Karnataka election 2023: ರಾಜ್ಯದಲ್ಲಿದ್ದಾರೆ ಕ್ರಿಮಿನಲ್‌ ಹಿನ್ನೆಲೆಯ 76 ಶಾಸಕರು!

By Kannadaprabha NewsFirst Published Mar 29, 2023, 12:50 AM IST
Highlights

ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಶಾಸಕರ ಕ್ರಿಮಿನಲ್‌ ಪ್ರಕರಣ ಮತ್ತು ಅವರ ಅತಿ ಶ್ರೀಮಂತಿಕೆಯ ಹಿನ್ನೆಲೆಯು ಹುಬ್ಬೇರಿಸುವಂತೆ ಮಾಡಿದೆ.

ಪ್ರಭುಸ್ವಾಮಿ ನಟೇಕರ್‌

 ಬೆಂಗಳೂರು (ಮಾ.29) : ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಶಾಸಕರ ಕ್ರಿಮಿನಲ್‌ ಪ್ರಕರಣ ಮತ್ತು ಅವರ ಅತಿ ಶ್ರೀಮಂತಿಕೆಯ ಹಿನ್ನೆಲೆಯು ಹುಬ್ಬೇರಿಸುವಂತೆ ಮಾಡಿದೆ.

Latest Videos

ಆಡಳಿತಾರೂಢ ಬಿಜೆಪಿ(BJP), ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌(Congress-JDS) ಪಕ್ಷದಲ್ಲಿ ಕ್ರಿಮಿನಲ್‌ ಪ್ರಕರಣ(Criminal case) ಎದುರಿಸುತ್ತಿರುವ ಶಾಸಕರು ಸಾಕಷ್ಟಿದ್ದಾರೆ. ಬಿಜೆಪಿಯಲ್ಲಿಯೇ ಅತಿಹೆಚ್ಚು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಶಾಸಕರು ಇರುವುದು ವಿಶೇಷ. ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾಮ್ಸ್‌ರ್‍ (special Association for Democratic Reforms) ಮತ್ತು ಕರ್ನಾಟಕ ಎಲೆಕ್ಷನ್‌ ವಾಚ್‌ ಸಂಸ್ಥೆ(Karnataka Election Watch Organization)ಗಳು ನಡೆಸಿರುವ ವಿಶ್ಲೇಷಣೆಯಲ್ಲಿ ಈ ಅಂಶ ಗೊತ್ತಾಗಿದೆ. ಇವು ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ ಶಾಸಕರು ಮತ್ತು ಅತಿ ಶ್ರೀಮಂತಿಕೆ ಹಿನ್ನೆಲೆ ಕುರಿತು ಅಧ್ಯಯನ ನಡೆಸಿ ವಿಶ್ಲೇಷಣೆ ಮಾಡಿವೆ. ರಾಜ್ಯದಲ್ಲಿ 224 ಶಾಸಕರ ಪೈಕಿ ಎರಡು ಸ್ಥಾನ ಖಾಲಿ ಇದ್ದು, ಮೂವರು ಶಾಸಕರ ಪ್ರಮಾಣಪತ್ರ ಲಭ್ಯವಾಗದ ಕಾರಣ 219 ಶಾಸಕರ ಮಾಹಿತಿಯನ್ನು ವಿಶ್ಲೇಷಿಸಲಾಗಿದೆ.

ಟಿಪ್ಪು ಕುರಿತ ಬಿಜೆಪಿ ಸುಳ್ಳು ಇತಿಹಾಸಕಾರರಿಂದ ಬಯಲು: ಡಿಕೆಶಿ

219 ಶಾಸಕರ ಪೈಕಿ 76 ಶಾಸಕರು ಕ್ರಿಮಿನಲ್‌ ಪ್ರಕರಣ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 56 ಶಾಸಕರು ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಾಲ್ವರು ಶಾಸಕರ ವಿರುದ್ಧ ಕೊಲೆ ಯತ್ನ ಪ್ರಕರಣಗಳಿವೆ. 118 ಬಿಜೆಪಿ ಶಾಸಕರ ಪೈಕಿ 49 ಮಂದಿ ಕ್ರಿಮಿನಲ್‌ ಮೊಕದ್ದಮೆಗಳನ್ನು ಹೊಂದಿದ್ದಾರೆ. ಈ ಪೈಕಿ 35 ಮಂದಿ ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ನ 67 ಶಾಸಕರ ಪೈಕಿ 16 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ಇದ್ದು, 13 ಮಂದಿ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳು ಇವೆ. ಜೆಡಿಎಸ್‌ನ 30 ಶಾಸಕರ ಪೈಕಿ ಒಂಭತ್ತು ಮಂದಿಯ ವಿರುದ್ಧ ಕ್ರಿಮಿನಲ್‌ ಪ್ರಕರಣ ಇದ್ದರೆ, ಎಂಟು ಮಂದಿಯ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳಿವೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳ ವಿರುದ್ಧವೂ ಕ್ರಿಮಿನಲ್‌ ಮೊಕದ್ದಮೆ ಇದೆ ಎಂದು ಸಂಸ್ಥೆಗಳು ಹೇಳಿವೆ.

209 ಶಾಸಕರು ಕೋಟ್ಯಧಿಪತಿಗಳು:

219 ಶಾಸಕರ ಪೈಕಿ 209 ಶಾಸಕರು ಕೋಟ್ಯಧಿಪತಿಗಳಿದ್ದಾರೆ. ಬಿಜೆಪಿಯಲ್ಲಿ 112 ಮಂದಿ, ಕಾಂಗ್ರೆಸ್‌ನಲ್ಲಿ 65 ಮಂದಿ, ಜೆಡಿಎಸ್‌ನಲ್ಲಿ 28 ಮಂದಿ ಮತ್ತು ನಾಲ್ವರು ಸ್ವತಂತ್ರ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಕೋಟ್ಯಧಿಪತಿಗಳ ಪೈಕಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್‌ ಅವರು ಅತಿ ಶ್ರೀಮಂತರಾಗಿದ್ದಾರೆ. 1015 ಕೋಟಿ ರು. ಮೌಲ್ಯದ ಆಸ್ತಿಯನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ನ ಮೂವರು ಸಹ ಅತಿ ಶ್ರೀಮಂತರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಟ್ಟು 840 ಕೋಟಿ ರು. ಆಸ್ತಿಯ ಮೌಲ್ಯ ಹೊಂದಿದ್ದರೆ, ಶಾಸಕ ಬೈರತಿ ಸುರೇಶ್‌ ಒಟ್ಟು 416 ಕೋಟಿ ರು. ಆಸ್ತಿ ಮೌಲ್ಯ ಹೊಂದಿದ್ದಾರೆ. ಎಂ.ಕೃಷ್ಣಪ್ಪ ಒಟ್ಟು 236 ಕೋಟಿ ರು. ಆಸ್ತಿಯ ಮೌಲ್ಯ ಹೊಂದುವ ಮೂಲಕ ಅತಿ ಶ್ರೀಮಂತರ ಸಾಲಿನಲ್ಲಿದ್ದಾರೆ.

ಡಿ.ಕೆ.ಶಿವಕುಮಾರ್‌ ಅತಿ ಹೆಚ್ಚು ಸಾಲ ಹೊಂದಿರುವ ಶಾಸಕ:

ಬಿಜೆಪಿಯ ಹರ್ಷವರ್ಧನ್‌, ಎಸ್‌.ಎ.ರಾಮದಾಸ್‌ ಮತ್ತು ಕಾಂಗ್ರೆಸ್‌ನ ಸೌಮ್ಯ ಅವರು ಕಡಿಮೆ ಆಸ್ತಿಯನ್ನು ಹೊಂದಿರುವ ಶಾಸಕರಾಗಿದ್ದಾರೆ. ಅತಿ ಶ್ರೀಮಂತ ಶಾಸಕರಾಗಿರುವ ಡಿ.ಕೆ.ಶಿವಕುಮಾರ್‌(DK Shivakumar) ಅವರು ಅತಿ ಹೆಚ್ಚು ಸಾಲವನ್ನು ಹೊಂದಿರುವ ಶಾಸಕರೂ ಆಗಿದ್ದಾರೆ. ಒಟ್ಟು 228 ಕೋಟಿ ರು. ಸಾಲವನ್ನು ಅವರು ಹೊಂದಿದ್ದಾರೆ. ಅಲ್ಲದೇ, ಅವರ 11 ಕೋಟಿ ರು. ವಿವಾದಿತ ಆಸ್ತಿಯಾಗಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರು 104 ಕೋಟಿ ರು. ಸಾಲ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು, ಅನಿತಾ ಕುಮಾರಸ್ವಾಮಿ(Anita Kumaraswamy) ಅವರು 96 ಕೋಟಿ ರು. ಸಾಲ ಹೊಂದಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

ಕುಣಿಗಲ್‌ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಗೆಲ್ಲಿಸಿ: ಡಿಕೆಶಿ

ಶಿಕ್ಷಣ ಹಿನ್ನೆಲೆಯನ್ನು ಗಮನಿಸಿದರೆ 73 ಶಾಸಕರು 5ನೇ ತರಗತಿಯಿಂದ 12ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. 140 ಶಾಸಕರು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಹೊಂದಿದ್ದಾರೆ. ಐವರು ಶಾಸಕರು ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಒಬ್ಬರು ಅಕ್ಷರಸ್ಥರು ಎಂದು ಹೇಳಿಕೊಂಡಿದ್ದಾರೆ.

click me!