ಯಾವುದೇ ವಿಚಾರಣೆಗೂ ಹೆದರುವುದಿಲ್ಲ: ಕಾಂಗ್ರೆಸ್‌ ವಿರುದ್ಧ ಸುಧಾಕರ್‌ ವಾಗ್ದಾಳಿ

By Kannadaprabha News  |  First Published Aug 30, 2023, 10:23 PM IST

ಹಿಂದಿನ ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಮಾಡಿದರೂ ನಾವು ಹೆದರುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಆದರೆ ಈಗಿನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಆರಂಭಿಸಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು. 
 


ಚಿಕ್ಕಬಳ್ಳಾಪುರ (ಆ.30): ಹಿಂದಿನ ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಮಾಡಿದರೂ ನಾವು ಹೆದರುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಆದರೆ ಈಗಿನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಆರಂಭಿಸಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಿಬಿ ರಸ್ತೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ, ಗ್ರಾಮ ಪಂಚಾಯಿತಿಗಳ ಎರಡನೆ ಅವಧಿಯ ಬಿಜೆಪಿ ಬೆಂಬಲಿತ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನಮ್ಮ ವಿರುದ್ಧ ಮೂರಲ್ಲ, ಆರು ವಿಚಾರಣಾ ಸಮಿತಿಗಳನ್ನು ಮಾಡಿದರೂ ಹೆದರಿಕೆ ಇಲ್ಲ ಎಂದರು.

ಕೋವಿಡ್‌ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಮುಂಜಾನೆ ಐದೂವರೆಗೆ ಕರೆ ಮಾಡಿ ಸಭೆಗೆ ಕರೆಯುತ್ತಿದ್ದರು. ಆಗ ಕಾಂಗ್ರೆಸ್‌ ನಾಯಕರು ಹೆಲ್ಮೆಟ್‌, ಮಾಸ್‌್ಕ ಧರಿಸಿಕೊಂಡು, ಮನೆಗೆ ಪ್ರವೇಶವಿಲ್ಲ ಎಂಬ ಬೋರ್ಡು ಹಾಕಿಕೊಂಡು ಕುಳಿತಿದ್ದರು. ಆದರೆ ನಾವೆಲ್ಲರೂ ಆಸ್ಪತ್ರೆಗೆ ತೆರಳಿ, ರೋಗಿಗಳ ಬಳಿ ತೆರಳಿ ಪರಿಶೀಲನೆ ನಡೆಸಿ ರಾಜ್ಯದ ಜನರ ರಕ್ಷಣೆ ಮಾಡಿದ್ದೇವೆ ಎಂದರು.

Tap to resize

Latest Videos

undefined

ವಿದ್ಯಾರ್ಥಿಗಳು ಹೇಗೆ ಓದಬೇಕು ಅಂದ್ರೆ ರಿಸಲ್ಟ್ ದಿನ ಇಡೀ ಕರ್ನಾಟಕವೇ ನಿಮ್ಮ ಬಗ್ಗೆ ಓದಬೇಕು: ಪ್ರದೀಪ್‌ ಈಶ್ವರ್‌

ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ: ಕಾಂಗ್ರೆಸ್‌ ನಾಯಕರು ವಿಚಾರಣಾ ಸಮಿತಿ ರಚಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ಸತ್ಯ ಹರಿಶ್ಚಂದ್ರರೇ ಆಗಿದ್ದರೆ, 2013 ರಿಂದ ಈವರೆಗೆ ತನಿಖೆ ಮಾಡಲಿ. ಎದೆಗಾರಿಕೆ ಇದ್ದರೆ 2013 ರಿಂದ 2023ರರವರೆಗೆ ಸೇರಿಸಿ ತನಿಖೆ ಮಾಡಿಸಲಿ ನೋಡೋಣ. ಕಳ್ಳರೇ ಸಾಚಾಗಳಂತೆ ಓಡಾಡುತ್ತಿರುವಾಗ, ಸಾಚಾಗಳಾದ ನಾವ್ಯಾಕೆ ಹೆದರಬೇಕು ಎಂದು ಪ್ರಶ್ನಿಸಿದರು.

ಕೊನೆಯವರೆಗೂ ಬಿಜೆಪಿಯಲ್ಲಿರುತ್ತೇನೆ: ಈ ಪಕ್ಷದಲ್ಲಿ ಎರಡು ಮನಸ್ಸಿನಿಂದ ಯಾರು ಇರಬೇಡಿ. ಪಕ್ಷ ಬಿಟ್ಟು ಹೋಗೋ ಹಾಗಿದ್ದರೆ ಈಗಲೇ ಬಿಟ್ಟು ಹೋಗಿ. ರಾಜಕೀಯದಲ್ಲಿ ಇರೋವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ. ಒಂದು ಸೋಲಿನಿಂದ ಯಾರು ಧೃತಿಗೇಡಬೇಡಿ. ನನಗೆ ಸೋಲಾಗುದ್ದು ಒಳ್ಳೆಯದೇ ಅನ್ನಿಸುತ್ತೆ .ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಾನು ತುಂಬಾ ಕೆಲಸ ಮಾಡ್ತಿದ್ದೆ .ಯಾವ ರಾಜಕಾರಣಿ ಶೇ.100 ಅಭಿವೃದ್ದಿ ಹಾಗೂ ಶೇ. 50ರಷ್ಟುರಾಜಕೀಯ ಮಾಡ್ತಾನೋ ಅವನ ಚುನಾವಣಾ ಫಲಿತಾಂಶ ಶೇ.50 ಅಷ್ಟೇ. ಅದಕ್ಕೆ ನಾನೂ ಸೋತೆ. ಯಾರನ್ನೂ ಕೇಳದೇ ಕ್ಷೇತ್ರದ ಅಭಿವೃದ್ದಿ ಮಾಡಿದೆ. ನಾನು ಮಾಡಿರುವ ಕಟ್ಟಡಗಳಿಗೆ ಬಣ್ಣ ಹೊಡೀತಾರೋ ಇಲ್ಲವೋ ಗೊತ್ತಿಲ್ಲ ಎಂದರು.

ನನ್ನ ಶಾಸಕ ಸ್ಥಾನ ಪಣಕ್ಕಿಟ್ಟು ಮೆಡಿಕಲ್‌ ಕಾಲೇಜು ತಂದು ಕಟ್ಟಡ ಕಾಮಗಾರಿ ಮುಗಿಯುವ ಹಂತಕ್ಕೆ ತಂದಿದ್ದರೂ ಸಹ ಈ ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಬಿಲ್‌ ನೀಡಿ ಕಟ್ಟಡ ವಶಕ್ಕೆ ಪಡೆಯುವ ಯೋಗ್ಯತೆ ಇಲ್ಲ. ಅಂತಹ ಕೆಟ್ಟಸರ್ಕಾರ ಈಗ ಇದೆ. ರೈತರಿಗೆ ಕೇಂದ್ರ ನೀಡುವ ವಾರ್ಷಿಕ 6 ಸಾವಿರ ರುಗಳಿಗೆ ಬಿ.ಎಸ್‌.ಯಡಿಯೂರಪ್ಪ ಮುಕ್ಯಮಂತ್ರಿಯಾಗಿದ್ದಾಗ 4 ಸಾವಿರ ರು.ಗಳನ್ನು ಸೇರಿಸಿದ್ದರು. ರೈತರ ಉದ್ಧಾರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೊದಲಿಗೆ ಈ 4 ಸಾವಿರ ರು.ಗಳಿಗೆ ಎಳ್ಳು ನೀರು ಬಿಟ್ಟಿದೆ ಎಂದು ದೂರಿದರು.

ಪ್ರತಿ ಹುದ್ದೆ ಮಾರಾಟ: ರಾಜ್ಯ ಸರ್ಕಾರದಲ್ಲಿ ಪ್ರತಿ ಹುದ್ದೆ ಸೇಲ್‌ ಆಗುತ್ತಿದ್ದು, ಪ್ರತಿ ಅಧಿಕಾರಿ ದುಡ್ಡು ಕೊಟ್ಟು ವರ್ಗಾವಣೆ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ನಾಯಕರು ಇಡೀ ಆಡಳಿತವನ್ನೇ ಗುಡಿಸುತ್ತಿದ್ದಾರೆ. 135 ಶಾಸಕರು ಗೆದ್ದಿದ್ದರೂ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರನ್ನು ಸೆಳೆಯುವ ಯತ್ನ ನಡೆದಿದೆ. ಇವರಿಗೆ ಇನ್ನೂ ಐದು ವರ್ಷ ಆಡಳಿತ ಇದೆ ಎಂಬ ಗ್ಯಾರಂಟಿಯೇ ಇಲ್ಲವೇ ಎಂದು ಪ್ರಶ್ನೆ ಮಾಡಿದರು.

ಟೊಮೆಟೋ ಆಯ್ತು, ಈಗ ದಾಳಿಂಬೆ ಕಾವಲಿಗೆ ಬಂದೂಕು ಹಿಡಿದ ರೈತರು

ಕಾಂಗ್ರೆಸ್‌ನಿಂದ ದಿವಾಳಿ ರಾಜ್ಯ: ಕಾಂಗ್ರೆಸ್‌ ಸರ್ಕಾರ ಈಗಲೇ 85 ಸಾವಿರ ಕೋಟಿ ರು.ಗಳ ಸಾಲ ಮಾಡಿದ್ದು, ಇನ್ನು ಐದು ವರ್ಷದಲ್ಲಿ 5 ಲಕ್ಷ ಕೋಟಿಗೆ ಏರಲಿದೆ. ಇದರಿಂದ ಕಾಂಗ್ರೆಸ್‌ನಿಂದ ದಿವಾಳಿ ರಾಜ್ಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್‌, ಪಕ್ಷದ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಖಾಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ. ನಾಗರಾಜ್‌,ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಹಾಗೂ ಕೆ.ವಿ.ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್‌ ಕಿರಣ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಮಾಜಿ ಶಾಸಕರಾದ ಅನಸೂಯಾಮ್ಮ ನಟರಾಜನ್‌, ಎಂರಾಜಣ್ಣ, ನಗರಸಭಾ ಮಾಜಿ ಅಧ್ಯಕ್ಷ ರಾದ ಆನಂದರೆಡ್ಡಿ ಬಾಬು, ಇನ್ನಿತರ ಪ್ರಮುಖರು ಇದ್ದರು.

click me!