್ಲದಿದ್ದಾಗ ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿ ಹೋರಾಟ ನಡೆಸಿದರು. ಈಗ ಅಧಿಕಾರ ಬಂದ ಮೇಲೆ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ.
ಹಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ಮಂತ್ರಿ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದು, ಇದೊಂದು ರೀತಿ ರಾಜ್ಯದಲ್ಲಿ ಇರುವ ರೈತ ಸಮೂಹವನ್ನೇ ಅಪಮಾನಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಸಚಿವರ ಹೇಳಿಕೆ ಅಕ್ಷಮ್ಯ ಅಪರಾಧವಾಗಿದ್ದು, ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಹಾಗೂ ರೈತರ ನೆರವಿಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು. ಎಸ್.ಸಿ.ಇ.ಪಿ. ಮತ್ತು ಟಿ.ಎಸ್..ಪಿ. ಹಣ ಬಳಕೆ ಮಾಡಲು ನಿಮಗೆ ಯಾರು ಪರ್ಮಿಷನ್ ಕೊಟ್ಟಿದ್ದು, ದಲಿತ ಸಮೂಹಕ್ಕೆ ಅನ್ಯಾಯ ಮಾಡುತ್ತಿದ್ದೀರಿ. ರಾಜ್ಯದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸರ್ಕಾರ ಇದೆ ಅನ್ನಿಸುತ್ತಿಲ್ಲ.
ತಮಿಳುನಾಡಿಗೆ ಕಾವೇರಿ ನೀರು: ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಪ್ರತಿಭಟನೆ
ಕಿಸಾನ್ ಸಮ್ಮಾನ್ ನಿಧಿಗೆ ಕೇಂದ್ರ ಜೊತೆ ನಾವು ನಾಲ್ಕು ಸಾವಿರ ಕೊಡುತ್ತಿದ್ದೆವು. ನೀವು ಏಕೆ ರದ್ದು ಮಾಡಿದ್ರು! ರೈತ ವಿದ್ಯಾನಿಧಿ ಏಕೆ ರದ್ದು ಪಡಿಸಿದ್ದೀರಾ, ನೂರು ದಿನದ ಆಡಳಿತದಲ್ಲಿ ರಾಜ್ಯದ ಮೂಲಸೌಕರ್ಯ ಹೂಡಿಕೆಗೆ ಯಾವ ಯೋಜನೆ ಕೈಗೆತ್ತಿಕೊಂಡಿದ್ದಾರೆ? ಉದ್ಯೋಗ ಸೃಷ್ಟಿಗೆ ಇರುವ ಕೈಗೊಂಡಿರುವ ಕ್ರಮ ಏನು? ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನೆಪಿಸಿಕೊಳ್ಳಬೇಕು ಎಂದರು. ಇನ್ನು ಗ್ಯಾರಂಟಿ ಹೆಸರಿನಲ್ಲಿ ಲೋಕಸಭೆ ಚುನಾವಣೆವರೆಗೂ ಮೂಗಿಗೆ, ಮೊಣಕೈಗೆ ತುಪ್ಪ ಸವರಿ ಓಟು ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಇವರ ಕಾಲ್ಗುಣವೇ ಒಂದು ಶಾಪ. ಬರಗಾಲ ಬಂದಿರುವುದು ಕಾಕತಾಳೀಯವೋ ಅಥವಾ ಕಾಲ್ಗುಣವು ಇರಬಹುದು. ಆಡಳಿತ ನೀತಿ ಶಾಪವಾಗುವ ಹಂತಕ್ಕೆ ತಲುಪಿದೆ. ಅದನ್ನು ಮರೆಮಾಚಲು ಕಾಗಕ್ಕ, ಗುಬ್ಬಕ್ಕ ಕಥೆ ಹೇಳ್ತಿದ್ದಾರೆ ಎಂದಯ ವ್ಯಂಗ್ಯವಾಡಿದರು. ತಮಿಳುನಾಡಿನವರು ನೀರು ಕೇಳುವ ಮೊದಲೆ ಕರ್ನಾಟಕದಿಂದ ನೀರು ನೀಡಲಾಗಿದೆ. ಎಲ್ಲಿ ಸ್ಟಾಲಿನ್ ಇಂಡಿಯಾ ಸಭೆಗೆ ಬರಲ್ಲ ಎಂದು ಹೆದರಿ ನೀರು ಬಿಟ್ಟರು. ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ನೀರು ಬಿಡಲ್ಲ ಅಂತ ಹೇಳಬೇಕಿತ್ತು. ಅವರ ದಾಟಿಯಲ್ಲಿ ನೀರು ಬಿಡಲ್ಲ ಎನ್ನಬೇಕಿತ್ತು. ಆದರೆ ತಲೆ ಹೋದರು ಪರ್ವಾಗಿಲ್ಲ ನೀರು ಕೊಟ್ಟೆ ಕೊಡ್ತೀನಿ ಅಂತಿದ್ದಾರೆ.
ಕಾವೇರಿ ನೀರು ವಿಚಾರದಲ್ಲಿ ಡಿಕೆಶಿಗೆ ಕರ್ನಾಟಕ ಜನರ ಕಷ್ಟ ಗೊತ್ತಿಲ್ಲ: ಸಿ.ಪಿ.ಯೋಗೇಶ್ವರ್
ನಮ್ಮ ರಾಜ್ಯದ ರೈತರ ಕಡೆಗೂ ಕಣ್ಣೆತ್ತಿ ನೋಡುತ್ತಿಲ್ಲ. ಇಂಡಿಯಾ ಹೆಸರು ಕೇಳಿ ಬಿಜೆಪಿಗೆ ನಡುಕ ಶುರುವಾಗಿದೆ ಎಂಬ ಡಿಕೆಶಿ ಹೇಳಿಕೆ ಡಿ.ಕೆ. ಶಿವಕುಮಾರ್ ದೇಶಕ್ಕೆ ಇಂಡಿಯಾ ಅಂತ ಹೆಸರಿಟ್ಟಿದ್ದು, ನಾನು ಬ್ರೀಟಿಷರು ಇಂಡಿಯಾ ಎಂದು ಹೆಸರು ಇಟ್ಟಿದ್ದರು ಅಂದುಕೊಂಡಿದ್ದೇನು. ಇವರು ಯಾರನ್ನು ಬೇಕಾದರೂ ಹೆದುರಿಸಬೇಕು ಅನ್ಕೊಂಡಿದ್ದಾರಾ! ಉತ್ತರ ಕುಮಾರನು ಹಂಗೆ ಕೊಚ್ಕೊತ್ತಿದ್ದನಂತೆ. ಸೈನ್ಯ ನೋಡುತ್ತಿದ್ದಂಗೆ ಗಢಗಢ ನಡುಗುತ್ತಿದ್ದ ಹಾಗೇ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಎಚ್.ಕೆ. ಸುರೇಶ್, ಮಾಜಿ ಶಾಸಕ ಪ್ರೀತಂ ಜೆ. ಗೌಡ, ಇತರರು ಉಪಸ್ಥಿತರಿದ್ದರು.