Karnataka Politics: ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್​? ಸಿದ್ದು ಮುಂದಿನ ನಡೆ ಏನು

Published : May 27, 2026, 10:08 AM IST
Siddaramaiaha and DK Shivakumar

ಸಾರಾಂಶ

ಮೂರು ವರ್ಷಗಳ ಮುಖ್ಯಮಂತ್ರಿ ಖುರ್ಚಿಯ ಗುದ್ದಾಟಕ್ಕೆ ತೆರೆಬಿದ್ದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಸಾಧ್ಯತೆಗಳಿದ್ದು, ಈ ಮಹತ್ವದ ನಿರ್ಧಾರವನ್ನು ಹೈಕಮಾಂಡ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಖುರ್ಚಿಯ ಗುದ್ದಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ನಿನ್ನೆ ನಡೆದ ಹೈವೋಲ್ಟೇಜ್​​ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಕೊನೆಗೂ ಡಿ.ಕೆ.ಶಿವಕುಮಾರ್​ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ನಾಳೆ ಅರ್ಥಾತ್​ ಗುರುವಾರ (ಮೇ 26) ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಹೀಗೆ ಆಗಿದ್ದೇ ಆದಲ್ಲಿ, ಈ ಶುಕ್ರವಾರ, ಡಿಕೆಶಿ ಪಾಲಿಗೆ ಶುಭ ಶುಕ್ರವಾರ ಆಗಲಿದೆ. ಹಲವು ವರ್ಷಗಳಿಂದ ಕಂಡ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಇದಾಗಲೇ ಇಂದು ಮುಖ್ಯಮಂತ್ರಿ ನಿವಾಸ ‘ಕಾವೇರಿ’ಯಲ್ಲಿ ಮಹತ್ವದ ಉಪಹಾರ ಕೂಟ ನಿಗದಿಯಾಗಿದ್ದು, ಸಚಿವರು ಹಾಗೂ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ನಿನ್ನೆ ದೆಹಲಿಯಲ್ಲಿ ನಡೆದ ಸಭೆಯ ಬಳಿಕ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಬೆಂಗಳೂರಿಗೆ ವಾಪಸ್​ ಆಗಿದ್ದರೆ, ಡಿ.ಕೆ.ಶಿವಕುಮಾರ್​ ಸೇರಿ ಇನ್ನು ಕೆಲವು ನಾಯಕರು ದೆಹಲಿಯಲ್ಲಿಯೇ ಇದ್ದರು. ಇಂದು ನಡೆಯುತ್ತಿರುವ ಉಪಾಹಾರ ಕೂಟಕ್ಕೆ ನಸುಕಿನಲ್ಲಿಯೇ ಅವರೆಲ್ಲಾ ಆಗಮಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮುಂದಿನ ನಡೆ ಏನು?

ಮುಖ್ಯಮಂತ್ರಿ ಪದವಿಯಲ್ಲಿದ್ದ ಸಿದ್ದರಾಮಯ್ಯನವರ ಮುಂದಿನ ನಡೆ ಏನು ಎನ್ನುವ ಬಗ್ಗೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಸೃಷ್ಟಿಯಾಗಿದೆ. ಇದಾಗಲೇ ನಾಲ್ವರನ್ನು ಉಪಮುಖ್ಯಮಂತ್ರಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಸಿಎಂ ರೇಸ್​ನಲ್ಲಿ ಇದ್ದ ನಾಲ್ವರ ಹೆಸರು ಡಿಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಇದರ ಮಧ್ಯೆಯೇ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಆದ ಮೇಲೆ ಅವರು ರಾಜಕೀಯದಿಂದ ದೂರ ಉಳಿಯಲಿದ್ದಾರೆಯೆ ಅಥವಾ ಇನ್ನೇನು ಮಾಡಬಹುದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಆದರೆ ದೆಹಲಿಯಲ್ಲಿ ನಡೆದಿರುವ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಯ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವಂತೆ ಮತ್ತು ಮುಂಬರುವ 2029 ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಖಿಲ ಭಾರತ ಮಟ್ಟದಲ್ಲಿ ಪಕ್ಷದ ಸಂಘಟನೆಯ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಹೈಕಮಾಂಡ್ ಪ್ರಸ್ತಾಪಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಮೂರು ವರ್ಷಗಳ ಹಿಂದೆ ಒಪ್ಪಂದ

ಅಷ್ಟಕ್ಕೂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಮೂರು ವರ್ಷಗಳ ಹಿಂದೆಯೇ ಒಪ್ಪಂದವಾಗಿತ್ತು. ಇಬ್ಬರೂ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಸ್ಥಾನ ಏರಬೇಕು ಎನ್ನುವ ಷರತ್ತು ಇತ್ತು. ಆದರೆ ಸಿದ್ದರಾಮಯ್ಯನವರು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿರಲಿಲ್ಲ. ಇದಕ್ಕಾಗಿ ಡಿಕೆಶಿ ಮತ್ತು ಅವರ ಬೆಂಬಲಿಗರು ಸಾಕಷ್ಟು ಶ್ರಮ ವಹಿಸಿದ್ದರೂ, ಪಕ್ಷದ ಒಳಗೆ ಅಸಮಾಧಾನದ ಹೊಗೆಯಾಡುತ್ತಿದ್ದರೂ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಅಧಿಕಾರಾವಧಿ ಪೂರೈಸಲಿದ್ದಾರೆ ಎಂದೇ ಹೇಳುತ್ತಾ ಬರಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಗಪ್​ಚುಪ್​ ಆಗಿ ಎಲ್ಲವೂ ಹೈಕಮಾಂಡ್​ ನಿರ್ಧರಿಸುತ್ತದೆ ಎಂದುಬಿಟ್ಟಿದ್ದರು. ಆದರೆ ಇದೀಗ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಇಳಿಸಲಾಗುತ್ತಿದೆ ಎನ್ನುವ ಮಾತು ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಈ ರೀತಿಯಾದರೆ ಪಕ್ಷಕ್ಕೆ ಮುಜುಗರ ಆಗಬಹುದು ಎನ್ನುವ ಕಾರಣದಿಂದಾಗಿ, ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಹಿನ್ನೆಲೆಯಲ್ಲಿ, ಈ ನಿರ್ಧಾರ ಮಾಡಲಾಗಿದೆ ಎಂದು ಬಿಂಬಿಸಲು ಯತ್ನ ನಡೆಯುತ್ತಿರುವುದಾಗಿ ತಿಳಿದು ಬಂದಿದೆ.

ಒಟ್ಟಿನಲ್ಲಿ ನೂರಾರು ದೇವಸ್ಥಾನಗಳ ಸುತ್ತಾಟ, ಹೋಮ-ಹವನ, ಜ್ಯೋತಿಷಿಗಳ ಮೊರೆ... ಹೀಗೆ ಎಲ್ಲವನ್ನೂ ಮಾಡಿದ್ದ ಡಿ.ಕೆ.ಶಿವಕುಮಾರ್​ ಮತ್ತು ಅವರ ಪತ್ನಿ ಹಾಗೂ ಅವರ ಬೆಂಬಲಿಗರ ಆಸೆ ಈಡೇರುವ ಕಾಲ ಸನ್ನಿಹಿತವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ಘೋಷಣೆ! ಜೂ.18ರ ಮತದಾನ, ಬಿಕೆ ಹರಿಪ್ರಸಾದ್ ಗೆಲ್ಲುತ್ತಾರಾ?
DK Shivakumar: ದೆಹಲಿ ಹೈವೋಲ್ಟೇಜ್ ಸಭೆ ಬಳಿಕ ಎಲ್ಲವೂ ಸಸ್ಪೆನ್ಸ್! ಸಿದ್ದು ರಾತ್ರಿಯೇ ವಾಪಸಾದ್ರೂ ಡಿಕೆಶಿ ದೆಹಲಿಯಲ್ಲೇ ಉಳಿದಿರುವುದೇಕೆ?