ಚುನಾವಣೆಗೆ ಬಳಸುವ ಉದ್ದೇಶದಿಂದಲೇ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆಎಸ್‌ಡಿಎಲ್) ನಿಗಮದ ಕೆಲ ರಾಸಾಯನಿಕ ಕಚ್ಚಾ ವಸ್ತುಗಳ ಪೂರೈಕೆದಾರರಿಂದ ಹಣ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರು ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರು (ಮಾ.29) : ಚುನಾವಣೆಗೆ ಬಳಸುವ ಉದ್ದೇಶದಿಂದಲೇ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆಎಸ್‌ಡಿಎಲ್) ನಿಗಮದ ಕೆಲ ರಾಸಾಯನಿಕ ಕಚ್ಚಾ ವಸ್ತುಗಳ ಪೂರೈಕೆದಾರರಿಂದ ಹಣ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರು ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಕೆಎಸ್‌ಡಿಎಲ್(KSDL) ನಿಗಮವು ಉತ್ಪಾದಿಸುವ ಮೈಸೂರ್ ಸ್ಯಾಂಡಲ್ ಸಾಬೂನು(Mysore sandal soap factory) ಸೇರಿದಂತೆ ಇತರೆ ಉತ್ಪನ್ನಗಳ ತಯಾರಿಕೆಗೆ 106 ವಿವಿಧ ಬಗೆಯ ರಾಸಾಯನಿಕ ಕಚ್ಚಾ ವಸ್ತುಗಳನ್ನು ಖರೀದಿಸುತ್ತಿದೆ. ಈ ಕಚ್ಚಾ ವಸ್ತುಗಳನ್ನು ನಿಯಮಿತವಾಗಿ ಸುಮಾರು 6 ರಿಂದ 8 ಕಂಪನಿಗಳು ಪೂರೈಸುತ್ತಿವೆ. ಕೆಲವೊಂದು ವಸ್ತುಗಳನ್ನು ಬಹಿರಂಗ ಹರಾಜು ಹೊರತುಪಡಿಸಿದರೆ ಬಹುತೇಕ ಕಚ್ಚಾ ಸಾಮಾಗ್ರಿಗಳನ್ನು ಈ ಕಂಪನಿಗಳು ಪೂರೈಸುತ್ತಿದ್ದವು. ಈ ಕಂಪನಿಗಳ ಪ್ರತಿನಿಧಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದ ತಂದೆ-ಮಗ, ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನ ಟೆಂಡರ್ ಡೀಲ್ ಕುದುರಿಸಿ ಹಣ ಸಂಗ್ರಹಕ್ಕಿಳಿದಿದ್ದರು ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
Breaking: ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಂಧನ: ಲೋಕಾಯುಕ್ತ ಪೊಲೀಸರಿಂದ ವಶ
ಪ್ರತಿ ದಿನ ಸಂಗ್ರಹವಾದ ಹಣವನ್ನು ಸಂಜಯನಗರದ ಮನೆಯಲ್ಲಿಟ್ಟು ಬಳಿಕ ಆ ಹಣವನ್ನು ದಾವಣಗೆರೆ ಜಿಲ್ಲೆಯ ತಮ್ಮ ಸ್ವಕ್ಷೇತ್ರ ಚನ್ನಗಿರಿಗೆ ಮಾಡಾಳು ವಿರೂಪಾಕ್ಷಪ್ಪ(Madalu virupakshappa) ಸಾಗಿಸುತ್ತಿದ್ದರು. ಈ ಹಣ ವಸೂಲಿಯಲ್ಲಿ ತಂದೆಗೆ ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿದ್ದ ಪ್ರಶಾಂತ್ ಮಾಡಾಳು ಸಾಥ್ ಕೊಟ್ಟಿದ್ದಾರೆ. ಕ್ರೆಸೆಂಟ್ ರಸ್ತೆಯಲ್ಲಿನ ಪ್ರಶಾಂತ್ ಖಾಸಗಿ ಕಚೇರಿಯಲ್ಲೇ ಬಹುತೇಕ ವ್ಯವಹಾರ ನಡೆದಿದ್ದು, ಆ ಕಚೇರಿಗೆ ಕೆಎಸ್‌ಡಿಎಲ್‌ನ ಗುತ್ತಿಗೆದಾರರು ಬ್ಯಾಗ್‌ನಲ್ಲಿ ಹಣ ತಂದು ಕೊಡುತ್ತಿದ್ದರು ಎಂದು ಮೂಲಗಳು ಹೇಳಿವೆ.
ಹೀಗೆ ಸಂಗ್ರಹಿಸಿದ್ದ 8.26 ಕೋಟಿ ರು ಹಣದಲ್ಲಿ ಸಂಜಯನಗರದ ಶಾಸಕರ ಮನೆಯಲ್ಲಿ 6.10 ಕೋಟಿ ರು, ಪ್ರಶಾಂತ್ ಕಚೇರಿಯಲ್ಲಿ 1.62 ಕೋಟಿ ಹಾಗೂ ಚನ್ನಗಿರಿ ಮನೆಯಲ್ಲಿ 16 ಲಕ್ಷ ರು ಹಣ ಪತ್ತೆಯಾಗಿದೆ. ಈಗ ಲಂಚ ನೀಡಿದ ಕಂಪನಿಗಳ ಮುಖ್ಯಸ್ಥರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಲ್ಸರ್ ಬೈಕ್‌ನಲ್ಲಿ 62 ಲಕ್ಷ ಹಣ ತಂದು ಕೊಟ್ಟ
ಲೋಕಾಯುಕ್ತ ದಾಳಿ(Karnataka Lokayukta raids)ಗೂ ಕೆಲ ಕ್ಷಣಗಳ ಮುನ್ನ ಕ್ರೆಸೆಂಟ್ ರಸ್ತೆಯಲ್ಲಿರುವ ಶಾಸಕರ ಪುತ್ರ ಪ್ರಶಾಂತ್ ಕಚೇರಿ ಬಳಿಗೆ ಪಲ್ಸರ್ ಬೈಕ್‌ನಲ್ಲಿ ಬಂದು ಕೆಎಸ್‌ಡಿಎಲ್‌ನ ಕಚ್ಚಾ ಸಾಮಗ್ರಿ ಪೂರೈಕೆದಾರ ಕಂಪನಿಯ ಪ್ರತಿನಿಧಿ 62 ಲಕ್ಷ ರು. ತಂದು ಕೊಟ್ಟು ಹೋಗಿದ್ದ ಎಂದು ಮೂಲಗಳು ಹೇಳಿವೆ.
ತನ್ನ ಕಚೇರಿಯಲ್ಲಿದ್ದ ಸಂಬಂಧಿ ಸಿದ್ದೇಶ್‌ಗೆ, ಕೆಳಗೆ ಒಬ್ಬರು ಅಮೌಂಟ್ ಕೊಡ್ತಾರೆ. ಅದನ್ನು ಇಸ್ಕೊಂಡು ಬಾ ಹೋಗು ಎಂದು ಪ್ರಶಾಂತ್ ಕಳುಹಿಸಿದ್ದರು. ಅಂತೆಯೇ ಕೆಳ ಮಹಡಿಗೆ ಬಂದು ಅಪರಿಚಿತ ವ್ಯಕ್ತಿಯಿಂದ ಹಣ ತುಂಬಿದ್ದ ಬ್ಯಾಗ್ ಅನ್ನು ಪಡೆದು ಪ್ರಶಾಂತ್‌ಗೆ ಸಿದ್ದೇಶ್ ನೀಡಿದ್ದರು. ಅದೇ ವೇಳೆಗೆ ಪ್ರಶಾಂತ್ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮತ್ತೆ ಪರಾರಿ.?: ಲೋಕಾಯುಕ್ತ ಪೊಲೀಸರಿಗೆ ಚಳ್ಳೆ ಹಣ್ಣು!
ಬಂಧನಕ್ಕೂ ಮುನ್ನ ಶಾಸಕರಿಗೆ ಪೊಲೀಸರ ಕರೆ
ಹೈಕೋರ್ಟ್(Karnataka Highcourt) ನಿರೀಕ್ಷಣಾ ಜಾಮೀನು ಆದೇಶ ರದ್ದಾದ ಕೂಡಲೇ ಶಾಸಕ ಮಾಡಾಳು ವಿರೂಪಾಕ್ಷಪ್ಪನವರಿಗೆ ಬೆಂಗಳೂರಿನಿಂದ ಲೋಕಾಯುಕ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿ, ಕೂಡಲೇ ಸ್ಥಳೀಯ (ದಾವಣೆಗೆರೆ) ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಈ ಕರೆಗೆ ಒಪ್ಪಿದ ಶಾಸಕರು, ವಿಚಾರಣೆಗೆ ಬರುವುದಾಗಿ ಹೇಳಿ ಬಳಿಕ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದರು. ಕೂಡಲೇ ಶಾಸಕರ ಮನೆಗೆ ತನಿಖಾ ತಂಡ ತೆರಳಿತು. ಅಷ್ಟರಲ್ಲಿ ಶಾಸಕರು ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಮಾಹಿತಿ ಪಡೆದು ತುಮಕೂರು ಬಳಿ ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.