
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಸಕ್ತಿದಾಯಕ ಬೆಳವಣಿಗೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆಯೇ ಎಂಬ ಅನುಮಾನ ಮೂಡಿದೆ. ಅರಮನೆ ರಸ್ತೆಯ ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆದ ಈ ಮಹತ್ವದ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರಾಗುವ ಮೂಲಕ ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ.
ಸಭೆಗೆ ಸಿದ್ದರಾಮಯ್ಯ ಅವರು ದೂರ ಉಳಿದಿದ್ದರೆ, ಅವರ ಪುತ್ರ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸಭೆಗೆ ತಡವಾಗಿ ಆಗಮಿಸಿದರು. ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ಆಪ್ತರಿಗೆ ಡಿಕೆಶಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೂ ಗೈರಾಗಿದ್ದ ಸಿದ್ದು, ಈಗ ಸಿಎಲ್‌ಪಿ ಸಭೆಗೂ ಬಾರದಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೇವಲ ಸಿದ್ದರಾಮಯ್ಯ ಮಾತ್ರವಲ್ಲದೆ ಹಲವು ಹಿರಿಯ ನಾಯಕರು ಸಭೆಯಿಂದ ದೂರ ಉಳಿದಿದ್ದಾರೆ. ಎಚ್.ಸಿ.ಮಹದೇವಪ್ಪ, ಎಂ. ಕೃಷ್ಣಪ್ಪ, ಪ್ರಿಯಾ ಕೃಷ್ಣ, ಶಿವಾನಂದ ಪಾಟೀಲ್ ಗೈರಾಗಿದ್ದಾರೆ. ಬಂಗಾರಪೇಟೆ ನಾರಾಯಣಸ್ವಾಮಿ ಮತ್ತು ಸಚಿವ ಎಂ.ಸಿ. ಸುಧಾಕರ್ ಕೂಡ ಸಭೆಗೆ ಹಾಜರಾಗಿಲ್ಲ. ಸಚಿವ ಜಮೀರ್ ಅಹಮದ್ ಸಭೆಗೆ ತಡವಾಗಿ ಎಂಟ್ರಿ ನೀಡಿದ್ದಾರೆ.
ಸಭೆಯಲ್ಲಿ ನೂತನ ಎಂಎಲ್‌ಸಿಗಳನ್ನು ಅಭಿನಂದಿಸುವ ವೇಳೆ ಹೈಡ್ರಾಮಾ ನಡೆದಿದೆ. ಎಂಎಲ್‌ಸಿ ಮಳವಳ್ಳಿ ಶಿವಣ್ಣ ಅವರು ಕನಕಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಗರಂ ಆಗಿದ್ದಾರೆ. ಏನಯ್ಯ, ನೀನು ಕನಕಪುರದ ಬಗ್ಗೆಯೇ ಪ್ರಶ್ನೆ ಹಾಕಿದ್ದೀಯಲ್ಲಾ? ಎಂದು ಏರುಧ್ವನಿಯಲ್ಲಿ ಕಿಡಿಕಾರಿದ್ದಾರೆ. ಶಿವಣ್ಣ ಸಬೂಬು ನೀಡಲು ಮುಂದಾದರೂ ಡಿಕೆಶಿ ಸುಮ್ಮನಾಗಲಿಲ್ಲ. ಇಂದು ಬೆಳಿಗ್ಗೆಯಷ್ಟೇ ಮೈಸೂರಿನವರು ಕನಕಪುರದವರ ಮೇಲೆ, ಕನಕಪುರದವರು ಬೆಂಗಳೂರಿನವರ ಮೇಲೆ ಸ್ಪರ್ಧೆ ಮಾಡಬಾರದು, ನಮ್ಮ ಸ್ಪರ್ಧೆ ಜಾಗತಿಕ ಮಟ್ಟದಲ್ಲಿರಲಿ ಎಂದು ಮಾರ್ಮಿಕವಾಗಿ ಮಾತನಾಡಿದ್ದ ಡಿಕೆಶಿ, ಸಭೆಯಲ್ಲಿ ತಮ್ಮದೇ ಕ್ಷೇತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ನಾಯಕತ್ವದಲ್ಲಿ ನಡೆದ ಮೊದಲ ಸಭೆಯಲ್ಲೇ ಸಿದ್ದರಾಮಯ್ಯ ಮತ್ತು ಅವರ ಆಪ್ತರ ಗೈರುಹಾಜರಿ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.