ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಇಪ್ಪತ್ತು ಸ್ಥಾನ ಸಹ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಭವಿಷ್ಯ ನುಡಿದರು.
ಬಳ್ಳಾರಿ (ಫೆ.03): ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಇಪ್ಪತ್ತು ಸ್ಥಾನ ಸಹ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಭವಿಷ್ಯ ನುಡಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಕಳೆದ ಬಾರಿ ಒಂದೆರಡು ಕ್ಷೇತ್ರಗಳಲ್ಲಿ ಗೆದ್ದಿದ್ದರು. ಈ ಬಾರಿ ಎಲ್ಲೂ ಗೆಲುವಿಲ್ಲ. ಬಿಜೆಪಿ ರಾಜ್ಯದಲ್ಲಿ 28 ಸ್ಥಾನಗಳು ಗೆಲ್ಲುವ ವಿಶ್ವಾಸವಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದರು.
ಆರಂಭದಲ್ಲಿ ಇಂಡಿಯಾ ಒಕ್ಕೂಟ ದೊಡ್ಡ ಸದ್ದು ಮಾಡಿತು. ಒಂದೆರಡು ಸಭೆಗಳಲ್ಲಿಯೇ ಢಮಾರ್ ಆಯಿತು. ದೇಶದಲ್ಲಿ ರಾಮಮಂದಿರ ಬಳಿಕ ಸರ್ವವೂ ರಾಮಮಯಂ ಆಗಿದೆ. ಮಂಡ್ಯದಲ್ಲಿ ರಾಷ್ಟ್ರಧ್ವಜ ಹಾರಿಸಬೇಡ ಎಂದವರಾರು? ಅತ್ಯಂತ ದೊಡ್ಡ ಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಲಿ. ನಾವೂ ಖುಷಿ ಪಡುತ್ತೇವೆ. ಆದರೆ, ಹನುಮಧ್ವಜ, ರಾಷ್ಟ್ರಧ್ವಜ ನೆಪದಲ್ಲಿ ಜಗಳ ಹಚ್ಚಿದ್ದು ಎಷ್ಟು ಸರಿ ಎಂದು ಕೇಳಿದರಲ್ಲದೆ, ಕುರುಬರ ಹಾಸ್ಟೆಲ್‌ಗಳ ಮೇಲೆ ಯಾರೂ ದಾಳಿ ಮಾಡಿಲ್ಲ. ಹಾಸ್ಟೆಲ್ ಮುಂದಿರುವ ಕಾಂಗ್ರೆಸ್ ಫ್ಲೆಕ್ಸ್ ಹರಿದಿದ್ದಾರಷ್ಟೇ.
ಕುರುಬರು ಸಹ ಹಿಂದುಗಳು. ಅವರು ದೇಶಭಕ್ತರು. ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರು ಸನಾತನ ಧರ್ಮ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಕುರುಬರು ಹನುಮ ಭಕ್ತರಾಗಿದ್ದಾರೆ ಎಂದರು. ಲಕ್ಷ್ಮಣ ಸವದಿ ಸೇರಿದಂತೆ ದೇಶಮುಖ್ಯ ಎನ್ನುವವರು ಬಿಜೆಪಿಗೆ ಬನ್ನಿ ಎಂದು ಆಹ್ವಾನಿಸುತ್ತೇವೆ. ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ವಿಚಾರಕ್ಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ, ಎಲ್ಲದಕ್ಕೂ ಕಾಲವೇ ನಿರ್ಧರಿಸುತ್ತದೆ ಎಂದರು. ಬಜೆಟ್ ಕುರಿತು ಪ್ರತಿಕ್ರಿಯಿಸಿ, ದೂರದೃಷ್ಟಿಯ ಬಜೆಟ್. ಜನಸಾಮಾನ್ಯರ ಬಜೆಟ್. ಬಡವರ ಪರವಾದ ಬಜೆಟ್ ಎಂದರು.
ಕುಮಾರಸ್ವಾಮಿಯಿಂದ ನಾನು ಲೀಡರ್ ಆಗಿಲ್ಲ: ಸಚಿವ ಚಲುವರಾಯಸ್ವಾಮಿ
ದೇಶ ವಿಭಜನೆ ಮಾಡಿದ್ದೇ ಕಾಂಗ್ರೆಸ್. ಈಗ ಅವರ ಬಾಯಿಯಲ್ಲಿ ವಿಭಜನೆ ಮಾತುಗಳು ಹೊರ ಬೀಳುತ್ತಿವೆ. ಆಗ ಜಾತಿ ಹೆಸರಿನಲ್ಲಿ ದೇಶ ಒಡೆದರು. ಇದೀಗ ಉತ್ತರ ಭಾರತ- ದಕ್ಷಿಣ ಭಾರತ ಹೆಸರಿನಲ್ಲಿ ದೇಶ ಒಡೆಯುವ ಹುನ್ನಾರ ನಡೆಸಿದ್ದಾರೆ. ಉತ್ತರ ಭಾರತವೂ ಭಾರತದ ಒಂದು ಭಾಗವಲ್ಲವೇ? ಬೆಂಗಳೂರಿನ ಆದಾಯ ಇಡೀ ರಾಜ್ಯಕ್ಕೆ ಹಂಚಿಕೆಯಾಗುವುದಿಲ್ಲವೇ? ಹಾಗಾದರೆ ಬೆಂಗಳೂರನ್ನು ಪ್ರತ್ಯೇಕ ರಾಜ್ಯ ಮಾಡಬೇಕೇ? ಡಿ.ಕೆ. ಸುರೇಶ್ ಹೇಳಿಕೆಗೆ ರಾಹುಲ್ ಗಾಂಧಿ ಉತ್ತರಿಸಲಿ. ಉತ್ತರ ಭಾರತದ ಮತಗಳು ಬೇಡವೆಂದು ಹೇಳಲಿ ಎಂದು ಸವಾಲು ಹಾಕಿದರು.