ರಾಜ್ಯದಲ್ಲಿ ಬರಗಾಲ ಕಾಡಲು ಸಿದ್ದರಾಮಯ್ಯ ಕಾಲ್ಗುಣ ಕಾರಣ: ಸಿ.ಟಿ.ರವಿ

By Kannadaprabha News  |  First Published Sep 17, 2023, 11:30 PM IST

ಮನುಸ್ಮೃತಿ ಜಾರಿ ಮಾಡುವ ಹುನ್ನಾರ ನಡೆದಿದೆ ಎಂದು ಸುಳ್ಳು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೊಲೀಸರು ಸುಮೊಟೊ ಕೇಸ್ ದಾಖಲಿಸಿ ಫ್ಯಾಕ್ಟ್ ಚೆಕ್ ಮಾಡಬೇಕು ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ. 


ಮಂಗಳೂರು (ಸೆ.17): ಮನುಸ್ಮೃತಿ ಜಾರಿ ಮಾಡುವ ಹುನ್ನಾರ ನಡೆದಿದೆ ಎಂದು ಸುಳ್ಳು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೊಲೀಸರು ಸುಮೊಟೊ ಕೇಸ್ ದಾಖಲಿಸಿ ಫ್ಯಾಕ್ಟ್ ಚೆಕ್ ಮಾಡಬೇಕು ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ನೂರಾರು ರಾಜರುಗಳು, ಸಂಸ್ಥಾನಗಳ ಆಳ್ವಿಕೆ ನಡೆದಿದೆ. ಈ ಯಾವ ಆಳ್ವಿಕೆಯಲ್ಲಿ ಮನುಸ್ಮೃತಿ ಸಂವಿಧಾನ ಆಗಿತ್ತು? 2 ಸಾವಿರ ವರ್ಷಗಳಿಂದ ಮನುಸ್ಮೃತಿ ಯಾವುದೇ ರಾಜ್ಯದ ಸಂವಿಧಾನ ಆಗಿಲ್ಲ. ಬಿಜೆಪಿಯ ಪ್ರಣಾಳಿಕೆಯಲ್ಲೂ ಮನುಸ್ಮೃತಿ ಜಾರಿಗೊಳಿಸುತ್ತೇವೆ ಎಂಬ ಭರವಸೆ ನೀಡಿಲ್ಲ. 

ಸಿಎಂ ತಮ್ಮ ಹೇಳಿಕೆಗೆ ಆಧಾರ ಕೊಡಬೇಕು, ಇಲ್ಲದಿದ್ದರೆ ಅವರೇ ಸುಳ್ಳು ಹೇಳಿದಂತಾಗುತ್ತದೆ. ಸುಳ್ಳು ಸುದ್ದಿಗಳನ್ನು ಹರಡಿದರೆ ಸುಮೊಟೊ ಪ್ರಕರಣ ದಾಖಲಿಸುತ್ತೇವೆ ಎನ್ನುತ್ತಾರೆ, ಈಗ ಪೊಲೀಸರು ಸಿಎಂ ಮೇಲೆ ಕೇಸ್ ದಾಖಲಿಸಿ ಫ್ಯಾಕ್ಟ್ ಚೆಕ್ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ರೀತಿ, ಗಾಂಧೀಜಿ ಹತ್ಯೆಗೆ ಆರೆಸ್ಸೆಸ್ ಕಾರಣ ಅಂತ ಕಾಂಗ್ರೆಸಿಗರು ತುಂಬ ಸಲ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲೇ ರಚಿಸಿದ ಮೂರು ಆಯೋಗಗಳು ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್‌ ಸಂಬಂಧವಿಲ್ಲ ಎಂದಿದ್ದರೂ, ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುತ್ತಿದ್ದಾರೆ. ಹೀಗೆ ಸುಳ್ಳು ಹೇಳುವವರ ಮೇಲೆ ಮೊದಲು ಕೇಸ್ ದಾಖಲಿಸಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದರು.

Tap to resize

Latest Videos

ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ವಿಳಂಬ: ನಮ್ಮದು ನಾಟ್ ರೀಚೇಬಲ್ ಎಂದ ಸಿ.ಟಿ.ರವಿ

350 ಪ್ಲಸ್ ಸೀಟ್ ಖಚಿತ: ಮುಂದಿನ ಲೋಕಸಭೆ ಚುನಾವಣೆ ಗೆಲ್ಲಲು ದೇಶಾದ್ಯಂತ ಸಿದ್ಧತೆ ನಡೆದಿದೆ. ಅದಕ್ಕೂ ಮೊದಲು ಬರುವ ೬ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಪ್ರಭಾರಿಗಳನ್ನು ನಿಯೋಜಿಸಿ ಗೆಲುವಿನ ಕಾರ್ಯ ನಡೆದಿದೆ. ಇಂಡಿಯಾ ಒಕ್ಕೂಟ ಏನೇ ಮಾಡಲಿ, ಬಿಜೆಪಿಯು 350ಕ್ಕಿಂತಲೂ ಅಧಿಕ ಸೀಟ್ ಗೆದ್ದು ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಭವಿಷ್ಯ ನುಡಿದರು.

ನಾವು ನೀತಿ, ನೇತೃತ್ವ ಮತ್ತು ನಿಯತ್ತನ್ನು ಜನರ ಮುಂದಿಟ್ಟು ಮತ ಕೇಳ್ತೇವೆ. ಸಬ್ ಕಾ ಸಾಥ್ ಸಬ್‌ಕಾ ವಿಕಾಸ್‌ ನಮ್ಮ ನೀತಿ, ಬಡವರಿಗೆ ಬಲ ಕೊಡೋದು, ಎಸ್‌ಸಿ ಎಸ್ಟಿ ಸಮುದಾಯಕ್ಕೆ ಶಕ್ತಿ ನೀಡೋದು ನಮ್ಮ ನೀತಿ. ಹಾಗಾಗಿ ಕೇಂದ್ರ ಸಂಪುಟದಲ್ಲಿ ಅತಿ ಹೆಚ್ಚು ಎಸ್ಸಿ ಎಸ್ಟಿ ಸಮುದಾಯಕ್ಕೆ ಮಂತ್ರಿಸ್ಥಾನ ನೀಡಲಾಗಿದೆ ಎಂದ ಸಿ.ಟಿ. ರವಿ, ನರೇಂದ್ರ ಮೋದಿ ನೇತೃತ್ವವನ್ನು ಅನೇಕ ದೇಶಗಳ ಪ್ರಧಾನಿಗಳು ಶ್ಲಾಘನೆ ಮಾಡಿದ್ದಾರೆ. ಜಗತ್ತಿನ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ದೇಶದ ಬಗೆಗಿನ ಬಿಜೆಪಿಯ ನಿಯತ್ತನ್ನು ಸಾಬೀತು ಮಾಡಿದ್ದೇವೆ. ಆದರೆ ಕಾಂಗ್ರೆಸ್ ಮತ್ತಿತರ ಪಕ್ಷಗಳ ಇಂಡಿಯಾ ಒಕ್ಕೂಟ ಇದಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

ಡಿ. ಸುಧಾಕರ್ ಸಂಪುಟದಿಂದ ಕೈಬಿಡಿ: ಸಚಿವ ಡಿ.ಸುಧಾಕರ್ ವಿರುದ್ಧ ದಲಿತರ ಆಸ್ತಿ ಕಬಳಿಕೆಯ ದೂರು ದಾಖಲಾಗಿದೆ. ಅವರನ್ನು ಕೂಡಲೆ ಸಚಿವ ಸಂಪುಟದಿಂದ ಕೈಬಿಟ್ಟು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ದಲಿತರ ಪರವಾಗಿರುವ ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಈ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ? ಅವರ ಮೌನ ಅನುಮಾನ ಸೃಷ್ಟಿ ಮಾಡ್ತಿದೆ ಎಂದು ಹೇಳಿದರು.

ಜನರೇ ಆಪರೇಶನ್ ಮಾಡ್ತಾರೆ: ಬಿಜೆಪಿ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಬೆಲ್ಲ ಇದ್ದಲ್ಲಿ ಇರುವೆ ಸ್ವಾಭಾವಿಕ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಕೆಲವು ಮಾಜಿ ಕಾರ್ಪೊರೇಟರ್‌ಗಳನ್ನು ಕಾಂಗ್ರೆಸ್‌ನವರು ಕರೆಸಿಕೊಳ್ಳುತ್ತಿದ್ದಾರೆ. ಆಪರೇಶನ್ ಹಸ್ತ ಮಾಡ್ತಿದಾರೆ. ನಾವು ಆಪರೇಶನ್ ಕಮಲ ಮಾಡಿ ಜನರು ನಮಗೆ ಆಪರೇಶನ್ ಮಾಡಿದರು. ಈಗ ಆಪರೇಶನ್ ಹಸ್ತ ಮಾಡುತ್ತಿರುವ ಕಾಂಗ್ರೆಸ್‌ಗೆ ಮುಂದೆ ಜನರೇ ಆಪರೇಶನ್ ಮಾಡಲಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ, ಜಿಲ್ಲಾ ಬಿಜೆಪಿ ವಕ್ತಾರ ರವಿಶಂಕರ ಮಿಜಾರು, ಮೇಯರ್ ಸುಧೀರ್‌ ಶೆಟ್ಟಿ ಕಣ್ಣೂರು ಇದ್ದರು.

ಸನಾತನ ಧರ್ಮಕ್ಕೆ ಬೈಯ್ದವರ ಕುಟುಂಬಕ್ಕೆ ಏಡ್ಸ್, ಕುಷ್ಟ ರೋಗ ಬರುತ್ತೆ: ಶಾಸಕ ಯತ್ನಾಳ್

ಬರ ಕಾಂಗ್ರೆಸ್ ಕಾಲ್ಗುಣ ಎಂದ ಸಿಟಿ ರವಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗುತ್ತಾ ಬಂತು. ಆದರೆ ಆರಂಭದಲ್ಲೆ ತಪ್ಪು ಹೆಜ್ಜೆ ಇಟ್ಟಿದಾರೆ. ಜನರು ಬೆಲೆ ಏರಿಕೆ ಬರೆ ಅನುಭವಿಸಬೇಕಾಗಿದೆ. ನೋಂದಣಿ ಶುಲ್ಕ, ಬಸ್ ದರ, ಅಬಕಾರಿ ಸುಂಕ ಏರಿಕೆ ಜತೆಗೆ ಬರವೂ ಕಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಬರ ಕಾಡುವುದು ಕಾಕತಾಳೀಯ ಅನಿಸಲ್ಲ, ಅದು ಅವರ ಕಾಲ್ಗುಣವೂ ಇರಬಹುದು. ಹಿಂದೆಯೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಬರ ಬಂದಿತ್ತು ಎಂದು ಸಿ.ಟಿ. ರವಿ ಟೀಕಿಸಿದರು.

click me!