
ಬೆಂಗಳೂರು (ಆ.26): 'ನಮಸ್ತೆ ಸದಾ ವತ್ಸಲೇ ಮಾತೃಭೂಮೇ..' ಗೀತೆಯನ್ನು ವಿಧಾನಸಭೆಯಲ್ಲಿ ಹಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧಿಗಳನ್ನು ಕಟ್ಟಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಇದು ಸುದ್ದಿಯಾದ ಬೆನ್ನಲ್ಲಿಯೇ ಮಂಗಳವಾರ ತುರ್ತು ಸುದ್ದಿಗೋಷ್ಠಿ ಕರೆದ ಡಿಕೆ ಶಿವಕುಮಾರ್ ಈ ವಿಚಾರವಾಗಿ ಕ್ಷಮೆ ಕೇಳಲು ಸಿದ್ದ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ಇದು ಇರುಸುಮುರುಸು ತಂದಿದ್ದರೆ, ಬಿಜೆಪಿಗರು ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕನ ಬಾಯಿಂದಲೇ ಆರೆಸ್ಸೆಸ್ ಗೀತೆ ಕೇಳಿ ಖುಷಿಪಟ್ಟಿದ್ದಾರೆ.
ಇದರ ನಡುವೆ ಆರೆಸ್ಸೆಸ್‌ನ ಪ್ರಾರ್ಥನಾ ಗೀತೆ ನಮಸ್ತೆ ಸದಾ ವತ್ಸಲೆ..ಕುರಿತಾಗಿ ಕುತೂಹಲ ಆರಂಭವಾಗಿದೆ. ಸಂಸ್ಕೃತ ಭಾಷೆಯಲ್ಲಿರುವ ಈ ಗೀತೆಯನ್ನು ಮೊದಲು ಹಾಡಿದವರು ಪ್ರಚಾರಕ್ ಯಾದವ್ ರಾವ್ ಜೋಶಿ. 1940ರಂದು ನಾಗ್ಪುರದಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಮೊದಲ ಬಾರಿಗೆ ಈ ಗೀತೆ ಹಾಡಿದ್ದರು. ಇದೇ ಅವಧಿಯಲ್ಲಿ ಪುಣೆಯಲ್ಲಿ ನಡೆದ ಇನ್ನೊಂದು ಸಂಘ ಶಿಕ್ಷಾ ವರ್ಗದಲ್ಲಿ ಆರೆಸ್ಸೆಸ್ ಪ್ರಚಾರಕ ಅನಂತ್ ರಾವ್ ಕಾಳೆ ಅವರಿಂದ ಸಂಘದ ಪ್ರಾರ್ಥನೆಯನ್ನು ಹಾಡಲಾಯಿತು. ಸಂಪೂರ್ಣ ಸಂಸ್ಕೃತದಲ್ಲಿರುವ ಈ ಹಾಡಿನ ಕೊನೆಯ ಸಾಲಿನಲ್ಲಿರುವ ಭಾರತ್ ಮಾತಾ ಕೀ ಜಯ್ ಅನ್ನೋದು ಮಾತ್ರವೇ ಹಿಂದಿ ಭಾಷೆಯಲ್ಲಿದೆ.
ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಈ ಪ್ರಾರ್ಥನೆ ಹಾಡುವುದು ಕಡ್ಡಾಯ. 1940ರಲ್ಲಿ ಡಾ. ಕೆ.ಬಿ.ಹೆಡ್ಗೆವಾರ್ ಮತ್ತು ಮಾಧವ್ ಸದಾಶಿವ ಗೋಲ್ವಾಲ್ಕರ್ ಮತ್ತು ಇತರ ಆರೆಸ್ಸೆಸ್ ನಾಯಕರ ಮಾರ್ಗದರ್ಶನದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾದ ನರಹರಿ ನಾರಾಯಣ ಭಿಡೆ ಅವರು ಈ ಗೀತೆ ಬರೆದಿದ್ದಾರೆ. ಸಾಮಾನ್ಯವಾಗಿ ಪ್ರತಿ ಆರೆಸ್ಸೆಸ್ ಶಾಖೆಯ ಕೊನೆಯಲ್ಲಿ ಈ ಪ್ರಾರ್ಥನೆ ಹಾಡಿ ಮುಗಿಸಲಾಗುತ್ತದೆ.
ನಮಸ್ತೆ ಸದಾ ವತ್ಸಲೇ ಮಾತೃಭೂಮಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸದಸ್ಯರಿಗೆ ಬರೀ ಪ್ರಾರ್ಥನೆ ಗೀತೆಯಲ್ಲ, ಬದಲಾಗಿ ಭಾರತ, ಮಾತೃಭೂಮಿಯ ಬಗ್ಗೆ ಆಳವಾದ ಬೇರೂರಿರುವ ಭಾವನೆಗಳು, ಮೌಲ್ಯಗಳು ಮತ್ತು ಬದ್ಧತೆಯ ಸಾಕಾರ. ಈ ಗೀತೆಯು ಭಾರತ ಮಾತೆಯ ಬಗ್ಗೆ ಭಕ್ತಿ ಮತ್ತು ಅಚಲ ಪ್ರೀತಿಯನ್ನು ಹೊರಹಾಕುತ್ತದೆ, ಇದು RSS ನಿಂತಿರುವ ಮೂಲ ತತ್ವಗಳನ್ನು ಪ್ರತಿಬಿಂಬಿಸುತ್ತದೆ.
ನಮಸ್ತೇ ಸದಾ ವತ್ಸಲೇ ಮಾತೃಭೂಮೇ
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್
ಮಹಾಮಂಗಲೇ ಪುಣ್ಯ ಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ || 1 ||
ಪ್ರಭೋ ಶಕ್ತಿಮನ್ ಹಿಂದುರಾಷ್ಟ್ರಾಂಗಭೂತಾ
ಇಮೇ ಸಾದರಂ ತ್ವಾಂ ನಮಾಮೋವಯಮ್
ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್
ಶುಭಾಮಾಶಿಷಂದೇಹಿ ತತ್ಪೂರ್ತಯೇ
ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್
ಸುಶೀಲಂ ಜಗದ್ಯೇನ ನಮ್ರಂ ಭವೇತ್
ಶ್ರುತಂ ಚೈವ ಯತ್ ಕಂಟಕಾಕೀರ್ಣ ಮಾರ್ಗಮ್
ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್ || 2 ||
ಸಮುತ್ಕರ್ಷನಿಃಶ್ರೇಯಸಸ್ಯೈಕಮುಗ್ರಂ
ಪರಂ ಸಾಧನಂ ನಾಮ ವೀರವ್ರತಮ್
ತದತಃ ಸ್ಫುರತ್ವಕ್ಷಯಾ ಧ್ಯೇಯನಿಷ್ಠಾ
ಹೃದತಃ ಪ್ರಜಾಗರ್ತು ತೀವ್ರಾನಿಶಮ್
ವಿಜೇತ್ರೀ ಚ ನಃ ಸಂಹತಾ ಕಾರ್ಯಶಕ್ತಿರ್
ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್
ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಂ
ಸಮರ್ಥಾ ಭವತ್ವಾಶಿಶಾ ತೇ ಭೃಶಮ್ || 3 ||
ಭಾರತ ಮಾತಾ ಕೀ ಜಯ್
ಗೀತೆಯ ಅನುವಾದ (ಭಾವಾರ್ಥ)
ಓ ಪ್ರೀತಿಯ ಮಾತೃಭೂಮಿ! ನಾನು ಯಾವಾಗಲೂ ನಿಮಗೆ ನಮಸ್ಕರಿಸುತ್ತೇನೆ. ನೀವು ನನ್ನನ್ನು ಸಂತೋಷದಿಂದ ಬೆಳೆಸಿದ್ದೀರಿ.
ಓ ಮಹಾನ್ ಪವಿತ್ರ ಭೂಮಿ! ನನ್ನ ಈ ದೇಹವು ನಿಮ್ಮ ಕೆಲಸಕ್ಕೆ ಸಮರ್ಪಿತವಾಗಲಿ. ನಾನು ನಿಮಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ.
ಸರ್ವಶಕ್ತ ಈಶ್ವರನೇ! ಹಿಂದೂ ರಾಷ್ಟ್ರದ ಪುತ್ರರಾದ ನಾವು, ನಿಮ್ಮನ್ನು ಗೌರವದಿಂದ ನಮಸ್ಕರಿಸುತ್ತೇವೆ. ನಿಮ್ಮ ಕೆಲಸಕ್ಕೆ ನಾವು ಸಜ್ಜಾಗಿದ್ದೇವೆ. ಅದರ ನೆರವೇರಿಕೆಗಾಗಿ ನಮಗೆ ನಿಮ್ಮ ಆಶೀರ್ವಾದವನ್ನು ನೀಡಿ.
ದೇವರೆ ಜಗತ್ತಿನಲ್ಲಿ ಯಾರೂ ಅದನ್ನು ಎಂದಿಗೂ ಸವಾಲು ಮಾಡಲಾಗದಷ್ಟು ಶಕ್ತಿಯನ್ನು ನಮಗೆ ನೀಡಿ, ಇಡೀ ಜಗತ್ತು ತಲೆಬಾಗುವಂತಹ ಶುದ್ಧ ಸ್ವಭಾವವನ್ನು ನಮಗೆ ನೀಡಿ. ನಾವೇ ಸ್ವೀಕರಿಸಿದ ಈ ಮುಳ್ಳಿನ ಹಾದಿ ಸುಲಭವಾಗುವಂತೆ ನಮಗೆ ಅಂತಹ ಜ್ಞಾನವನ್ನು ನೀಡಿ.
ಅತ್ಯುನ್ನತ ಆಧ್ಯಾತ್ಮಿಕ ಸಂತೋಷ ಮತ್ತು ಶ್ರೇಷ್ಠ ಲೌಕಿಕ ಸಮೃದ್ಧಿಯನ್ನು ಸಾಧಿಸಲು ಏಕೈಕ ಅತ್ಯುತ್ತಮ ಸಾಧನವಾದ ಮಹಾ ಧೈರ್ಯದ ಮನೋಭಾವವು ನಮ್ಮಲ್ಲಿ ಹೊರಹೊಮ್ಮುತ್ತಿರಲಿ. ಗುರಿಯತ್ತ ತೀವ್ರವಾದ ಮತ್ತು ಅವಿನಾಭಾವ ಭಕ್ತಿ ನಮ್ಮ ಹೃದಯಗಳಲ್ಲಿ ಯಾವಾಗಲೂ ಜಾಗೃತವಾಗಿರಲಿ.
ಓ ತಾಯಿ, ನಿನ್ನ ಅನುಗ್ರಹದಿಂದ, ನಮ್ಮ ವಿಜಯಶಾಲಿ ಸಂಘಟಿತ ಕಾರ್ಯಪಡೆಯು ನಮ್ಮ ಧರ್ಮವನ್ನು ರಕ್ಷಿಸಲು ಮತ್ತು ಈ ರಾಷ್ಟ್ರವನ್ನು ವೈಭವದ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ.
ಭಾರತ ಮಾತೆಗೆ ಜಯವಾಗಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.