ರಾಜ್ಯದಲ್ಲಿ ಇದೀಗ ಮತ್ತೆ ಜಾತಿ ಗಣತಿ ಹಾಗೂ ಒಳ ಮೀಸಲಾತಿ ವಿಚಾರ ಮುನ್ನೆಲೆಗೆ ಬಂದಿದೆ. ಜಾತಿ ಗಣತಿ ವಿಚಾರದಲ್ಲಿ ಮೇಲ್ವರ್ಗಗಳು ತಕರಾರು ಎತ್ತಿದ್ದರೆ, ಒಳ ಮೀಸಲಾತಿಗೆ ಪ್ರತಿಪಕ್ಷಗಳೆಲ್ಲ ಸಮ್ಮತಿ ಸೂಚಿಸಿದ್ದರೂ ಕಾಂಗ್ರೆಸ್ ನೊಳಗೆ ವಿರೋಧವಿದೆ.
ಚಂದ್ರಮೌಳಿ.ಎಂ.ಆರ್
ರಾಜ್ಯದಲ್ಲಿ ಇದೀಗ ಮತ್ತೆ ಜಾತಿ ಗಣತಿ ಹಾಗೂ ಒಳ ಮೀಸಲಾತಿ ವಿಚಾರ ಮುನ್ನೆಲೆಗೆ ಬಂದಿದೆ. ಜಾತಿ ಗಣತಿ ವಿಚಾರದಲ್ಲಿ ಮೇಲ್ವರ್ಗಗಳು ತಕರಾರು ಎತ್ತಿದ್ದರೆ, ಒಳ ಮೀಸಲಾತಿಗೆ ಪ್ರತಿಪಕ್ಷಗಳೆಲ್ಲ ಸಮ್ಮತಿ ಸೂಚಿಸಿದ್ದರೂ ಕಾಂಗ್ರೆಸ್ ನೊಳಗೆ ವಿರೋಧವಿದೆ. ಇದೇ ರೀತಿಯ ಒಳ ಮೀಸಲಾತಿ ಗದ್ದಲ ತೆಲಂಗಾಣದಲ್ಲೂ ಎದ್ದಿದೆ. ಅಲ್ಲಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮುಂದಿನ 60 ದಿನಗಳೊಳಗೆ ಸಮಸ್ಯೆ ಬಗೆಹರಿಸಿ ಒಳ ಮೀಸಲು ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಇದು ಒಳ ಮೀಸಲಿಗಾಗಿ ಪಟ್ಟು ಹಿಡಿದಿರುವ ಕಾಂಗ್ರೆಸ್ಸಿನ ಎಡಗೈ ಸಮುದಾಯದ ನಾಯಕ ರನ್ನು ಬಡಿದೆಬ್ಬಿಸಿದ್ದು, ತೆಲಂಗಾಣದಂತೆ ಇಲ್ಲೂ60 ದಿನದಲ್ಲಿ ಒಳ ಮೀಸಲು ಜಾರಿಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
undefined
ಇದು ರಾಜ್ಯ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇಷ್ಟಕ್ಕೂ ತನ್ನ ಪ್ರಣಾಳಿಕೆಯಲ್ಲೇ ಒಳ ಮೀಸಲು ಜಾರಿಗೊಳಿಸುವ ಆಶ್ವಾಸನೆ ನೀಡಿದ್ದ ಕಾಂಗ್ರೆಸ್ ಅದರ ಜಾರಿಯಲ್ಲಿ ವಿಳಂಬದ್ರೋಹ ಮಾಡುತ್ತಿ ರುವುದುಏಕೆ? ಒಳಮೀಸಲು ಜಾರಿಯಾಗದಂತೆ ತಡೆಯುತ್ತಿರುವ ಶಕ್ತಿ ಯಾವುದು? ಈ ಮೀಸಲು ಬಗ್ಗೆ ಬಲಗೈ ಸಮುದಾಯದ ಆತಂಕಗಳಲ್ಲಿ ಎಷ್ಟು ಹುರುಳಿದೆ? ಒಳ ಮೀಸಲು ನೀಡಲು ಬೇಕಾದ ದತ್ತಾಂಶ ವೈಜ್ಞಾನಿಕವಾಗಿ ಲಭ್ಯವಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು 'ಕನ್ನಡಪ್ರಭ'ದೊಂದಿಗೆ ಮುಖಾಮುಖಿಯಾಗಿದ್ದಾರೆ ಈ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮುಖಂಡ ಹಾಗೂ ಮಾಜಿ ಸಚಿವ ಎಚ್. ಆಂಜನೇಯ.
ಕೇಸ್ ವಾಪಸ್ ಪಡೆಯಲು ಸಿದ್ದರಾಮಯ್ಯ ಹಣ ನೀಡಿದ್ದಾರೆ: ಸಿ.ಟಿ.ರವಿ ಆರೋಪ
• ಒಳ ಮೀಸಲು ಜಾರಿ ಕಾಂಗ್ರೆಸ್ ಪಕ್ಷದ ಬದ್ಧತೆ ಎನ್ನುತ್ತೀರಿ. ಆದರೂ ಅದು ಜಾರಿಯಾಗುತ್ತಿಲ್ಲ. ಏಕೆ?
ನಮ್ಮ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇದ್ದಂತಹವರು. ಪರಿಶಿಷ್ಟ ಜಾತಿಗಳಿಗೆ ಇವರು ಮಾಡಿದಷ್ಟು ಉಪಕಾರವನ್ನು ಬೇರಾವ ಮುಖ್ಯಮಂತ್ರಿ ಕರ್ನಾಟಕದ ಇತಿಹಾಸದಲ್ಲಿ ಮಾಡಿಲ್ಲ. ಹಾಗಿದ್ದರೂ ಕೆಲ ಶಕ್ತಿಗಳು ಒಳಮೀಸಲು ಜಾರಿಯಾಗದಂತೆ ತಡೆಯುತ್ತಿವೆ. ಇದು ಯಾರು ಎಂಬುದು ಗೊತ್ತಿಲ್ಲ, ಏಕೆಂದರೆ, ಬಲಗೈ ನಾಯಕರು ಕೂಡ ಈ ಬಗ್ಗೆ ಮೌನವಾಗಿದ್ದಾರೆ. ಮೌನ ಅಂದರೆ ಸಮ್ಮತಿ ಲಕ್ಷಣ. ಹೀಗಾಗಿ ಎಲ್ಲರ ಒಪ್ಪಿಗೆ ಇದೆ ಎಂದೇ ಭಾವಿಸಬೇಕಿದೆ.
• ಎಲ್ಲರ ಒಪ್ಪಿಗೆ ಇದ್ದರೆ ಇಷ್ಟರೊಳಗೆ ಜಾರಿಯಾಗಬೇಕಿತ್ತಲ್ಲ. ಪ್ರಭಾವಿ ಬಲಗೈ ಮುಖಂಡರು ತಡೆಯೊಡ್ಡಿದ್ದಾರಂತೆ?
ನೋಡಿ, ಹಿಂದೆ ಹಾವನೂರು ವರದಿ ಜಾರಿಗೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಹೊಂದಿದ್ದವರು. ಯಾವವಿರೋಧವನ್ನೂ ಲೆಕ್ಕಿಸದೆ ಜಾರಿಗೆ ತಂದರು. ಅದೇ ರೀತಿ ಈಗ ಯಾರದ್ದೇ ವಿರೋಧವಿದ್ದರೂ ಅದನ್ನು ಪರಿಗಣಿಸದೇ ಒಳಮೀಸಲಾತಿ ಜಾರಿಗೆ ತರಬೇಕು. ಒಳಮೀಸಲಾತಿಗೆ ಜಾರಿಗೆ ಯಾರು ಅಡಿ ಪಡಿಸುತ್ತಿದ್ದಾರೆಂಬುದು ನಮಗೆ ಕಾಣುತ್ತಿಲ್ಲ. ಆದರೆ ಅಡ್ಡಿಯಾಗುತ್ತಿರುವುದು ಮಾತ್ರ ನಿಜ.
• ಚುನಾವಣಾ ಪ್ರಣಾಳಿಕೆಯ ಆಶ್ವಾಸನೆಯಾಗಿದ್ದರೂ ಏಕೆ ಜಾರಿಯಾಗುತ್ತಿಲ್ಲ?
ಹೌದು, ಒಳ ಮೀಸಲಾತಿ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿದೆ. ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಜಾರಿಯಾಗಿಲ್ಲ. ಪಕ್ಷ ಹೇಳಿದ ಮೇಲೆ ಜಾರಿ ಮಾಡಬೇಕು. ಜಾರಿಗೆ ವಿರೋಧವಿದೆ, ಕಷ್ಟ ಆಗುತ್ತದೆ ಎಂದರೆ ಪ್ರಣಾಳಿಕೆಯಲ್ಲಿ ಸೇರಿಸುವಾಗಲೇ ಯೋಚನೆ ಮಾಡಬೇಕಿತ್ತು. ಜಾರಿ ಮಾಡದಿದ್ದರೆ ಕೇವಲ ವೋಟ್‌ಗೋಸ್ಕರ ಭರವಸೆ ನೀಡಿ ದರು ಎಂಬ ಕಳಂಕ ಬರುವುದಿಲ್ಲವೇ? ಭರವಸೆ ನೀಡಿದ ನಂತರ ಪಕ್ಷ ತಾನು ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು.
• ಅಧಿಕಾರಕ್ಕೆ ಬಂದು ವರ್ಷವಾದರೂ ಜಾರಿಗೆ ಅಡ್ಡಿಯೇನು?
ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನ ಯಾವ ರಾಜ್ಯ ಸರ್ಕಾರಕ್ಕೂ ಒಳಮೀಸಲಾತಿ ಜಾರಿಗೆ ತರುವ ಅಧಿಕಾರ ಇರಲಿಲ್ಲ. ಹಿಂದೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿ ಜಾರಿಗೆ ತರಬೇಕು, ಒಳಮೀಸಲಾತಿ ತರಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕುಂಟು ನೆಪ ಹೇಳುತ್ತಿದ್ದರು. ಸುಪ್ರೀಂಕೋರ್ಟ್ ತೀರ್ಪು ಇದೀಗ ಆ ಅಡ್ಡಿಗಳನ್ನು ತೆಗೆದುಹಾಕಿದೆ. ಹೀಗಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ನೀಡಬೇಕು ಅಷ್ಟೇ.
• ಆದರೆ ಸದಾಶಿವ ಆಯೋಗದ ವರದಿಯ ಶಿಫಾರಸಿಗೆ ಪ್ರಮುಖವಾಗಿ ಲಂಬಾಣಿ, ಭೋವಿ, ಛಲವಾದಿ ಸಮುದಾಯಗಳ ವಿರೋಧವಿದೆ?
ನೋಡಿ, 2011ರ ಜನಗಣತಿಯಲ್ಲಿಲಂಬಾಣಿ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಎಡಗೈ ಸಮುದಾಯದಲ್ಲಿ ಗೊಂದಲ ಇದೆ. ತುಮಕೂರಿನಲ್ಲಿ ಆದಿ ಕರ್ನಾಟಕ ಎಂದರೆ ಮಾದಿಗರು, ಆದಿ ದ್ರಾವಿಡರು ಎಂದರೆ ಛಲವಾದಿಗಳು, ಚಿತ್ರದುರ್ಗದಲ್ಲಿ ಆದಿ ಕರ್ನಾಟಕ ಎಂದರೆ ಮಾದಿಗರು. ಇದು ಸ್ಪಷ್ಟ ಇದೆ. ಆದರೆ, ಗೊಂದಲವಿರುವುದು ಮೈಸೂರು ಪ್ರದೇಶದಲ್ಲಿ ಮಾತ್ರ. ಈ ಭಾಗದಲ್ಲಿ ಎಡಗೈ ಹಾಗೂ ಬಲಗೈ ಎರಡೂ ಸಮುದಾಯಗಳು ಆದಿ ದ್ರಾವಿಡ ಹಾಗೂ ಆದಿ ಕರ್ನಾಟಕ ಎಂದೇ ಗುರುತಿಸಿಕೊಳ್ಳುತ್ತವೆ. ಈ ಗೊಂದಲವನ್ನು ಸರಳವಾಗಿ ಬಗೆಹರಿಸಿಕೊಳ್ಳಬಹುದು. ಜಾತಿ ಗಣತಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ತಜ್ಞರು ಹಾಗೂ ನಮ್ಮಂತವರನ್ನು ಕರೆದು ನಿವಾರಣೆಯಾಗುತ್ತದೆ. ಇದನ್ನೇ ನೆಪ ಇಟ್ಟುಕೊಂಡು ವಿರೋಧ ಮಾಡುವುದು ಸರಿಯಲ್ಲ.
• ಕೇಳಿದರೆ ಈ ಗೊಂದಲ ಅಷ್ಟು ಸರಳವಿದೆಯೇ?
ಬೊಮ್ಮಾಯಿ ಸರ್ಕಾರ ನೀಡಿದ ಒಳ ಮೀಸಲು ಸೂತ್ರದಿಂದ ಗೊಂದಲ ಇನ್ನೂ ಹೆಚ್ಚಾಗಿದೆಯಲ್ಲ? ಹಾಗೇನೂ ಇಲ್ಲ ಒಂದು ಗಂಟೆಯಲ್ಲೇ ಇದನ್ನು ತೀರ್ಮಾನ ಮಾಡಬಹುದು. ಸುಮ್ಮನೆ ನೆಪ ಹೇಳ್ತಾರೆ ಅಷ್ಟೇ. ಮತ್ತೊಂದು ವಿಷಯ ಏನೆಂದರೆ ಪ್ರಬಲ ಜಾತಿಗಳ ಮುಖಂಡರು ಬಿಜೆಪಿಯಲ್ಲೇ ಇದ್ದಾರೆ. ಅರವಿಂದ ಲಿಂಬಾವಳಿ, ಪಿ. ರಾಜೀವ್ ಸೇರಿದಂತೆ ಅನೇಕರು ಸಭೆ ಮಾಡಿ ಬಸವರಾಜ ಬೊಮ್ಮಾಯಿ ಸರ್ಕಾರ ಜಾರಿಗೆ ತಂದ ಒಳಮೀಸಲಾತಿಗೆ ಬದ್ಧರಾಗಿರಬೇಕು, ಯಾರೂ ಕೂಡಾ ಅಪಸ್ವರ ಎತ್ತಬಾರದು ಎಂದು ಒಪ್ಪಿಕೊಂಡಿದ್ದಾರೆ.
• ಹಾಗಾದರೆ ಬೊಮ್ಮಾಯಿ ಸರ್ಕಾರ ತಂದ ಒಳಮೀಸಲಾತಿ ಪ್ರಮಾಣಕ್ಕೆ ಒಪ್ಪಿಕೊಳ್ಳುತ್ತಿರಾ?
ಹೌದು, ಒಪ್ಪಿಕೊಳ್ಳುತ್ತೇವೆ. ಅವರು ನಮಗೆ 6 ಪರ್ಸೆಂಟ್ ಕೊಟ್ಟಿದ್ದಾರೆ. ಅಷ್ಟೇ ನಾವು ಕೇಳುವುದು. ಬೇರೆಯವರಿಗೆ ಬೇಕಾದರೆ ಇನ್ನು 10 ಪರ್ಸೆಂಟ್ ಕೊಡಲಿ, ಯಾರು ಬೇಡ ಎಂದು ಹೇಳುತ್ತಾರೆ.
• ಸದಾಶಿವ ಆಯೋಗದ ವರದಿ ಹಾಗೂ ಜಾತಿ ಗಣತಿ ಬಗೆ ಆಕ್ಷೇಪವಿದೆ. ಹೀಗಿರುವಾಗ ಒಳ ಮೀಸಲು ನೀಡುವಾಗ ಯಾವ ದತ್ತಾಂಶ ಬಳಸಬೇಕು?
ಆಂಧ್ರದಲ್ಲಿ ಇಂತಹ ಸ್ಥಿತಿ ಇತ್ತು. ಆದರೆ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ನಮ್ಮದೇ ಪಕ್ಷದ ತೆಲಂಗಾಣ ಮುಖ್ಯ ಮಂತ್ರಿ ರೇವಂತ್ ರೆಡ್ಡಿ ಅವರು 60 ದಿನಗಳಲ್ಲೇ ಜಾರಿ ತರುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಒಳ ಮೀಸಲಾತಿ ಜಾರಿ ಬರುವ ತನಕ ಯಾವುದೇ ಉದ್ಯೋಗ ಭರ್ತಿ ಮಾಡಲ್ಲ ಎಂಬ ನಿಲುವಿಗೆ ಬಂದಿದ್ದಾರೆ. ಅದೇ ನಿಲುವನ್ನು ಕರ್ನಾಟಕ ಸರ್ಕಾರ ಅನುಸರಿಸಬೇಕು ಎಂಬುದು ನಮ್ಮ ಒತ್ತಾಯ. ಇನ್ನು ದತ್ತಾಂಶದ ವಿಷಯಕ್ಕೆ ಬಂದರೆ 2011ರ ಜನಗಣತಿ ಇದೆ. ಅದೇ ರೀತಿ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ಇದೆ. ಈ ವರದಿ ಒಪ್ಪಿಕೊಳ್ಳಲು ಸರ್ಕಾರ ಒಂದೂವರೆ ವರ್ಷ ತಡ ಮಾಡಿದೆ. ವರದಿಯಲ್ಲಿ ಯಾವ ಜಾತಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದೇ ರೀತಿ ನಮ್ಮ ಸರ್ಕಾರವೇ ರಚಿಸಿದ್ದನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು.
• ಅಂದರೆ, ಸರ್ಕಾರ ಯಾವುದೇ ವರದಿ ಒಪ್ಪಿಕೊಂಡಾದರೂ ಸರಿ, ಒಳಮೀಸಲಾತಿ ಕೊಡಬೇಕು ಎಂಬುದಷ್ಟೇ ನಿಮ್ಮ ಬೇಡಿಕೆಯೇ?
ಹೌದು. ಎಲ್ಲದತ್ತಾಂಶ ಇದ್ದೇ ಇದೆ, ಹಿಂದಿನ ಬಿಜೆಪಿ ಸರ್ಕಾರ, ಸದಾಶಿವ ಆಯೋಗದ ವರದಿ ಹಾಗೂ ನ್ಯಾಯಮೂರ್ತಿ ನಾಗಮೋಹನದಾಸ್‌ವರದಿಯಲ್ಲೂ ಮಾದಿಗಸಮುದಾಯಕ್ಕೆ ಶೇ. 6ರಷ್ಟು ಮೀಸಲಾತಿ ಕೊಡಬೇಕೆಂದೇ ಹೇಳಿದೆ. ಅದನ್ನೇ ನಾವು ಕೇಳುತ್ತಿದ್ದೇವೆ. ಆಮೇಲೆ ಬೇಕಾದರೆ ಜನಸಂಖ್ಯೆ ಲೆಕ್ಕ ಹಾಕಿಕೊಳ್ಳಲಿ.
• ಒಳಮೀಸಲಾತಿ ವಿಳಂಬವಾಗುತ್ತಿರುವುದರಿಂದ ಕೇಂದ್ರದ ನಾಯಕರು ಅಥವಾ ನೆರೆಹೊರೆಯ ರಾಜ್ಯಗಳ ನಾಯಕರ ಮೂಲಕ ಜಾರಿ ಮಾಡುವಂತೆ ಒತ್ತಡ ಹಾಕುತ್ತಿದ್ದೀರಾ?
ಈಗ ನಾವು ಅದನ್ನೇ ಮಾಡಲು ಹೊರಟಿದ್ದೇವೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ಸೋನಿಯಾಗಾಂಧಿ, ಸುರ್ಜೆವಾಲಾ ಅವರನ್ನು ಭೇಟಿ ಮಾಡುತ್ತೇವೆ. ಅದೇ ರೀತಿ ಕ್ಯಾಬಿನೆಟ್‌ಗೆ ತರುವ ಸಂಬಂಧ ಡಾ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ ಅವರಿಗೂ ಹೇಳುತ್ತೇವೆ. ಸೌಹಾರ್ದಯುತವಾಗಿ ಜಾರಿಗೆ ತರೋಣ, ಸಂಘರ್ಷ ಯಾಕೆ ಎಂದು ಹೇಳುತ್ತೇವೆ. ಬಹುಶಃ ಮುಖ್ಯ ಮಂತ್ರಿಗಳೇಎಲ್ಲ ಮುಖಂಡರ ಜೊತೆ ಮುಖಾಮುಖಿ ಸಭೆ ನಡೆಸುವ ಸಾಧ್ಯತೆ ಇದೆ.
• ಒಳಮೀಸಲಾತಿಗೆ ಲಂಬಾಣಿ, ಭೋವಿ ಮುಂತಾದ ಸಮುದಾಯಗಳ ನಿಜವಾದ ಆತಂಕ ಏನು ಇತ್ತು.
ಸದಾಶಿವ ಆಯೋಗದ ವರದಿಯಲ್ಲಿ ನಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದುಹಾಕುತ್ತಾರೆಂಬ ಆತಂಕ ಇತ್ತು. ಆದರೆ ಮುಖ್ಯಮಂತ್ರಿಗಳು ಬಲಗೈ, ಎಡಗೈ, ಲಂಬಾಣಿ, ಭೋವಿ ಸೇರಿದಂತೆ ಎಲ್ಲ ಮುಖಂಡರ ಸಭೆ ಕರೆದು ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಸಮುದಾಯಕ್ಕೆ ಮೀಸಲಾತಿ ಕೊಡಬೇಕು. ಅವರಿಗೆ ಕೊಡಬೇಡ ಅನ್ನಲು ನೀವು ಯಾರು ಎಂದು ಕೇಳಿದರು. ಕೊನೆಗೆ ಎಲ್ಲರೂ ಒಪ್ಪಿಕೊಂಡರು
• ಹೀಗಿದ್ದಾಗ್ಯೂ ಒಳಮೀಸಲಾತಿಗೆ ಯಾರು ಅಡ್ಡಿ ಮಾಡುತ್ತಾರೆಂಬುದು ಗೊತ್ತಾಗುತ್ತಿಲ್ಲವೇ?
ಇಲ್ಲ, ಯಾರು ಅಡ್ಡಿ ಮಾಡುತ್ತಿದ್ದಾರೆಂಬುದು ಗೊತ್ತಾಗುತ್ತಿಲ್ಲ. ವಿರೋಧ ವ್ಯಕ್ತಪಡಿಸುವವರ ಮನವೊಲಿಸುತ್ತೇವೆ. ಯಾಕೆ ವಿರೋಧ ಎಂದು ಕೇಳುತ್ತೇವೆ, ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ ಮೇಲೆ ನಂಬಿಕೆ ಇಲ್ಲವೇ ಎಂದು ಕೇಳುತ್ತೇವೆ.
• ಒಂದು ವೇಳೆ ಯಾವ್ಯಾವುದೋ ಕಾರಣದಿಂದ ಮುಂದಕ್ಕೆ ಹಾಕುತ್ತಾ ಹೋದರೆ ಏನು ಮಾಡುತ್ತಿರಾ?
ಕೇಂದ್ರ ಸರ್ಕಾರದ ಉದ್ದೇಶಿತ ಗಣತಿ ವರದಿ ಬರುವರೆಗೂ ಕಾಯುತ್ತೀರಾ? ಕೇಂದ್ರದ ಗಣತಿವರದಿ ಬರಲು ಮೂರುವರ್ಷ ಬೇಕಾಗುತ್ತದೆ. ಅಲ್ಲಿವರೆಗೆ ಕಾಯಲ್ಲ, ಸರ್ಕಾರ ಯಾವುದೇ ವರದಿಯನ್ನು ಬೇಕಾದರೂ ಒಪ್ಪಿಕೊಳ್ಳಲಿ, ನಮಗೆ ಶೇ. 6ರಷ್ಟು ಒಳಮೀಸಲಾತಿ ಕೊಟ್ಟರೆ ಸಾಕು.
• ಬಿ.ಕೆ. ಹರಿಪ್ರಸಾದ್ ಅವರು ಸರ್ಕಾರ ಬಿದ್ದರೂ ಪರವಾಗಿಲ್ಲ, ಜಾತಿ ಗಣತಿ ಜಾರಿಯಾಗಬೇಕು ಅಂತಾರೆ. ಒಳ ಮೀಸಲು ವಿಚಾರದಲ್ಲಿ ಈ ಮಾತು ಅನ್ವಯಿಸಬಹುದೇ? ಹರಿಪ್ರಸಾದ್ ಅವರು ಸಾಮಾಜಿಕ ನ್ಯಾಯ ದೃಷ್ಟಿಯಿಂದ ಆ ಮಾತು ಹೇಳಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದರೆ ಅಂತಹ ಅಧಿಕಾರ ಬೇಡ ಎಂಬರ್ಥದಲ್ಲಿ ಹೇಳಿದ್ದಾರೆ. ಹಾಗಾಗಿ ಹರಿಪ್ರಸಾದ್ ಅವರ ಮಾತು ಒಳಮೀಸಲಾತಿಗೂ ಅನ್ವಯವಾಗಬೇಕು.
ನಟ ಚೇತನ್ ವಿರುದ್ಧ ಜಾಮೀನು ರಹಿತ ವಾರೆಂಟ್: ಹೈಕೋರ್ಟ್ ಹೇಳಿದ್ದೇನು?
• ಒಳಮೀಸಲಾತಿ ಜಾರಿ ವಿಳಂಬವಾದರೆ ನಿಮ್ಮ ಮುಂದಿನ ಹಾದಿ ಏನು?
ತಕ್ಷಣ ಎಲ್ಲ ನೇಮಕಾತಿಗಳನ್ನು ನಿಲ್ಲಿಸಬೇಕು. ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಎಲ್ಲ ಹಣ, ಸೌಲಭ್ಯ, ಕಾರ್ಯಕ್ರಮದಲ್ಲೂ ನಮಗೆ ಶೇ. 6 ಮೀಸಲಿಡಬೇಕು. ನೆರೆಯ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅನುಸರಿಸುವ ಮಾನದಂಡವನ್ನು ಅನುಸರಿಸಬೇಕು. ಇಲ್ಲದಿದ್ದರೆ, ಬೀದಿಗೆ ಇಳಿದು ಹೋರಾಟ ಮಾಡುವುದು ಅನಿವಾರ್ಯ.