
ವರದಿಳ: ಡೆಲ್ಲಿ ಮಂಜು
ನವದೆಹಲಿ, (ಮೇ.26 ) : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಇಡಿ ಪ್ರಕರಣ ಮತ್ತೆ ಸಂಕಷ್ಟ ತಂದೊಡ್ಡಿದೆ. 2 ವರ್ಷ 4 ತಿಂಗಳ ಬಳಿಕ ದೆಹಲಿಯ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದರು.
50 ರಿಂದ 55 ಪುಟಗಳ ಚಾರ್ಜ್ ಶೀಟ್ ಜೊತೆಗೆ ಒಂದು ಸಣ್ಣ ಟ್ರಂಕ್ ನಲ್ಲಿ ದಾಖಲೆಗಳನ್ನು ಇಡಿ ಅಧಿಕಾರಿಗಳು ಸಲ್ಲಿಸಿದರು. ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್ 48 ದಿನ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದರು.
ಪ್ರಕರಣದ ಎ1 ಆರೋಪಿ ಡಿಕೆ ಶಿವಕುಮಾರ್ ,
ಎ2 ಸುನೀಲ್ ಶರ್ಮಾ, ಎ3 ಸಚಿನ್ ನಾರಾಯಣ, ಎ4 ಕರ್ನಾಟಕ ಭವನ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಇವರ ಜೊತೆಗೆ ಹಲವು ಆರೋಪಿಗಳ ಹೆಸರು ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪ ಮಾಡಲಾಗಿದೆ. PMLA ಕಾಯ್ದೆ ಮತ್ತು ಸೆಕ್ಷನ್ 120b ಅಡಿ ಆರೋಪ ಹೊರಿಸಲಾಗಿದ್ದು, ಈ ಆರೋಪಗಳ ಮೇಲೆ ಶನಿವಾರ ಬೆಳಿಗ್ಗೆ ಇಡಿ ವಕೀಲರಿಂದ ವಾದ ಮಂಡನೆಯಾಗಲಿದೆ.
Chargesheet Against DK Shivakumar: ಮೋದಿ ವಿರೋಧಿಸಿದ್ರೆ ತುಳೀತಾರೆ, ನಾನು ಬಗ್ಗಲ್ಲ; ಡಿಕೆಶಿ
ಇಡಿ ಹೊರಿಸಿದ್ದ ಆರೋಪಗಳು :
ಡಿ.ಕೆ ಶಿವಕುಮಾರ್ 800 ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರ ಹೆಸರಿನಲ್ಲಿ 200 ಕೋಟಿ ಠೇವಣಿ ಇದೆ. 20ಕ್ಕೂ ಅಧಿಕ ಬ್ಯಾಂಕ್, 317 ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ ಮೂಲಕ ಅಕ್ರಮ ಹಣ ವರ್ಗಾವಣೆ. ಮಗಳ ಹೆಸರಿನಲ್ಲಿ 108 ಕೋಟಿ ಅಕ್ರಮ ವ್ಯವಹಾರ ಪುತ್ರಿಗೆ 48 ಕೋಟಿ ಸಾಲ ಇದೆ, ಆದರೆ ಸಾಲದ ಮೂಲ ತಿಳಿಸಿಲ್ಲ.
ದೆಹಲಿ ನಿವಾಸದ 8.59 ಕೋಟಿ ಹಣಕ್ಕೆ ಲೆಕ್ಕ ಕೊಟ್ಟಿಲ್ಲ . ಡಿ.ಕೆ ಶಿ ಹೆಸರಲ್ಲಿ 24, ಸಂಸದ ಡಿಕೆ ಸುರೇಶ್ ಹೆಸರಲ್ಲಿ 27 , ತಾಯಿ ಹೆಸರಲ್ಲಿ 38 ಆಸ್ತಿಗಳಿವೆ. ಡಿ.ಕೆ ಕುಟುಂಬದ ಬಳಿ ಒಟ್ಟು 300 ಆಸ್ತಿಗಳಿವೆ. ಡಿ.ಕೆ ಶಿವಕುಮಾರ್ ವ್ಯವಹಾರದಲ್ಲಿ ಅಕ್ರಮ ಆಸ್ತಿ ಗಳಿಕೆ ಮತ್ತು ಹವಾಲ ದಂದೆ ನಡೆದಿರುವ ಅನುಮಾನಗಳಿವೆ ಅಂಥ ದೆಹಲಿ ಹೈಕೋರ್ಟ್ ನಲ್ಲಿ ಬೇಲ್ ಅರ್ಜಿಯ ಮೇಲೆ ವಾದ- ಪ್ರತಿವಾದ ನಡೆಯುತ್ತಿದ್ದಾಗ ಇ ಡಿ ಡಿಕೆಶಿವಕುಮಾರ್ ಅವರ ಮೇಲೆ ಆರೋಪ ಮಾಡಿತ್ತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ ಸಂಬಂಧ ದಾಳಿ ನಡೆಸಲಾಗಿತ್ತು. ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ, ಅಹ್ಮದ್ ಪಟೇಲ್ ಗೆಲುವಿನ ಸಲುವಾಗಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಡಿಕೆಶಿ ಕಸ್ಟಡಿಯಲ್ಲಿಟ್ಟ ಸಂದರ್ಭದ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಆದರೆ ದೆಹಲಿಯ ಡಿಕೆಶಿ ನಿವಾಸದಲ್ಲಿ ನಗದು ಲಭ್ಯವಾಗಿತ್ತು. ಈ ಸಂಬಂಧ ಡಿಕೆಶಿ ಅವರನ್ನು ಬಂಧಿಸಲಾಗಿತ್ತು. ಇದೀಗ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲಿ ಶಿವಕುಮಾರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಡಿಕೆಶಿ ಪ್ರತಿಕ್ರಿಯೆ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, "ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವವರನ್ನು ರಾಜಕೀಯವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ. ಒಂದೋ ಅವರಿಗೆ ಶರಣಾಗಬೇಕು ಇಲ್ಲ ಅವರ ಜೊತೆ ಕೈಜೋಡಿಸಬೇಕು, ಇಲ್ಲವಾದಲ್ಲಿ ನಮ್ಮನ್ನು ತುಳಿಯಲು ಯತ್ನಿಸುತ್ತಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ, ಅದಕ್ಕಾಗಿಯೇ ನಾನು ಯಾರಿಗೂ ಹೆದರುವುದಿಲ್ಲ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ," ಎಂದು ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಡಿಕೆ ಶಿವಕುಮಾರ್ ತಮ್ಮ ಮತ್ತು ಸಂಸದ ಡಿಕೆ ಸುರೇಶ್, "ನಮ್ಮ ಮೇಲೆ ಪಿತೂರಿ ನಡೆಯುತ್ತಿದೆ. ದೇಶದಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ಯಾರು ನಿಲ್ಲುತ್ತಾರೋ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಆದರೆ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇವೆ. ಈ ರೀತಿಯ ತಂತ್ರಕ್ಕೆಲ್ಲಾ ಸೋಲುವವರಲ್ಲ ನಾವು," ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.