5ನೇ ಬಾರಿಯೂ ಡಾ.ಜಿ.ಪರಮೇಶ್ವರ್‌ ಸಚಿವ: ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾದ ಪರಂ

By Kannadaprabha News  |  First Published May 21, 2023, 12:30 AM IST

ಕಾಮ್‌ ಅಂಡ್‌ ಕೂಲ್‌ ರಾಜಕಾರಣಿ ಎಂದೇ ಜನಜನಿತರಾಗಿರುವ ಡಾ.ಜಿ.ಪರಮೇಶ್ವರ್‌ ಅವರು ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನಸೆಳೆದಿದ್ದಾರೆ. 


ಉಗಮ ಶ್ರೀನಿವಾಸ್‌

ತುಮಕೂರು (ಮೇ.21): ಕಾಮ್‌ ಅಂಡ್‌ ಕೂಲ್‌ ರಾಜಕಾರಣಿ ಎಂದೇ ಜನಜನಿತರಾಗಿರುವ ಡಾ.ಜಿ.ಪರಮೇಶ್ವರ್‌ ಅವರು ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನಸೆಳೆದಿದ್ದಾರೆ. ತುಮಕೂರು ತಾಲೂಕು ಗೊಲ್ಲಹಳ್ಳಿಯಲ್ಲಿ ಎಚ್‌.ಎಂ. ಗಂಗಾಧರಯ್ಯ ಹಾಗೂ ಗಂಗಮಾಳಮ್ಮ ದಂಪತಿಗೆ 1951 ಆಗಸ್ಟ್‌ 6 ರಂದು ಹುಟ್ಟಿದ ಪರಮೇಶ್ವರ್‌ ಅವರಿಗೆ 72 ವರ್ಷ ವಯಸ್ಸು. ಈವರೆಗೆ 8 ಬಾರಿ ಸ್ಪರ್ಧಿಸಿ 6 ಬಾರಿ ಗೆದ್ದು ಎರಡು ಬಾರಿ ಪರಾಭವಗೊಂಡಿದ್ದಾರೆ. ಒಮ್ಮೆ ಮಧುಗಿರಿ ಮೀಸಲು ಕ್ಷೇತ್ರದಿಂದ ಪರಾಭವಗೊಂಡಿದ್ದರೆ ಮತ್ತೊಮ್ಮೆ ಕೊರಟಗೆರೆ ಮೀಸಲು ಕ್ಷೇತ್ರದಿಂದ ಸೋಲನ್ನು ಅನುಭವಿಸಿದ್ದಾರೆ.

Tap to resize

Latest Videos

ಶಿಕ್ಷಣ: ತಮ್ಮ ಹುಟ್ಟುರಾದ ಗೊಲ್ಲಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡಿದ ಪರಮೇಶ್ವರ್‌ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ತುಮಕೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಕೃಷಿ ವಿವಿಯಲ್ಲಿ ಬಿಎಸ್‌ ಹಾಗೂ ಎಂಎಸ್‌ಸಿ ಪದವಿ ಪಡೆದ ಪರಮೇಶ್ವರ್‌ ಆಸ್ಪ್ರೇಲಿಯಾದ ಅಡಿಲೇಡ್‌ನಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ.

ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್‌

ರಾಜಕೀಯಕ್ಕೆ ಬರಲು ಪ್ರೇರಣೆ ರಾಜೀವ್‌ ಗಾಂಧಿ: ತುಮಕೂರಿನಲ್ಲಿ ಸ್ಥಾಪನೆಯಾಗಿದ್ದ ಸಿದ್ದಾರ್ಥ ಮೆಡಿಕಲ್‌ ಕಾಲೇಜಿಗೆ ಅಂದಿನ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಅವರನ್ನು ಆಹ್ವಾನಿಸಲು ದೆಹಲಿಗೆ ಹೋದಾಗ ರಾಜೀವ್‌ ಅವರು ನೀವೇಕೆ ರಾಜಕೀಯಕ್ಕೆ ಬರಬಾರದು ಎಂದು ಪ್ರಶ್ನಿಸಿ 1989ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿದರು. 1993ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ ಹೆಗ್ಗಳಿಕೆ ಇವರದ್ದು. 1994ರಲ್ಲಿ ಎರಡನೇ ಬಾರಿಗೆ ಮಧುಗಿರಿಯಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು. 1999 ರಲ್ಲಿ ಮತ್ತೆ ಮಧುಗಿರಿಯಲ್ಲಿ ಜಯಗಳಿಸಿದ ಪರಮೇಶ್ವರ್‌ ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ಉನ್ನತ ಶಿಕ್ಷಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯ, ಕಾರ್ಮಿಕ ಇಲಾಖೆ ಮತ್ತು ಸಣ್ಣ ನಿರಾವರಿ ಸಚಿವರಾಗಿ ಕೆಲಸ ನಿರ್ವಹಣೆ. 

2008ರಲ್ಲಿ ಕ್ಷೇತ್ರ ಬದಲಾವಣೆಯಾದ ಹಿನ್ನೆಲೆಯಲ್ಲಿ ಕೊರಟಗೆರೆ ಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. 2010ರಿಂದ 2018ರವೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿರುವ ಪರಮೇಶ್ವರ್‌ 2013ರಲ್ಲಿ ಕೊರಟಗೆರೆ ಸ್ಪರ್ಧೆಮಾಡಿ ಸೋಲು ಅನುಭವಿಸಿದರು. 2014ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಸಚಿವರಾಗಿ ಕಾರ್ಯ ನಿರ್ವಹಿಸಿದರು. 2018ರಲ್ಲಿ ಕೊರಟಗೆರೆ ಕ್ಷೇತ್ರ ಮತ್ತೆ ಶಾಸಕರಾಗಿ ಆಯ್ಕೆಯಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ ಆಯ್ಕೆ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2023ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗಳು: ಪರಮೇಶ್ವರ್‌ ಅವರ ಸೇವೆಯನ್ನು ಗುರುತಿಸಿ 1993ರಲ್ಲಿ ರಾಷ್ಟ್ರೀಯ ಏಕತಾ ಪ್ರಶಸ್ತಿ ಹಾಗೂ ವಿಶಿಷ್ಟಸೇವಾ ನಾಯಕತ್ವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಪಾರ ದೈವ ಭಕ್ತ: ಪರಮೇಶ್ವರ್‌ ಅವರಿಗೆ ಮಠಗಳು, ಸ್ವಾಮೀಜಿಗಳು ಹಾಗೂ ದೈವದ ಮೇಲೆ ಅಪಾರವಾದ ನಂಬಿಕೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಸಾಧು, ಸಂತರ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಾರೆ. ಇದಲ್ಲದೆ ಬುದ್ದನ ತತ್ವದ ಬಗ್ಗೆ ಇವರ ಕುಟುಂಬದವರಿಗೆಲ್ಲಾ ವಿಶೇಷ ಪ್ರೀತಿ. ಸುದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಪರಮೇಶ್ವರ್‌ ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ಉಪಮುಖ್ಯಮಂತ್ರಿಯಾಗಿದ್ದಾರೆ. ಕ್ರೀಡಾಪಟುವೂ ಆಗಿರುವ ಪರಮೇಶ್ವರ್‌ ಅವರು ಅಜಾತಶತೃ.

ಬೀದರ್‌ ಜಿಲ್ಲೆಗೆ 2 ಸಚಿವ ಸ್ಥಾನ​ಗಳ ಸಾಧ್ಯ​ತೆ: ಈಶ್ವರ ಖಂಡ್ರೆ, ರಹೀ​ಮ್‌​ಖಾ​ನ್‌ಗೆ ಮಂತ್ರಿ​ಗಿರಿ?

ಓಟದಲ್ಲಿ ದಾಖಲೆ: ಅತ್ಯುತ್ತಮ ಕ್ರೀಡಾಪಟುವಾಗಿರುವ ಡಾ. ಜಿ.ಪರಮೇಶ್ವರ್‌ ಅವರು ಬೆಂಗಳೂರು ಕೃಷಿ ವಿವಿಯಲ್ಲಿ ನಡೆದ ಅಥ್ಲೆಟಿಕ್‌ನ 100 ಮೀಟರ್‌ ರನ್ನಿಂಗ್‌ ರೇಸ್‌ ಅನ್ನು ಕೇವಲ 10.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವುದರೊಂದಿಗೆ ದಾಖಲೆ ಬರೆದಿದ್ದಾರೆ. ಹಲವಾರು ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.

click me!