ಡಬಲ್‌ ಎಂಜಿನ್‌ ಕಮಿಷನ್‌ 80 ಪರ್ಸೆಂಟ್‌?: ಮಲ್ಲಿಕಾರ್ಜುನ ಖರ್ಗೆ

By Kannadaprabha News  |  First Published Apr 26, 2023, 12:05 PM IST

ಬಿಜೆಪಿಯ ಕಿಸೆಯಲ್ಲೇ ಭ್ರಷ್ಟಾಚಾರ, 40 ಪರ್ಸೆಂಟಿನ ಎಂಜಿನ್‌ ಕೆಟ್ಟು ಹೋಗಿದೆ, ಶೀಘ್ರ ಇನ್ನೊಂದೂ ಕೆಡಲಿದೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  


ಮಂಗಳೂರು(ಏ.26):  ಬಿಜೆಪಿಯವರು ತಮ್ಮದು ಡಬಲ್‌ ಎಂಜಿನ್‌ ಸರ್ಕಾರ ಅಂತಾರೆ. ಒಂದು ಎಂಜಿನಿಗೆ 40 ಪರ್ಸೆಂಟ್‌ಆದರೆ, ಡಬಲ್‌ ಎಂಜಿನ್‌ಗೆ 80 ಪರ್ಸೆಂಟ್‌ ಕಮಿಷನ್ನಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷದಲ್ಲಿ ಯಾವ ಸಾಧನೆ ಮಾಡಿದೆ? ಈಗ ಡಬಲ್‌ ಎಂಜಿನ್‌ ಎನ್ನುತ್ತಿದ್ದಾರೆ. ಡಬಲ್‌ ಎಂಜಿನ್‌ನಲ್ಲಿ 40 ಪಸೆಂಟಿನ ಒಂದು ಎಂಜಿನ್‌ ಕೆಟ್ಟು ಹೋಗಿದೆ. ಅದರ ಬೆನ್ನಲ್ಲೇ ಇನ್ನೊಂದು ಎಂಜಿನ್‌ಕೂಡ ಹಾಳಾಗಲಿದೆ ಎಂದು ವ್ಯಂಗ್ಯವಾಡಿದರು.

ಎಂಎಲ್‌ಎ ಕಳ್ಳರ ಹಾವಳಿ: ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಕನಿಷ್ಠ 150 ಸೀಟ್‌ನ್ನು ಕಾಂಗ್ರೆಸ್‌ಗೆ ಕೊಟ್ಟು ಸ್ಥಿರ ಸರ್ಕಾರ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಅಲ್ಪ ಅಂತರ ಬಂದರೆ ಶಾಸಕರನ್ನು ಕಳ್ಳತನ ಮಾಡುವ ಬಿಜೆಪಿಯ ಹಾವಳಿ ಜಾಸ್ತಿ. ಈಗಾಗಲೇ ಅವರು ಕರ್ನಾಟಕ, ಗೋವಾ, ಮಧ್ಯಪ್ರದೇಶ, ಮಣಿಪುರ ಮತ್ತಿತರ ಕಡೆ ಕಳ್ಳತನ ಮಾಡಿದ್ದಾರೆ. ಐಟಿ, ಇಡಿ, ಸಿಬಿಐಗಳನ್ನು ಇಟ್ಟುಕೊಂಡು ಬೆದರಿಕೆಯೊಡ್ಡಿ ಶಾಸಕರನ್ನು ತಮ್ಮ ಪಕ್ಷಕ್ಕೆ ಕರೆಸಿಕೊಳ್ತಾರೆ. ಅವರ ವಾಶಿಂಗ್‌ಮೆಶಿನ್‌ಗೆ ಹೊಕ್ಕು ಹೊರಬಂದ ಕೂಡಲೆ ಈ ಶಾಸಕರೆಲ್ಲ ಒಮ್ಮಿಂದೊಮ್ಮೆಗೆ ಕ್ಲೀನ್‌ಆಗ್ತಾರೆ ಹೇಗೆ ಎಂದು ಖರ್ಗೆ ಪ್ರಶ್ನಿಸಿದರು.

Tap to resize

Latest Videos

ರಾಹುಲ್‌ ಗಾಂಧಿ ಮುಂದೆ ಮುಖ್ಯಮಂತ್ರಿ ನಿಲುವು ಪ್ರಕಟಿಸಿದ ಮಲ್ಲಿಕಾರ್ಜುನ ಖರ್ಗೆ!

ಬಿಜೆಪಿ ಕಿಸೆಯಲ್ಲೇ ಭ್ರಷ್ಟಾಚಾರ: 

ಬಿಜೆಪಿಯ ಶಾಸಕರು ಅವರ ಸಂಬಂಧಿಕರು ಲಂಚ ತೆಗೆದುಕೊಳ್ಳುವುದನ್ನು ಎಲ್ಲರೂ ನೋಡಿದ್ದಾರೆ. ಅವರ ಶಾಸಕರ ಮೇಲೆಯೇ ಲೋಕಾಯುಕ್ತ ದಾಳಿ ನಡೆದಿದೆ. ಇಷ್ಟೆಲ್ಲ ಆದರೂ ಪ್ರಧಾನಿ ಮೋದಿ ಮಾತ್ರ ಸುಮ್ಮನಿದ್ದಾರೆ. ಬೇರೆ ಪಕ್ಷದಲ್ಲಿ ಇಂಥದ್ದೇನಾದರೂ ನಡೆದರೆ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಭ್ರಷ್ಟಾಚಾರ ಬಿಜೆಪಿಯವರ ಕಿಸೆಯಲ್ಲೇ ಇರುವಾಗ ಬೇರೆಯವರನ್ನು ಟೀಕಿಸುತ್ತೀರಾ ಎಂದರು.

ಖಾನೇವಾಲಾಗಳಿಗೆ ಪ್ರೋತ್ಸಾಹ: 

ಬಿಜೆಪಿಯ 40 ಪರ್ಸೆಂಟ್‌ ಕಮಿಷನ್‌ ದಂಧೆಗೆ ನಾವು ಸಾಕ್ಷಿ ಕೊಡಬೇಕಿಲ್ಲ. ರಾಜ್ಯದ ಗುತ್ತಿಗೆದಾರರ ಎಸೋಸಿಯೇಶನ್‌, ಅನುದಾನಿತ ಶಾಲೆ, ಕಾಲೇಜುಗಳು ಲಿಖಿತವಾಗಿ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ, ರಾಷ್ಟ್ರಪತಿ, ರಾಜ್ಯಪಾಲರು, ಲೋಕಾಯುಕ್ತಕ್ಕೆ ತಿಳಿಸಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ನಾ ಖಾವೂಂಗ ನಾ ಖಾನೇದೂಂಗಾ ಎನ್ನುವ ನರೇಂದ್ರ ಮೋದಿ ಕರ್ನಾಟಕದಲ್ಲಿ ಮಾತ್ರ ಖಾನೇವಾಲಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಎಲ್ಲ ವರ್ಗದ ಜನ ಪ್ರತಿಭಟನೆ ನಡೆಸುತ್ತಿದ್ದರೆ ಮೋದಿ, ಅಮಿತ್‌ ಶಾ ಸುಮ್ಮನಿರೋದು ಯಾಕೆ ಎಂದು ಆಕ್ಷೇಪಿಸಿದರು.

ನಿಮ್ಮ ಸಾಧನೆ ಏನು?: 

ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ. ಹಾಗೆ ಹೇಳುವಾಗ ವಾಜಪೇಯಿ, ಮೊರಾರ್ಜಿ ದೇಸಾಯಿ, ದೇವೇಗೌಡ, ಗುಜ್ರಾಲ್‌ಅಧಿಕಾರದ ಅವಧಿಯನ್ನೇ ಮರೆಯುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಶೇ.16ರಷ್ಟಿದ್ದ ಸಾಕ್ಷರತೆಯ ಪ್ರಮಾಣವನ್ನು ಶೇ.70ಕ್ಕೇರಿಸಿದ್ದು, ಆಹಾರ ಧಾನ್ಯ ಉತ್ಪಾದನೆಯನ್ನು 15 ಮಿ.ಟನ್‌ನಿಂದ 260 ಮಿ.ಟನ್‌ಗೆ ಏರಿಕೆ ಮಾಡಿದ್ದು, ದೇಶಾದ್ಯಂತ ಸಾರ್ವಜನಿಕ ವಲಯದ ಕೈಗಾರಿಕೆಗಳು, ಬಂದರುಗಳು, ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಿದ್ದು ಇತ್ಯಾದಿ ಎಲ್ಲ ಬಗೆಯ ಅಭಿವೃದ್ಧಿ ಸಾಧ್ಯವಾಗಿದ್ದು ಕಾಂಗ್ರೆಸ್‌ನಿಂದ. ಬಿಜೆಪಿ ಸರ್ಕಾರ ಬಂದ ಕಳೆದ 9 ವರ್ಷಗಳಲ್ಲಿ ನೀವೇನು ಮಾಡಿದ್ದೀರಿ ಹೇಳಿ ಎಂದು ಸವಾಲು ಹಾಕಿದರು.

ಕಳೆದ 9 ವರ್ಷಗಳಲ್ಲಿ ಮಂಗಳೂರು ಸೇರಿದಂತೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಭಾಗಗಳಲ್ಲಿ ಎಷ್ಟುಹೂಡಿಕೆ ಮಾಡಿದೆ ಎನ್ನುವುದನ್ನು ಬಿಜೆಪಿ ಸರ್ಕಾರ ಹೇಳಬೇಕು. ಈ ಪ್ರದೇಶಗಳ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಕರ್ನಾಟಕ ಸಂಗ್ರಹಿಸಿ ನೀಡಿದ ಜಿಎಸ್‌ಟಿಯ ಶೇ.10 ಪಾಲನ್ನೂ ವಾಪಸ್‌ ಕೊಟ್ಟಿಲ್ಲ. ಕನಿಷ್ಠ ಪಕ್ಷ ರಾಜ್ಯದಲ್ಲಿ ಹೂಡಿಕೆ ಮಾಡಿ ನಿರುದ್ಯೋಗ ನಿವಾರಣೆ, ಅಭಿವೃದ್ಧಿಗಾದರೂ ಗಮನ ಕೊಡಬೇಕಿತ್ತು. ಅದನ್ನೂ ಮಾಡಿಲ್ಲ ಎಂದು ಖರ್ಗೆ ಹೇಳಿದರು.

ಖರ್ಗೆ ಮುಖ್ಯಮಂತ್ರಿ ಆಗಲೆಂಬ ಕೂಗು ಇದೆ: ಡಿ.ಕೆ.ಶಿವಕುಮಾರ್‌

ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುತ್ತದೋ ಇಲ್ಲವೋ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಇಂಥ ಸಂದರ್ಭದಲ್ಲಿ ಕರ್ನಾಟಕದ ಚುನಾವಣೆ ಅತ್ಯಂತ ಮಹತ್ವದ ಚುನಾವಣೆಯಾಗಲಿದೆ. ಬೆಲೆಏರಿಕೆ, ಭ್ರಷ್ಟಾಚಾರ ಎಲ್ಲದಕ್ಕೂ ಕಡಿವಾಣ ಬೀಳಲಿದೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ಪಣ ತೊಟ್ಟಿದ್ದಾರೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್‌, ಪಕ್ಷದ ಅಭ್ಯರ್ಥಿಗಳಾದ ರಮಾನಾಥ ರೈ, ಯು.ಟಿ. ಖಾದರ್‌, ಜೆ.ಆರ್‌. ಲೋಬೊ, ಎಐಸಿಸಿ ವಕ್ತಾರರಾದ ಚರಣ್‌ಸಿಂಗ್‌ಸಾಪ್ರ, ಶಮಾ ಮೊಹಮ್ಮದ್‌, ಮುಖಂಡರಾದ ಮಂಜುನಾಥ ಭಂಡಾರಿ, ಐವನ್‌ ಡಿಸೋಜ ಮತ್ತಿತರರಿದ್ದರು.

click me!