
ಮಂಡ್ಯ (ಫೆ.02): ದೇವೇಗೌಡ ಮತ್ತು ಕುಮಾರಸ್ವಾಮಿ ಆರೋಗ್ಯ ಕೆಡಿಸಿದವರು ಚಲುವರಾಯಸ್ವಾಮಿಯೇ ಹೊರತು ಇನ್ಯಾರೂ ಅಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇರವಾಗಿ ಆರೋಪಿಸಿದರು. ಧರ್ಮಸಿಂಗ್ ಅವರು ಅಧಿಕಾರದಿಂದ ಕೆಳಗಿಳಿದ ಸಮಯದಲ್ಲಿ ಬಸ್‌ನಲ್ಲಿ ಶಾಸಕರನ್ನು ತುಂಬಿಕೊಂಡು ಹೋದಾಗಲೇ ದೇವೇಗೌಡರ ಆರೋಗ್ಯ ಕೆಟ್ಟಿತು. ೨೦೧೮ರಲ್ಲಿ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅವರ ಆರೋಗ್ಯ ಕೆಡಿಸಿದಿರಿ. ಇದಲ್ಲದೇ, ಸಿದ್ದರಾಮಯ್ಯನವರು ದಳ ಬಿಟ್ಟು ಹೊರಹೋಗಿದ್ದೂ ನಿಮ್ಮಿಂದಲೇ. ಅದಕ್ಕೆ ನಾನೇ ಸಾಕ್ಷಿ.
ನಾನು ದೇವೇಗೌಡರಿಗೆ ಚಾಡಿ ಹೇಳುತ್ತೇನೆಂದು ನನ್ನನ್ನು ಹೊಡೆಸುವುದಕ್ಕೂ ತಯಾರಿದ್ದಿರಿ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು. ನೀವು ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ನೀವು ಹಿಂದೆ ಏನಾಗಿದ್ದಿರಿ, ಯಾರಿಂದ ರಾಜಕೀಯದಲ್ಲಿ ಬೆಳವಣಿಗೆ ಸಾಧಿಸಿದಿರಿ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾಲಿಗೆಯನ್ನು ಬಿಗಿಹಿಡಿದು ಮಾತನಾಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿ ದೊಡ್ಡ ನಾಯಕನಾಗುತ್ತೇನೆಂದು ಭಾವಿಸಿದ್ದರೆ ಅದು ಕೇವಲ ಭ್ರಮೆಯಷ್ಟೇ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ನೀವು ಕೆರಗೋಡಿನ ಹನುಮಧ್ವಜ ಹಾರಾಟ ವಿವಾದವನ್ನು ಆರಂಭದಲ್ಲೇ ಬಗೆಹರಿಸಬಹುದಾಗಿತ್ತು. ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ ಏಕೆ ಬಿಟ್ಟಿರಿ. ನೀವೇ ಗ್ರಾಮಕ್ಕೆ ಹೋಗಿ ಊರಿನ ಜನರನ್ನು ಸಮಾಧಾನಪಡಿಸಬಹುದಿತ್ತು. ಆ ಕೆಲಸವನ್ನೇಕೆ ಮಾಡಲಿಲ್ಲ. ಜವಾಬ್ದಾರಿಯನ್ನು ಮರೆತು ಕುಳಿತಿದ್ದರಿಂದಲೇ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವುದಕ್ಕೆ ನೀವೂ ಕಾರಣರಾಗಿದ್ದೀರಿ ಎಂದು ಚಲುವರಾಯಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದರು.
ಜ್ಞಾನವ್ಯಾಪಿ ಪ್ರಕರಣ ಮಾದರಿಯಲ್ಲೇ ಮಂಗಳೂರಲ್ಲೂ ಮಸೀದಿ ವಿವಾದ: ಹಿಂದೂ ಮಂದಿರದ ಕುರುಹು ಪತ್ತೆ!
ಸ್ಥಳೀಯ ಶಾಸಕ ರವಿಕುಮಾರ್ ಗಣಿಗ ಅವರಿಗೂ ಜವಾಬ್ದಾರಿ ಇಲ್ಲ. ಹುಚ್ಚುಚ್ಚಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಉದ್ಘಾಟನೆಗೆ ಆಹ್ವಾನಿಸಲಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ಗಲಭೆ ಸೃಷ್ಟಿಸಿದ್ದು ಸರಿಯಲ್ಲ. ಅಂದು ಕುಮಾರಸ್ವಾಮಿ ಅವರಿಗೂ ಆಹ್ವಾನವಿತ್ತು. ಆದರೆ, ಶ್ರೀರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಅಯೋಧ್ಯೆಗೆ ತೆರಳಿದ್ದರಿಂದ ಇಲ್ಲಿಗೆ ಬರುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸಮಜಾಯಿಷಿ ನೀಡಿದರು. ಅಂದು ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಬರುತ್ತಿರಲಿಲ್ಲ. ಲಾಠಿಪ್ರಹಾರ ನಡೆಸಿ ಪೊಲೀಸರು ಅಮಾಯಕ ಜನರ ಮೇಲೆ ದೌರ್ಜನ್ಯ ನಡೆಸಿರುವ ವಿಷಯ ತಿಳಿದು ಒಂದು ಗಂಟೆಯಲ್ಲಿ ಮಂಡ್ಯಕ್ಕೆ ಬಂದರು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.