ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಡ್ರಗ್ಸ್ ಮಾಫಿಯಾ ಬಗ್ಗೆ ಸ್ಫೋಟಕ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ, (ಸೆ.14): ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಆಳವಾಗಿ ಬೇರೂರಿದ್ದು ಆಗೆದಷ್ಟು ಬೆಳಕಿಗೆ ಬರುತ್ತಿದೆ. ಡ್ರಗ್ಸ್ ಮಾಫಿಯಾದಲ್ಲಿ ಹಣದ ಹೂಡಿಕೆ ಹೆಚ್ಚಾಗಿದೆ ಎಂದು ಸ್ವತಃ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಗೆ ಮಂಗಳವಾರ ಭೇಟಿ ನೀಡಿ ಭಾರತ ರತ್ನ ಸರ್‌ಎಂ.ವಿ ಸಮಾಧಿ ಹಾಗೂ ಪುತ್ಥಳಿಗೆ ಪುಪ್ಪನಮನ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಸಾಗಾಟ, ಮಾರಾಟ ಹಾಗೂ ಬಳಕೆದಾರರ ವಿರುದ್ದ ಕೇಂದ್ರ, ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ವಹಿಸಿ ಸಮಾಜವನ್ನು ಅದರಲ್ಲೂ ಯುವ ಜನಾಂಗವನ್ನು ರಕ್ಷಿಸುವ ಕೆಲಸ ಮಾಡಲಿದೆ ಎಂದರು.
ಡ್ರಗ್ಸ್ ಮಾಫಿಯಾವನ್ನು ಬುಡದ ಸಮೇತ ಕಿತ್ತು ಹಾಕಲು ನಮ್ಮ ಗೃಹ ಇಲಾಖೆ ಸಮರ್ಥವಾಗಿದೆ. ಡ್ರಗ್ಸ್ ಮಾಫಿಯ ಬೆಳೆಯಲು ಯಾವುದೇ ಸರ್ಕಾರ ಕಾರಣವಲ್ಲ. ಮೊದಲನಿಂದಲೂ ಇದು ಬೆಳೆದುಕೊಂಡು ಬಂದಿದ್ದು, ಒಂದು ಹೆಮ್ಮರವಾಗಿ ಇಡೀ ವಿಶ್ವವನ್ನು ವ್ಯಾಪಿಸಿ ಬೆಳೆದು ನಿಂತಿದೆ ಎಂದು ಹೇಳಿದರು.
ಡ್ರಗ್ಸ್ ಮಾಫಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದ ಹೂಡಿಕೆ ಇದೆ. ಅದಕ್ಕೆ ಆಕರ್ಷಣೆ ಆಗುವ ಯುವಕರು ಇದ್ದಾರೆ. ವೈದ್ಯಕೀಯ ಹಾಗೂ ಉನ್ನತ ಶಿಕ್ಷಣ ಇಲಾಖೆಯಿಂದಲೂ ಡ್ರಗ್ಸ್ ಮಾಫಿಯಾ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಿ ಅವರನ್ನು ಸಾಂಸ್ಕೃತಿಕವಾಗಿ ಬೆಳೆಸುವ ಮೂಲಕ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಅಭಿರುಚಿ ಮೂಡಿಸಲಾಗುವುದೆಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.