ಮುಡಾ ಕಚೇರಿಯ ಮೇಲೆ ಇಡಿ ದಾಳಿ ನಿರೀಕ್ಷಿತವಾಗಿದ್ದು, ಕೇಂದ್ರ ಸರ್ಕಾರದ ಇಂತಹ ಬೆದರಿಕೆಯ ತಂತ್ರಕ್ಕೆ ಹೆದರುವುದಿಲ್ಲ. ಕಾನೂನಿನ ಮೂಲಕವೇ ಇದನ್ನು ಎದುರಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ (ಅ.20): ಮುಡಾ ಕಚೇರಿಯ ಮೇಲೆ ಇಡಿ ದಾಳಿ ನಿರೀಕ್ಷಿತವಾಗಿದ್ದು, ಕೇಂದ್ರ ಸರ್ಕಾರದ ಇಂತಹ ಬೆದರಿಕೆಯ ತಂತ್ರಕ್ಕೆ ಹೆದರುವುದಿಲ್ಲ. ಕಾನೂನಿನ ಮೂಲಕವೇ ಇದನ್ನು ಎದುರಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಿಂದಿನಿಂದಲೂ ಇದೇ ಮಾಡುತ್ತಾ ಬಂದಿದೆ. ಜಿಲ್ಲೆಯ ಬಿಜೆಪಿ ನಾಯಕರ ಹಗರಣಗಳು ಒಂದೆರಡಲ್ಲ. ಮುಂದಿನ ದಿನಗಳಲ್ಲಿ ಇದನ್ನು ಬಯಲು ಮಾಡುತ್ತೇವೆ ಎಂದರು.
ಬಿಜೆಪಿ ನಾಯಕರಿಗೆ ಮಾಡಲು ಬೇರೆ ಏನೂ ಕೆಲಸ ಇಲ್ಲ. ಹೀಗಾಗಿ ಮೂಡಾ.. ಮೂಡಾ ಎಂದು ಕನವರಿಸುತ್ತಿದ್ದಾರೆ. ಇವರ ಒತ್ತಡಕ್ಕೆ ಒಳಗಾಗಿ ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಹಲವು ಬಾರಿ ಮುಖ್ಯಮಂತ್ರಿಗಳು ಇಂತಹದಕ್ಕೆಲ್ಲ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಪಠ್ಯದಲ್ಲಿ ಪರಿಸರ ಜಾಗೃತಿ ಅಂಶ ಸೇರ್ಪಡೆ: ಕಲುಷಿತ ನದಿಗಳು ಶುದ್ಧವಾಗಬೇಕಾಗಿದೆ. ಶುದ್ಧ ಕುಡಿಯುವ ನೀರು ನೀಡುವುದು ಸರ್ಕಾರದ ಕರ್ತವ್ಯ. ಸಾರ್ವಜನಿಕರಲ್ಲಿ ಕೂಡ ನದಿ ಮತ್ತು ನೀರಿನ ಶುದ್ಧತೆ ಕುರಿತು ಅರಿವು ಮೂಡಿಸಬೇಕಿದೆ. ಹೀಗಾಗಿ ವಿದ್ಯಾರ್ಥಿ ದಿಶೆಯಲ್ಲಿಯೇ ಅರಿವು ಮೂಡಿಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಠ್ಯಗಳಲ್ಲಿ ಪರಿಸರ ಜಾಗೃತಿ ಅಂಶಗಳನ್ನು ಸೇರಿಸಿ ಸಾಮಾನ್ಯಜ್ಞಾನ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ನಿರ್ಮಲಾ ತುಂಗಾಭದ್ರಾ ಪಾದಯಾತ್ರೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡುತ್ತಿದೆ. ಸರ್ಕಾರದಿಂದ ಇದಕ್ಕೆ ಬೇಕಾದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಅರ್ಧ ವರ್ಷ ಕಳೆದರೂ ಬಿಬಿಎಂಪಿಯ ಮಕ್ಕಳಿಗೆ ಶೂ, ಸಾಕ್ಸ್ ಸಿಕ್ಕಿಲ್ಲ!
ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಮತ್ತು ಮಾನವೀಯತೆಯ ಬಗ್ಗೆ ಅರಿವು ಮೂಡಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಂಸದ ಬಿ.ವೈ.ರಾಘವೇಂದ್ರ ಅವರು ಸಿಎಂ ರಾಜೀನಾಮೆ ಕೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಅಣ್ಣತಮ್ಮ ಇಬ್ಬರು ರಾಜೀನಾಮೆ ಕೇಳುತ್ತಲೇ ಇದ್ದಾರೆ. ಆದರೆ ಪರಿಣಾಮವೇನು ಆಗುವುದಿಲ್ಲ. ಬಿಜೆಪಿಯವರಿಗೆ ಬೇರೆ ಏನೂ ಕೆಲಸವಿಲ್ಲ. ಮಾಧ್ಯಮಮಿತ್ರರು ಕೂಡ ತಮ್ಮಸಮಯ ವ್ಯರ್ಥಮಾಡದೆ, ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಕೇಳಿ ಎಂದರು. ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ, ಮುಂದೆ ಬರುವ ಪಂಚಾಯತ್ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಗೆಲಲ್ಲಿದ್ದು, ಬಿಜೆಪಿಯ ಭಾವನಾತ್ಮಾಕ ರಾಜಕಾರಣಕ್ಕೆ ಇನ್ನೂ ಅವಕಾಶವಿಲ್ಲ ಎಂದು ಹೇಳಿದರು.