ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಎಚ್‌ಎಂಟಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಚನ್ನಪಟ್ಟಣ (ಅ.31): ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಎಚ್‌ಎಂಟಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಖಂಡ್ರೆ ಅವರಿಗೆ ಮಾಹಿತಿ ಮತ್ತು ಜ್ಞಾನದ ಕೊರತೆ ಇದೆ. ಅವರು ಭೇಟಿ ನೀಡಿರುವ ಜಾಗವನ್ನು 2002ರಲ್ಲಿಯೇ ಕೆನರಾ ಬ್ಯಾಂಕಿಗೆ ನೀಡ ಲಾಗಿದೆ. ಸಚಿವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ನಾಳೆ ಅಥವಾ ನಾಡಿದ್ದು ಎಲ್ಲಾ ದಾಖಲೆಗಳ ಸಮೇತ ನಾನು ನಿಮ್ಮ (ಮಾಧ್ಯಮಗಳು) ಮುಂದಿಟ್ಟು ಮಾತನಾಡುತ್ತೇನೆ ಎಂದರು.
ಚಿಕ್ಕಮಗಳೂರು, ಕೊಡಗು, ಬೆಂಗಳೂರು ಸೇರಿದಂತೆ ಅನೇಕ ಕಡೆ ಅರಣ್ಯ ಭೂಮಿ ಒತ್ತುವರಿ ಆಗಿದೆ. ಅದನ್ನೆಲ್ಲ ತೆರವು ಮಾಡದ ಸಚಿವರು ಎಚ್‌ಎಂಟಿ ಮೇಲೆ ಮಾತ್ರ ವಿಶೇಷ ಕಾಳಜಿ ತೋರಿಸುತ್ತಿದ್ದಾರೆಂದು ತಿರುಗೇಟು ನೀಡಿದರು. ಕೋಲಾರದ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಒಬ್ಬರು ಒತ್ತುವರಿ ಮಾಡಿರುವ ಅರಣ್ಯ ಭೂಮಿ ತೆರವು ಮಾಡಿಸುವ ಧೈರ್ಯ ತೋರಿಸಲಿ. ಶ್ರೀನಿವಾಸಪುರದಲ್ಲಿ 120 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. 61 ಎಕರೆಸರ್ವೇ ಮಾಡಿಮುಟ್ಟುಗೋಲು ಹಾಕಿಕೊಳ್ಳಿ ಎಂದು ಕೋರ್ಟ್ ಆದೇಶಿಸಿದೆ. ಆ ಒತ್ತುವರಿ ಭೂಮಿ ವಿಷಯದಲ್ಲಿ ಸಚಿ ವರು ಅಧಿಕಾರಿಗಳಿಗೆ ಏನು ಸೂಚನೆ ಕೊಟ್ಟಿದ್ದಾರೆ ಅಂತ ಗೊತ್ತು. ಬಡವರಿಗೆ ಒಂದು ನ್ಯಾಯ, ಕಾಂಗ್ರೆಸ್‌ನವರಿಗೆ ಒಂದು ನ್ಯಾಯವಾ? ಎಂದು ಖಾರವಾಗಿ ಪ್ರಶ್ನಿಸಿದರು.
ಎಚ್‌ಡಿಕೆ ಗರಂ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಗ್ಯದ ಕುರಿತು ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದು, ಅವರ ಸಣ್ಣತನಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ತಿರುಗೇಟು ನೀಡಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಶಾಸಕ ಎಂ.ಸಿ.ಅಶ್ವತ್ಥ ನೀಡಿದ ಹೇಳಿಕೆಯನ್ನೇ ಮಾಜಿ ಸಂಸದ ಡಿ.ಕೆ.ಸುರೇಶ್ ನೀಡಿದ್ದಾರೆ. ದೇವೇಗೌಡರ ಆರೋಗ್ಯದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಅಶ್ವತ್ಥ್ ಪರ ದೇವೇಗೌಡರು ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ನಡೆಸಿರಲಿಲ್ಲವೇ? ಆಗ ವ್ಯಾಮೋಹಕ್ಕೆ ಬಿದ್ದು ದೇವೇಗೌಡರು ಪ್ರಚಾರಕ್ಕೆ ಹೋಗಿದ್ದರಾ ಎಂದು ಕಿಡಿಕಾರಿದರು.
ನನ್ನನ್ನು ಸಂಪುಟದಿಂದ ಕಿತ್ತೊಗೆಯಲು ಸಾಧ್ಯವಿಲ್ಲ: ಸಚಿವ ಜಮೀರ್ ಅಹ್ಮದ್ ಖಾನ್
ದೇವೇಗೌಡರು ಬರುತ್ತಿರುವುದು ಮೊಮ್ಮಗನ ಪಟ್ಟಾಭಿಷೇಕಕ್ಕೆ ಎನ್ನುತ್ತಿದ್ದಾರೆ. ಅಶ್ವತ್ಥ್ ಗೆಲ್ಲಿಸಲು ಅಂದು ದೇವೇಗೌಡರು ಹೋಗಿರಲಿಲ್ಲವೇ? ಅಂದು ಯಾರಿಗೋಸ್ಕರ ದೇವೇಗೌಡರು ಹೋಗಿದ್ದರು? ಈ ರೀತಿಯ ಸಣ್ಣತನದ ಮಾತಿಗೆ ಕಾಲವೇ ಉತ್ತರ ಕೊಡುತ್ತದೆ ಎಂದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರ್ಯಾರು ಏನೇನು ಹೇಳಿಕೆ ಕೊಡುತ್ತಿದ್ದಾರೆ ಎಂಬುದು ಗೊತ್ತಿದೆ. ಎಲ್ಲದಕ್ಕೂ ಕಾಲ ಉತ್ತರ ಕೊಡಲಿದೆ. ಈ ಹಿಂದೆ ನಮ್ಮ ಜತೆ ಇದ್ದವರ ಹೇಳಿಕೆಗಳು ನನ್ನ ಕೆರಳಿಸುತ್ತಿದೆ. ಚನ್ನಪಟ್ಟಣ ನನ್ನ ಅಭಿವೃದ್ಧಿ ಕೆಲಸ ಮಾಡಿಲ್ಲ ಎನ್ನುತ್ತಿದ್ದಾರೆ. ಅದನ್ನು ಜನವೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.