
ವಿಧಾನಸಭೆ (ಮಾ.07): ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕ್ರಮ ಬದ್ಧವಲ್ಲದ ನಿವೇಶನ ಹಾಗೂ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳುತ್ತಿದ್ದು, 2013ಕ್ಕೆ ಮೊದಲು ಅಥವಾ ನಂತರ ನೋಂದಣಿಯಾದ ಎಲ್ಲಾ ನಿವೇಶನ ಹಾಗೂ ಕಟ್ಟಡಗಳಿಗೂ ಇ-ಖಾತೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಮೇಲುಕೋಟೆ ಸದಸ್ಯ ದರ್ಶನ್ ಪುಟ್ಟಣ್ಣಯ್ಯ, ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 2013ಕ್ಕಿಂತ ಮೊದಲು ನೋಂದಣಿಯಾದ ನಿವೇಶನಗಳಿಗೆ ಇ-ಖಾತಾ ಅಭಿಯಾನ ಮಾಡಲಾಗುತ್ತಿದೆ.
ಆದರೆ 2013ರ ನಂತರ ನೋಂದಣಿಯಾದ ನಿವೇಶನಗಳಿಗೆ ಇ-ಖಾತೆ ಮಾಡದೆ ತಿರಸ್ಕಾರ ಮಾಡುತ್ತಿದ್ದು, ಒಂದೇ ಕಡೆ ಎರಡು ರೀತಿಯ ನಿಯಮ ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸಚಿವರು, ಗ್ರಾಪಂಗಳ ವ್ಯಾಪ್ತಿಯಲ್ಲಿ ಕ್ರಮಬದ್ಧವಲ್ಲದ ನಿವೇಶನಗಳು ಮತ್ತು ಕಟ್ಟಡಗಳಿಗೆ ಇ-ಖಾತಾ ನೀಡಲು ಸರ್ಕಾರ ಬದ್ಧವಾಗಿದೆ.
ಸರ್ಕಾರಿ, ಸ್ಥಳೀಯ ಸಂಸ್ಥೆ, ಶಾಸನಬದ್ಧ ಸಂಸ್ಥೆ, ಅರಣ್ಯ ಭೂಮಿಯನ್ನು ಹೊರತುಪಡಿಸಿ ಉಳಿದ ಖಾಸಗಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿ ತರುತ್ತೇವೆ. ಬಳಿಕ ಸೂಕ್ತ ನಿಯಮಗಳನ್ನು ರೂಪಿಸಿ 2013 ಜೂ.14ರ ಮೊದಲು ಹಾಗೂ ನಂತರ ನೋಂದಣಿಯಾದ ಎಲ್ಲಾ ನಿವೇಶನ, ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ಖಾತೆ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕೇಂದ್ರದಿಂದಲೂ ಪರಿಶಿಷ್ಟರ ಹಣ ಅನ್ಯಉದ್ದೇಶಕ್ಕೆ ಬಳಕೆ: ಸಚಿವ ಪ್ರಿಯಾಂಕ್ ಖರ್ಗೆ
ಎಪಿಎಂಸಿ ತಿದ್ದುಪಡಿ ವಿಧೇಯಕ ಮಂಡನೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ 2025 ಅನ್ನು ಮಂಡಿಸಲಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ತೆಗೆದು ಹಾಕಲಾಗಿದ್ದ ಅಂಶಗಳನ್ನು ಮತ್ತೆ ಸೇರಿಸಿ, ಎಪಿಎಂಸಿಗಳಿಗೆ ಹೆಚ್ಚಿನ ಅಧಿಕಾರ ನೀಡಲು ವಿಧೆಯಕ ಜಾರಿಗೊಳಿಸಲಾಗುತ್ತಿದೆ. ಅದರಂತೆ ಉಪ ಮಾರುಕಟ್ಟೆ ಪ್ರಾಂಗಣ ಅಥವಾ ಮಾರುಕಟ್ಟೆ ಉಪ ಪ್ರಾಂಗಣದಂಥ ಮಾರುಕಟ್ಟೆ ಪ್ರದೇಶಕ್ಕೆ ಮಾರುಕಟ್ಟೆ ಸಮಿತಿಯ ಅಧಿಕಾರ ವ್ಯಾಪ್ತಿ ವಿಸ್ತರಿಸುವುದು, ಉಗ್ರಾಣ ಸೇವಾದಾತನ ಜವಾಬ್ದಾರಿ ನಿಗದಿಪಡಿಸುವ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ. ಜತೆಗೆ ಎಪಿಎಂಸಿಗಳಲ್ಲಿ ಇ-ವಾಣಿಜ್ಯ ವೇದಿಕೆ ಸ್ಥಾಪಿಸುವ ಕುರಿತು ಉಲ್ಲೇಖಿಸಲಾಗಿದೆ. ಸಚಿವ ಶಿವಾನಂದ ಪಾಟೀಲ್ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿಧೇಯಕ ಮಂಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.